ಧಾರವಾಡ: ದಲಿತರ ಏಳ್ಗೆಗೆ ಶ್ರಮಿಸಿದ ಡಾ|ಬಾಬು ಜಗಜೀವನರಾಮ್ ಸ್ವಾತಂತ್ರ ಹೋರಾಟಗಾರ ಹಾಗೂ ರಾಷ್ಟ್ರೀಯವಾದಿ ಕೂಡ ಆಗಿದ್ದರು ಎಂದು ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ|ಕೆ.ಸದಾಶಿವ ಹೇಳಿದರು.
ಕರ್ನಾಟಕ ವಿವಿಯಲ್ಲಿ ಪ್ರಸಕ್ತ ಸಾಲಿಗೆ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಡಾ|ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಗೋಲ್ಡನ್ ಜ್ಯುಬಿಲಿ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಡಾ|ಬಾಬು ಜಗಜೀವನರಾಮ್ ಅವರ 110 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ|ಬಾಬು ಜಗಜೀವನರಾಮ್ ಇಂಗ್ಲಿಷ್, ಹಿಂದಿ, ಬಂಗಾಳಿ, ಸಂಸ್ಕೃತ, ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು. ಗಾಂಧಿಧೀಜಿ ತಮ್ಮ ಹರಿಜನ ಪತ್ರಿಕೆಯಲ್ಲಿ “ಅಗ್ನಿಯಲ್ಲಿ ಪುಟವಿಟ್ಟ ಚಿನ್ನ’ ಎಂದು ಅವರನ್ನು ಕೊಂಡಾಡಿದ್ದರು. ಪ್ರತಿಯೊಬ್ಬ ವ್ಯಕ್ತಿ ತಮ್ಮ ಜಾತಿಯನ್ನು ಮೀರಿ ಬೆಳೆಯಬೇಕೆಂಬುದು ಅವರ ಆಶಯವಾಗಿತ್ತು ಎಂದರು.
ಮತಾಂತರ ವಿಷಯದಲ್ಲಿ ಡಾ|ಬಿ.ಆರ್ ಅಂಬೇಡ್ಕರ್ ಅವರೊಂದಿಗೆ ತಾತ್ವಿಕ ವಿರೋಧ ಹೊಂದಿದ್ದ ಬಾಬು ಜಗಜೀವನರಾಮ್ ಅವರು ಅಂಬೇಡ್ಕರ್ ಮತಾಂತರವಾಗುವುದನ್ನು ತಡೆಯಲು ಪ್ರಯತ್ನಿಸಿದ್ದರು. ಆದರೆ ದಲಿತರ ಹಕ್ಕುಗಳು ನ್ಯಾಯದ ವಿಷಯದಲ್ಲಿ ಇಬ್ಬರಿಗೂ ಸಾಮ್ಯತೆ ಇತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ|ಪ್ರಮೋದ ಬಿ ಗಾಯಿ ಮಾತನಾಡಿ, ಡಾ|ಬಾಬು ಜಗಜೀವನರಾಮ್ ಭಾರತ ಕಂಡ ಅಪರೂಪದ ನಾಯಕ. ದೇಶದ ವಿವಿಧ ವಿವಿಗಳಲ್ಲಿ ಅವರ ಹೆಸರಿನ ಅಧ್ಯಯನ ಪೀಠಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಮೈಸೂರು ವಿವಿಯಲ್ಲಿ ಡಾ|ಬಾಬು ಜಗಜೀವನರಾಮ್ ಅವರ ಕುರಿತು 12 ಸಂಪುಟಗಳನ್ನು ಹೊರ ತಂದಿರುವ ಪ್ರೊ| ಕೆ.ಸದಾಶಿವ ಅವರನ್ನು ಕುಲಪತಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಕುಲಸಚಿವ ಪ್ರೊ|ಎಮ್.ಎನ್.ಜೋಶಿ ಸ್ವಾಗತಿಸಿದರು. ಮೌಲ್ಯಮಾಪನ ಕುಲಸಚಿವ ಎನ್.ವಾಯ್. ಮಟ್ಟಿಹಾಳ ಪರಿಚಯಿಸಿದರು. ವಿತ್ತಾಧಿಧಿಕಾರಿ ಆರ್.ಎಲ್. ಹೈದ್ರಾಬಾದ ಉಪಸ್ಥಿತರಿದ್ದರು. ಸಂಯೋಜಕ ಪ್ರೊ|ಹರೀಶ ರಾಮಸ್ವಾಮಿ ವಂದಿಸಿದರು.