Advertisement

ಡಾ|ಶಿವಯೋಗಿಸ್ವಾಮಿ ಉಚ್ಚಾಟನೆ ಆಗಲಿ

12:59 PM Apr 28, 2017 | |

ದಾವಣಗೆರೆ: ಪಕ್ಷ ವಿರೋಧಿ ಚಟುವಟಿಕೆ ಆಧರಿಸಿ, ಜಿಲ್ಲೆಯಲ್ಲಿನ ಪಕ್ಷದ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದಾದಲ್ಲಿ ಮೊದಲು ವಿಧಾನ ಪರಿಷತ್‌ ಮಾಜಿ ಸದಸ್ಯ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ ಅವರನ್ನು ಉಚ್ಛಾಟಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್‌ ಜಾಧವ್‌ ಹೇಳಿದ್ದಾರೆ. 

Advertisement

ಶಿವಯೋಗಿ ಸ್ವಾಮಿಯವರು ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿ, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದಿದ್ದಾರೆ. ಇದು ಅವರ ಕಲ್ಪಿತ ಹೇಳಿಕೆ. ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದಾಗ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಪಕ್ಷದಲ್ಲೇ ಇಲ್ಲದವರು, ವಿಪಕ್ಷದಲ್ಲಿದ್ದವರನ್ನು ಕರೆತಂದು ಅಧಿಕಾರ ನೀಡಿದ್ದರು.

ಈಗ ತಮಗೆ ಯಾವುದೋ ಕಾರಣಕ್ಕೆ ಆಗಿರುವ ಅಸಮಾಧಾನವನ್ನು ಈ ರೀತಿ ಕಲ್ಪಿತ ಹೇಳಿಕೆಯೊಂದಿಗೆ ಹೊರ ಹಾಕುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು. ಇಂದು ಜಿಲ್ಲಾ ಬಿಜೆಪಿಯಲ್ಲಿ ಡಾ| ಎ.ಎಚ್‌. ಶಿವಯೋಗಿ ಸ್ವಾಮಿ ಒಬ್ಬರಿಂದಲೇ ಗೊಂದಲಗಳು ಸೃಷ್ಟಿಯಾಗಿವೆ.

ಈ ಹಿಂದೆಯೂ ಅವರು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಪಾಲ್ಗೊಂಡಿರುವುದು ಅಷ್ಟಕಷ್ಟೇ. ಅವರು 2 ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದು ಬಿಜೆಪಿ ಪ್ರಾಬಲ್ಯದ ಕ್ಷೇತ್ರವಾಗಿದ್ದರಿಂದ. ಡಾ| ಶಿವಯೋಗಿ ಸ್ವಾಮಿ ಗೆದ್ದಿದ್ದು. ಬಿಜೆಪಿ ಅಲೆಯಲ್ಲಿ. ಅವರು ಸ್ವತಂತ್ರವಾಗಿ ಕಾರ್ಪೋರೇಷನ್‌ ಚುನಾವಣೆ ಸಹ ಗೆಲ್ಲಲು ಸಾಧ್ಯವಿಲ್ಲ ಎಂದು ವಾಗ್ಧಾಳಿ ನಡೆಸಿದರು. 

2008ರ ಚುನಾವಣೆ ವೇಳೆ ಮಾಯಕೊಂಡ ಕ್ಷೇತ್ರಕ್ಕೆ ತಾಪಂ ಸದಸ್ಯರಾಗಿದ್ದ ಎಂ. ಬಸವರಾಜ ನಾಯ್ಕರನ್ನು ಕರೆತಂದು ಚುನಾವಣೆಗೆ ನಿಲ್ಲಿಸಿ, ಎಂಎಲ್‌ಎ ಮಾಡಿದ್ರು. ನಮ್ಮದೇ ಪಕ್ಷದಲ್ಲಿದ್ದ ಪ್ರೊ| ಲಿಂಗಣ್ಣ, ಪದವೀಧರ ಮಂಜನಾಯ್ಕ ನಿಷ್ಠಾವಂತರಾಗಿರಲಿಲ್ಲ.

Advertisement

ಇನ್ನು ದೂಡಾ ಅಧ್ಯಕ್ಷ ಗಾದಿಗೆ ಸಂಸದರು ನನ್ನ ಹೆಸರು ಹೇಳಿದಾಗ ಪೂರ್ಣ ಅವಧಿ ಬೇಡ. ಅರ್ಧರ್ಧ ಹಂಚೋಣ ಎಂದು ಪಕ್ಷದವರೇ ಅಲ್ಲದ ಮಲ್ಲಿಕಾರ್ಜುನಪ್ಪ ಎಂಬುವರನ್ನು ಅಧ್ಯಕ್ಷರನ್ನಾಗಿ ಮಾಡಿದ್ರು. ಇದು ಅವರ ಪಕ್ಷ ನಿಷ್ಠೆ ಎಂದು ವ್ಯಂಗ್ಯವಾಡಿದರು. 

ಇನ್ನು ಪಾಲಿಕೆಗೆ ನಾಮನಿರ್ದೇಶನ ಸಂದರ್ಭದಲ್ಲಿ ನಾವೇ ನೋಡಿರದ, ಪಕ್ಷದ ಪ್ರಾಥಮಿಕ ಸದಸ್ಯತ್ವ ಸಹ ಹೊಂದಿರದ ಸುಕನ್ಯ ರಾಧಾಸ್ವಾಮಿಯವರನ್ನು ನೇಮಿಸಿದರು. ಅದೇ ರೀತಿ ಡೂಡಾ ಸದಸ್ಯ ಸ್ಥಾನಕ್ಕೆ ಜೆಡಿಎಸ್‌ನಲ್ಲಿದ್ದ ಜಿ. ಶಿವಯೋಗಪ್ಪರನ್ನು ಕರೆ ತಂದು ನೇಮಿಸಿದರು. ಇದು ಪಕ್ಷದ ನಿಷ್ಠಾವಂತರಿಗೆ ಕೊಟ್ಟ ಸ್ಥಾನಮಾನ. 

ಇಂತಹವರಿಂದ ಪಕ್ಷ ಬೆಳೆಯುತ್ತದೆಯಾ ಎಂದು ಅವರು ಪ್ರಶ್ನಿಸಿದರು. ಸಂಸದರ ಚುನಾವಣೆ ವೇಳೆ ಪ್ರಚಾರಕ್ಕೆ ಬರಲಿಲ್ಲ. ಕಾಂಗ್ರೆಸ್‌ ವಿರುದ್ಧ ಯಾವುದೇ ಪ್ರತಿಭಟನೆ ನಡೆಸಿದರೂ ಪಾಲ್ಗೊಳ್ಳುವುದಿಲ್ಲ. ಶಾಮನೂರು ಶಿವಶಂಕರಪ್ಪನವರ ಮನೆ ಬಾಗಿಲಿಗೆ ಹೋಗಿ ತನ್ನ ಸಂಬಂಧಿಕರಿಗೆ ವೈದ್ಯಕೀಯ ಸೀಟು ಕೊಡಿಸುವುದೇ ಇವರ ಕಾಯಕ ಆಗಿದೆ ಎಂದರು. 

ಪಕ್ಷದ ಮುಖಂಡರಾದ ಜಯಪ್ರಕಾಶ್‌ ಕೊಂಡಜ್ಜಿ, ಕೆ.ಎಸ್‌. ಹೇಮಂತಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಎಚ್‌.ಎನ್‌. ಶಿವಕುಮಾರ್‌, ಪಿ.ಸಿ. ಶ್ರೀನಿವಾಸ್‌, ಧನುಷ್‌, ಶಿವನಗೌಡ ಪಾಟೀಲ್‌, ಜಿ. ರಾಜಶೇಖರ್‌ ಸುದ್ದಿಗೋಷ್ಠಿಯಲ್ಲಿದ್ದರು.    

Advertisement

Udayavani is now on Telegram. Click here to join our channel and stay updated with the latest news.

Next