ಕಲಬುರಗಿ: ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಚಾರ ಮಾಡಿದೆಡೆ ಬಿಜೆಪಿ ಸೋತಿದೆಯಲ್ಲದೇ ಕಲಬುರಗಿಯಿಂದಲೂ ಪ್ರಚಾರ ಶುರು ಮಾಡಿದ್ದರಿಂದ ಕಾಂಗ್ರೆಸ್ ದಿಗ್ವಿಜಯ ಸಾಧಿಸಿತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಟೀಕಿಸಿದರು.
ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ನಡೆದ ಚುನಾವಣೆ ಮುಂಚೆಯೂ ಕಲಬುರಗಿಯಿಂದ ಪ್ರಚಾರ ಶುರು ಮಾಡಿದ್ದರು. ಆದರೆ ಜನ ಉತ್ತರ ಕೊಟ್ಟಿದ್ದರು. ಈಗಲೂ ಪುನರಾವರ್ತನೆ ಯಾಗುತ್ತದೆ ಎಂದರು.
ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ನೀಡಲಿಲ್ಲ. ಹೀಗಾಗಿ ಮುಚ್ಚಿಕೊಳ್ಳಲು ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಒಟ್ಟಾರೆ ಕೇಂದ್ರ ದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನೂ ಕೊಡುಗೆ ನೀಡಿಲ್ಲ. ಶೂನ್ಯ ಕೊಡುಗೆಯಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಹಾಗೂ ಪ್ರಸ್ತುತ ಕೇಂದ್ರ ಸರ್ಕಾರ ಒಂದೇ ಒಂದು ಕಟ್ಟಡ ಕಟ್ಟಲಿಲ್ಲ. ಏಮ್ಸ್ ಕೊಡ್ತಾ ಇಲ್ಲ. ರಾಯಚೂರಲ್ಲಿ ಏಮ್ಸ್ ಸ್ಥಾಪಿಸುವಂತೆ ಹತ್ತಾರು ಸಲ ಮನವಿ ಸಲ್ಲಿಸಿದ್ದರೂ ಕ್ಯಾರೇ ಎನ್ನಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿನ ಭೀಕರ ಬರಗಾಲಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ಪ್ರಸ್ತಾವನೆ ಸಲ್ಲಿಸಿದ್ದರೂ ನಯಾಪೈಸೆ ಪರಿಹಾರ ನೀಡಿಲ್ಲ. ಆದರೆ ರಾಜ್ಯದ 25 ಸಂಸದರು ಪಿಎಂ ಎದುರು ನಿಂತು ಕೇಳದ ಸ್ಥಿತಿಗೆ ತಲುಪುವ ಮಟ್ಟಿಗೆ ತಲುಪಿದ್ದು, ಅಷ್ಟರ ಮಟ್ಟಿಗೆ ಸರ್ವಾಧಿಕಾರ ಧೋರಣೆ ಬೇರೂರಿದೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಟೀಕಿಸಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದನ್ನು ಕಾಂಗ್ರೆಸ್ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರವಾಗುತ್ತೇ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರೇ ಸ್ಪರ್ಧಿಸಬೇಕೆಂಬುದು ತಮ್ಮ ಮನವಿಯಾಗಿದೆ. ಆದರೆ ಸ್ಪರ್ಧೆ ಮಾಡೋದು ಖರ್ಗೆ ಅವರಿಗೆ ಬಿಡಲಾಗಿದೆ ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮುಖಂಡ ಸುಭಾಷ ರಾಠೋಡ ಉಪಸ್ಥಿತರಿದ್ದರು.