Advertisement

Agriculture: ಹುಣಸೂರು-ಎಚ್.ಡಿ.ಕೋಟೆ ಭಾಗ ಅರಶಿನಬೆಳೆಗೆ ಸೂಕ್ತ –ಡಾ.ರಾಮಕೃಷ್ಣನ್

04:48 PM Apr 07, 2023 | Team Udayavani |

ಹುಣಸೂರು: ಮೇಘಾಲಯದ ಲಕಾಡಾಂಗ್ ಅರಿಶಿಣ ತಳಿಯಲ್ಲಿ ಕರ್ಕ್ಯುಮಿನ್ ಶೇ. 7 ರಷ್ಟು ಇರುವುದರಿಂದ ಆ ತಳಿ ಬಿತ್ತನೆಯನ್ನು ಹುಣಸೂರಿನ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿ ಸ್ಥಳಿಯ ವಾತಾವರಣದಲ್ಲಿ ಬೆಳೆಸಿದ್ದು, ರೈತರು ಅಗತ್ಯ ಮಾಹಿತಿ ಪಡೆದುಕೊಳ್ಳುವಂತೆ ತಂಬಾಕು ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಾಮಕೃಷ್ಣ ಮನವಿ ಮಾಡಿದರು.

Advertisement

ನಗರದ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ ಎಸ್.ಇ.ಪಿ.ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಕೃಷಿಕರಿಗೆ ವಾಣಿಜ್ಯ ಬೆಳೆ ಅರಿಶಿಣ ಹೊಸ ತಳಿ ಬಿತ್ತನೆ ಬೀಜ ವಿತರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲವು ಭಾಗದಲ್ಲಿ ಪಾರಂಪರಿಕ ಸೇಲಂ ತಳಿ ಅರಿಶಿಣ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಅರಿಶಿಣ ಮೇಘಾಲಯದಲ್ಲಿ ಬೆಳೆಯುತ್ತಿದ್ದು, ನಂತರದಲ್ಲಿ ತಮಿಳುನಾಡು, ಕರ್ನಾಟಕದ ಸರದಿ ಇದೆ. ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ ದಶಕಗಳಿಂದ ಕೇವಲ ತಂಬಾಕು ಸಂಶೋಧನೆಗೆ ಸೀಮಿತಗೊಂಡಿತ್ತು. ಇತ್ತೀಚಿನ ಕೇಂದ್ರ ಸರಕಾರದ ತೀರ್ಮಾನದಂತೆ ವಾಣಿಜ್ಯ ಮತ್ತು ಸಾಂಬಾರ ಪದಾರ್ಥಗಳ ಕೃಷಿ ಅಭಿವೃದ್ಧಿಗೆ ಒತ್ತು ನೀಡಿ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುವ ಕ್ರಮಕ್ಕೆ ಆಧ್ಯತೆ ನೀಡಲಾಗುತ್ತಿದೆ.

ಇದೀಗ ಸಂಶೋಧನಾ ಕೇಂದ್ರದಲ್ಲಿ ‘ಪ್ರತಿಭಾ ಮತ್ತು ಪ್ರಗತಿ’ ಎಂಬ ಎರಡು ತಳಿ ಅಭಿವೃದ್ಧಿಪಡಿಸಿ ರೈತರಿಗೆ ಬಿತ್ತನೆ ಬೀಜ ವಿತರಿಸಿ ಸ್ಥಳಿಯವಾಗಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ಹುಣಸೂರು ಮತ್ತು ಎಚ್.ಡಿ,ಕೋಟೆ ಪ್ರದೇಶದಲ್ಲಿ ಅರಿಶಿಣ ಬೇಸಾಯಕ್ಕೆ ಉತ್ತಮ ವಾತಾವರಣವಿದ್ದು ರೈತರು ಗುಣಮಟ್ಟದ ಅರಿಶಿಣ ಬೆಳೆದು ಆರ್ಥಿಕವಾಗಿ ಸದೃಢರಾಗಬಹುದೆಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ನೇತ್ರಾವತಿ ಮಾತನಾಡಿ, ಅರಿಶಿಣವನ್ನು ಆಯುರ್ವೇದ ಔಷಧಿ ಸಿದ್ದಪಡಿಸುವ ಕಾರ್ಖಾನೆಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಅರಿಶಿಣದಲ್ಲಿ ಶೇ.7 ಕ್ಕಿಂತ ಹೆಚ್ಚಿನ ಪ್ರಮಾಣದ ಕರ್ಕ್ಯುಮಿನ್ ಇದ್ದರೆ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗಲಿದೆ. ಸಾಂಪ್ರದಾಯಕ ಗೊಬ್ಬರ ಬಳಕೆಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಬೇಸಾಯ ಮಾಡುವುದರಿಂದ ಉತ್ಪಾದನ ವೆಚ್ಚ ತಗ್ಗಿ ಆರ್ಥಿಕ ಲಾಭ ಕಾಣಬಹುದೆಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಮಹದೇವಸ್ವಾಮಿ, ಡಾ.ರಾಜಪ್ಪ, ತಂಬಾಕು ಮಂಡಳಿ ಆರ್.ಎಂ.ಓ.ಶಂಬುಲಿಂಗೇಗೌಡ, ತಂಬಾಕು ಹರಾಜು ಮಾರುಕಟ್ಟೆ ವ್ಯವಸ್ಥಾಪಕ ವಿಜಯಕುಮಾರ್ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next