ಶನಿವಾರಸಂತೆ: ನಿಸ್ವಾರ್ಥ ಸೇವಾ ಮನೋಭಾವನೆ, ಲೋಕಪಾಲನಾ ಚಿಂತನೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗಿ ತುಂಬು ಜೀವನ ನಡೆಸಬಹುದು ಎಂದು ಯಸಳೂರು ತೆಂಕಲಗೋಡು ಬ್ರಹನ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಅವರು ಸಮಿಪದ ಹಂಡ್ಲಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ತುಮಕೂರು ಸಿದ್ಧಗಂಗೆ ಮಠದ ಡಾ| ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮ ದಿನಾಚರಣೆ ಮಹೋತ್ಸವ ಹಾಗೂ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ಧಗಂಗೆ ಮಠಾಧೀಶ ಡಾ| ಶಿವಕುಮಾರ ಸ್ವಾಮೀಜಿ ಅವರು ಜಗತ್ತಿಗೆ ಮಾದರಿಯಾದ ಮಹಾನ್ ಪುರುಷರಾಗಿದ್ದಾರೆ, ಶ್ರೀಗಳ ಆದರ್ಶ ಜೀವನ, ನಿಸ್ವಾರ್ಥ ಸೇವಾ ಮನೋ ಭಾವನೆ, ಆಧ್ಯಾತ್ಮಿಕ ಚಿಂತನಾಶಕ್ತಿ, ಸಮಾಜದ ಅಭಿವೃದ್ಧಿ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಂಡಿರು ವುದರಿಂದ ಅವರಿಗೆ 110 ವರ್ಷವಾದರೂ ಆರೋಗ್ಯ ವಂತರಾಗಿದ್ದು, ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದ್ದಾರೆ, ಇಂತಹ ಮಹಾನ್ ಪುರುಷರ ಜನ್ಮದಿನಾಚರಣೆಯನ್ನು ನಾವೆಲ್ಲರೂ ಹೆಮ್ಮೆಯಿಂದ ಆಚರಿಸಬೇಕಾಗುತ್ತದೆ ಎಂದರು. ಡಾ| ಶಿವಕುಮಾರ ಸ್ವಾಮೀಜಿಗಳು ಜಾತಿ, ಧರ್ಮಕ್ಕಿಂತ ಮೀರಿದ ಮಾನವ ಧರ್ಮಕ್ಕೆ ಬೆಲೆ ನೀಡುವಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರೀಗಳ ಆದರ್ಶ ಅಂಶಗಳಲ್ಲಿ ಕೆಲವೊಂದನ್ನು ತಮ್ಮಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು ಎಂದರು.
ತಪೋವನ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಬಹುದೊಡ್ಡ ಸಂಪತ್ತು ಎಂದು ಭಾವಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸಬಹುದು. ಆದರೆ ಇಂದಿನ ಆಧುನಿಕ ಸಮಾಜದಲ್ಲಿ ಜನರು ಹಣ- ಆಸ್ತಿ, ಪ್ರತಿಷ್ಠೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ, ಇದರಿಂದ ಆರೋಗ್ಯ ಕೆಟ್ಟು ಬಹುಬೇಗ ಕಾಲವಾಗುತ್ತಾರೆ, ಇಂತಹ ಮನೋಭಾವನೆಯಿಂದ ಹೊರಬಂದು ದುಶ್ಚಟಗಳಿಂದ ದೂರವಾಗಿ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು, ಸಿದ್ಧಗಂಗೆ ಶ್ರೀಗಳ ಆದರ್ಶಗಳನ್ನು ಪಾಲನೆ ಮಾಡಿಕೊಂಡು ಆರೋಗ್ಯವಂತರಾಗಿ ಸಮಾಜದಲ್ಲಿ ಜೀವನ ನಡೆಸಬೇಕೆಂದರು.
ಮುದ್ದಿನಕಟ್ಟೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾಯಂದಿರು ಮಕ್ಕಳಿಗೆ ಮೊದಲ ಗುರುಗಳಾಗುತ್ತಾರೆ, ಈ ನಿಟ್ಟಿನಲ್ಲಿ ಪೋಷ ಕರು ತಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಾಧಾರಿತ ವಿಚಾರ ಗಳನ್ನು ಹೇಳಿಕೊಡಬೇಕು, ದುಶ್ಚಟಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ, ಈ ದಿಸೆಯಲ್ಲಿ ಮಕ್ಕಳು ಮತ್ತು ಯುವಕರು ಡಾ| ಶಿವಕುಮಾರ ಸ್ವಾಮೀಜಿ ಅವರನ್ನು ಪ್ರೇರಣೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂದರು.
ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಸಿದ್ಧಗಂಗೆ ಮಠಾಧೀಶ ಡಾ| ಶಿವಕುಮಾರ ಸ್ವಾಮೀಜಿ ಗಳು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಾಮಾಜಿಕ ಸೇವೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ, ಇಂತಹ ಮಹಾನ್ ಪುರುಷರ 110ನೇ ಜನ್ಮ ದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರ ಮುಂತಾದ ಸಮಾಜ ಸೇವೆ ಕಾರ್ಯವನ್ನು ಮಾಡುವುದರಿಂದ ನಮ್ಮೆಲ್ಲರಿಗೂ ಸಾರ್ಥಕತೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಪ್ರಮುಖರಾದ ಕೆ.ವಿ. ಮಂಜುನಾಥ್, ಶಾಂತವೇರಿ ವಸಂತ್ ಮುಂತಾದವರು ಇದ್ದರು.
ಶ್ರೀಗಳ ಜನ್ಮಮಹೋತ್ಸವದ ಅಂಗವಾಗಿ ಯುವಕ ಸಂಘದ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತು. ಮನೆಹಳ್ಳಿಮಠದ ಮಹಾಂತ ಶಿವಲಿಂಗಸ್ವಾಮೀಜಿ ಅವರು ತಮ್ಮ ರಕ್ತವನ್ನು ದಾನ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.