Advertisement

Dr Raju Naykara: ಶ್ರಮ ಸಂಸ್ಕೃತಿಯ ನಾಯಕ ಡಾ| ರಾಜು ನಾಯ್ಕರ

12:01 PM Nov 01, 2023 | Team Udayavani |

ಬಡತನ ಮೆಟ್ಟಿ ನಿಲ್ಲಬೇಕು. ಸಾಮಾನ್ಯರು ಅಸಾಮಾನ್ಯರಾಗಬೇಕು. ಯಾರ ಊಹೆಗೂ ನಿಲುಕದಂತೆ ಬೆಳೆದು ನಿಲ್ಲಬೇಕು. ಜನಮಾನಸದಲ್ಲಿ ಅಳಿದು ಹೋಗದಿರುವ ಸೇವೆ ಮಾಡಬೇಕು. ಕಾಯಕ, ಸೇವೆ ಮೂಲಕ ತೃಪ್ತಿ ಕಾಣಬೇಕು. ನಿಂದಿಸುವವರ ಎದುರು ನಂದಾದೀಪವಾಗಿ ಬೆಳಗಬೇಕು. ಇದು ಶ್ರಮ ಸಂಸ್ಕೃತಿ ನಾಯಕ, ಕಾಯಕ ಶರಣ ರಾಜು ನಾಯ್ಕರ ಅವರ ಬದುಕಿನ ಚಿತ್ರಣ.

Advertisement

ಹುಟ್ಟುತ್ತಲೇ ಚಿನ್ನದ ಚಮಚ ಇಟ್ಟುಕೊಂಡು ಜನ್ಮ ತಾಳಿಲ್ಲ. ಬಡತನಕ್ಕೆ ಹೆದರಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಹೊಸ ಪ್ರಯತ್ನದ ಮೂಲಕ ಮನ್ವಂತರ ಸೃಷ್ಟಿಸಿದ ರಾಜು ನಾಯ್ಕರ ರಾಜಕೀಯದಲ್ಲಿ ಹೊಸ ಭರವಸೆಯ ನಾಯಕರಾಗಿ ಹೊರ ಹೊಮ್ಮಿದ್ದಾರೆ.

ಬಿಜೆಪಿ ಪಕ್ಷದ ನಿಷ್ಠಾವಂತರ ಕಾರ್ಯಕರ್ತರಾಗಿ, ಡಾ|ವೀರಣ್ಣ ಚರಂತಿಮಠ ಕಟ್ಟಾ ಬೆಂಬಲಿಗರಾಗಿ ಒಂದು ದಶಕಗಳಲ್ಲಿ ಬೆಳೆದ ಪರಿ ಇತರರಿಗೆ ಮಾದರಿಯಾಗಿದೆ.

ದೇಹಿ ಅಂತ ಬಂದವರಿಗೆ ಕೈಲಾದಷ್ಟು ಸಹಾಯ ಹಸ್ತ ಚಾಚುವ ನಾಯ್ಕರ ಮಾನವೀಯತೆಯ ಸಾಕಾರಮೂರ್ತಿ ಎನಿಸಿದ್ದಾರೆ. ಒಮ್ಮೆಯಾದರೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಬೇಕು. ಅವಕಾಶ ಸಿಕ್ಕರೆ ಹಿರಿಯರು, ಮತದಾರರ ಕೃಪೆ ಇದ್ದರೆ ಶಾಸಕರಾಗಬೇಕೆನ್ನುವ ಕನಸು ಕಟ್ಟಿಕೊಂಡಿದ್ದಾರೆ. ಗ್ರಾಮೀಣ-ನಗರ ಸಂಸ್ಕೃತಿಯ ಬದುಕು ಅವರದು.

ಸೇವೆಸಂಘಟನೆಯೇ ಜೀವಾಳ :

Advertisement

ಸೇವೆ, ಸಂಘಟನೆ, ಕಾಯಕವನ್ನೇ ಜೀವಾಳವಾಗಿಸಿಕೊಂಡಿರುವ ರಾಜು ನಾಯ್ಕರ ಅವರು ತಮ್ಮದೇಯಾದ ಹೊಸ ಕನಸು ಕಟ್ಟಿಕೊಂಡಿದ್ದಾರೆ. ಮುಖ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಯಾಗಬೇಕು. ತನ್ಮೂಲಕ ಅನುಮಪ ಸೇವೆ ಸಲ್ಲಿಸುವ ಬಯಕೆ ಅವರದ್ದು. ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಿರುವ ಅವರು ಪಕ್ಷದ ಹಿರಿಯರು ಆಶೀರ್ವಾದಕ್ಕಾಗಿ ಕಾಯುತ್ತಿದ್ದಾರೆ. ಅವಕಾಶ ಸಿಕ್ಕರೆ ಲೋಕಸಭೆ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಡಾ| ವೀರಣ್ಣ ಚರಂತಿಮಠರೇ ರಾಜಕೀಯ ಗಾಡ್‌ ಫಾದರ್‌

ಡಾ|ವೀರಣ್ಣ ಚರಂತಿಮಠ ಎರಡನೇ ಹಂತದ ನಾಯಕರನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅದರಲ್ಲೂ ಶ್ರಮಿಕರಿಗೆ ಅವಕಾಶಗಳ ಮಹಾಪೂರವೇ ಹರಿಸುವ ವ್ಯಕ್ತಿತ್ವ. ಈ ನಿಟ್ಟಿನಲ್ಲಿ ಗಮನ ಹರಿಸಿದಾಗ ಕಣ್ಣಿಗೆ ಬಿದ್ದಿದ್ದು ಡಾ| ರಾಜು ನಾಯ್ಕರ. ಸಾಮಾನ್ಯ ಕಾರ್ಯಕರ್ತರಾಗಿದ್ದ ಅವರನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸುವಂತೆ ಮಾಡಿದರು. ರಾಜು ನಾಯ್ಕರ ಕೂಡಾ ಡಾ|ಚರಂತಿಮಠರ ರಾಜಕೀಯ ಶಕ್ತಿಯಾಗಿ ಬೆಳೆದು ನಿಂತಿದ್ದಾರೆ.

ಕರಕಿ(ಹುಲ್ಲು, ಮೇವು)ಮಾರಾಟ ಮಾಡಿ ಬದುಕು ಸಾಗಿಸಿದ ರಾಜು ನಾಯ್ಕರ ಅವರು ಬೆಳೆದ ರೀತಿ, ಬಾಲ್ಯದಲ್ಲಿ ಅನುಭವಿಸಿದ ಕಷ್ಟ-ನೋವು ಮರೆತಿಲ್ಲ. ತಮ್ಮ 11ನೇ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೆಗಲೇರಿತು. ತಾಯಿ, ಸಹೋದರರು, ಮೂವರು ಸಹೋದರಿಯರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು. ಹಳೇ ಬಾಗಲಕೋಟೆಯ ಅಡವಿಸ್ವಾಮಿ ಮಠದ ಬಳಿ ತರಕಾರಿ ಬೆಳೆದು, ಮಾರಾಟ ಮಾಡಿ ಜೀವನ ಕಟ್ಟಿಕೊಂಡರು. ತಾಯಿ ಸುಶೀಲಾಬಾಯಿ ಪುತ್ರನ ಕೆಲಸಕ್ಕೆ ಸಾಥ್‌ ನೀಡಿದರು. ಕರಕಿ ಕಿತ್ತು ಕೊಡುತ್ತಿದ್ದರು. ಅದನ್ನು ಟಾಂಗಾ ಮಾಲೀಕರಿಗೆ ನೀಡಿ ಅದರಿಂದ ಬರುವ ಹಣದಲ್ಲಿ 1 ಕೆ.ಜಿ. ನುಚ್ಚಕ್ಕಿ, ಒಂದು ಕೆ.ಜಿ. ಕಟ್‌ಬ್ಯಾಳಿ ಮನೆಗೆ ತಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇದು ಬದುಕಿನಲ್ಲಿ ಮಹತ್ವದ ತಿರುವು ಪಡೆಯಲು ಕಾರಣವಾಯಿತು.

ಕಾಯಕಕ್ಕೆ ಬಸವ ಶ್ರೀಗಳ ಕೊಡುಗೆ

ನಿತ್ಯ ಬದುಕಿನ ಬಂಡಿ ಸಾಗಿಸಲು ಹಲವಾರು ರೀತಿ ಶ್ರಮ ಪಡುತ್ತಿದ್ದ ರಾಜು ನಾಯ್ಕರ ಅವರ ಅದೃಷ್ಟದ ಬಾಗಿಲು ತೆರೆದಿದ್ದು ಅಚನೂರದಲ್ಲಿ. ಬಾಲ್ಯದಲ್ಲೇ ಸೆಂಟ್ರಿಂಗ್‌ ಕೆಲಸ ಮಾಡುತ್ತಿದ್ದ ರಾಜು ನಾಯ್ಕರ ಅವರಿಗೆ ಆಗ ಕೈಹಿಡಿದು, ಕೆಲಸ ಕೊಟ್ಟು ಮುನ್ನಡೆಯಲು ನೆರವಾದವರು ಬಾಗಲಕೋಟೆಯ ಲಾಲಸಾಬ್‌ ಬಿಜಾಪುರ. ಒಂದು ದಿನ ಅಚನೂರ ಆಂಜನೇಯ ದೇವಸ್ಥಾನ ಕೆಲಸ ಮಾಡುತ್ತಿರುವಾಗ ಭಾರಿ ಮಳೆ-ಗಾಳಿ ಬರುತ್ತಿತ್ತು. ಆಗ ದೇವಸ್ಥಾನ ಮುಂದಿನ ಬೃಹತ್‌ ಬಸರಿಗಿಡ ನೆಲಕ್ಕಪ್ಪಳಿಸಿತ್ತು. ಅಲ್ಲಿಯೇ ಇದ್ದ ಗುರು ಬಸವಯ್ಯ ಶ್ರೀಗಳು, ರಾಜು ಈ ಮರ ನಿನ್ನ ಭವಿಷ್ಯಕ್ಕೆ ದೊಡ್ಡ ಆಸರೆಯಾಗಲಿದೆ ಎಂದು ಹೇಳಿದರು. ಬಿದ್ದ ಗಿಡವನ್ನು ಒಂದು ವಾರಗಳ ಕಾಲ ಕೊರೆದು ಫಳಿ ತಯಾರಿಸಿದರು. ಬಳಿಕ ಹೊನ್ನಾಕಟ್ಟಿಯ ಜಾವೂರ ಅವರ ಎಲೆಬಳ್ಳಿ ಹೊಲದಿಂದ ಕಟ್ಟಿಗೆ ಕಂಬ ತಂದರು. ಅಲ್ಲಿಂದ ಇವರ ಸೆಂಟ್ರಿಂಗ್‌ ಕೆಲಸ ಶುರು ಮಾಡಿದರು. ಮನೆ, ದೇವಸ್ಥಾನ, ಮಂಗಲ ಭವನ ನಿರ್ಮಾಣಕ್ಕೆ ಹಾಕಿ ಹಾಕಿದರು. ಕಾಯಕಕ್ಕೆ ಹೊಸ ದಿಕ್ಕು ದೊರೆಯಿತು.  ಅಚನೂರಿನ ಬಸವಯ್ಯ ಶ್ರೀಗಳು ಹೇಳಿದಂತೆ ರಾಜು ನಾಯ್ಕರ ಅವರ ಬದುಕಿನಲ್ಲೂ ಆಶಾ ಗೋಪುರ ಬರಲಾರಂಭಿಸಿತು. 1997ರಲ್ಲಿ ನಗರದ ಪ್ರಭಾತ ಬಡಿಗೇರಿ ಅವರ ಕಟ್ಟಿಗೆ ಅಡ್ಡೆಯ ಮಾಲಿಕತ್ವ ವಹಿಸಿಕೊಂಡರು. ನಂತರ ಹಿಂದುರುಗಿ ನೋಡಿದ್ದೇ ಇಲ್ಲ.

ಕಾರ್ಮಿಕ ಸಂಘದ ನಾಯಕತ್ವ

2002ರಲ್ಲಿ ಸೆಂಟ್ರಿಂಗ್‌ ಸಂಘದ ನಾಯಕತ್ವ ವಹಿಸಿಕೊಂಡ ರಾಜು ನಾಯ್ಕರ ಅವರು ಸೆಂಟ್ರಿಂಗ್‌ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಮಿಕರ ಪರವಾಗಿ ಧ್ವನಿಯಾದರು. ಈ ಸಂಘಟನೆಯಲ್ಲಿ ಅವರು ತೋರಿದ ಕಾಳಜಿ, ಶ್ರಮ, ಕಾರ್ಮಿಕರ ಬಗ್ಗೆ ಅವರಿಗಿದ್ದ ಒಲವು ಎಲ್ಲವೂ ಅವರನ್ನು 2007ರಲ್ಲಿ ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷರನ್ನಾಗಿ ಮಾಡಿತು. ಸತತ ಮೂರು ಬಾರಿ ಅದೇ ಸಂಘಟನೆಯ ಅಧ್ಯಕ್ಷರಾಗಿ ಮರು ಆಯ್ಕೆಯಾದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆ

ರಾಜು ನಾಯ್ಕರ ಬಿಜೆಪಿಯ ಬಾಗಲಕೋಟೆ ನಗರ ಮಂಡಲ ಅಧ್ಯಕ್ಷರಾಗಿ ಆಯ್ಕೆಗೊಂಡು ತಾವು ವಹಿಸಿಕೊಂಡ ಜವಾಬ್ದಾರಿ, ಪಕ್ಷದ ಕಾರ್ಯವನ್ನು ಅತ್ಯಂತ ಶಿಸ್ತು, ಸಂಘಟನಾತ್ಮಕವಾಗಿ ನಿಭಾಯಿಸಿದರು. ಡಾ|ಚರಂತಿಮಠ ಅವರೊಂದಿಗೆ ಕೂಡಿ ಹಳೇ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡರಲ್ಲದೇ ನಗರದಲ್ಲಿ ಹೊಸ ಹೊಸ ಕಾರ್ಯಕರ್ತರನ್ನು ಪರಿಚಯಿಸುವ ಕೆಲಸ ಮಾಡಿದರು. ತನ್ಮೂಲಕ ಬಾಗಲಕೋಟೆಯಲ್ಲಿ ಬಿಜೆಪಿ ಶಕ್ತಿ ಮತ್ತಷ್ಟು ಗಟ್ಟಿಗೊಳಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿ ಡಾ|ವೀರಣ್ಣ ಚರಂತಿಮಠ ಶಾಸಕರಾಗಿ ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ವಾಲ್ಮೀಕಿ ಸಭಾದ ನಾಯಕತ್ವ

ನಾಯಕತ್ವ ಗುಣ, ಚಾಣಕ್ಷತೆ ಮೆಚ್ಚಿಸಿದ ಸಮಾಜದ ಬಾಂಧವರು ರಾಜು ನಾಯ್ಕರ ಅವರನ್ನು ಬಾಗಲಕೋಟೆ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು. ಜಿಲ್ಲೆಯಲ್ಲಿ ಸಮಾಜ ಸಂಘಟಿಸಿದರು. ಜತೆಗೆ ಸಮಾಜದ ಬಡ ಜನರಿಗೆ ತಮ್ಮ ಕೈಲಾದ ನೆರವು ನೀಡುತ್ತಲೇ ಶಿಕ್ಷಣಕ್ಕೆ ಒತ್ತು ಕೊಡಲು ಜಾಗೃತಿ ಮೂಡಿಸಿದರು. ಅಲ್ಲದೇ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು. ಇದರ ಪರಿಣಾಮ ಅನೇಕ ಯುವಕ, ಯುವತಿಯರು ಪದವಿ, ವೃತ್ತಿ ಶಿಕ್ಷಣ ಪೂರ್ಣಗೊಳಿಸಲು ನೆರವಾಯಿತು.

ಇನ್ನು ಜಿಲ್ಲೆಯಲ್ಲಿ ಪ್ರವಾಹ, ಕೋವಿಡ್‌ನ‌ಂತಹ ಸಂಕಷ್ಟ ಎದುರಾದಾಗ ಜನರ ನೆರವಿಗೆ ನಿಂತರು. ಎಲ್ಲಿಯೂ ತಾವು ಮಾಡಿದ ಸೇವೆ ಬಗ್ಗೆ ಹಂಚಿಕೊಳ್ಳಲಿಲ್ಲ. ಶಿಕ್ಷಣದಿಂದ ವಂಚಿತರಾಗುತ್ತಿದ್ದ ಬಡ ಮಕ್ಕಳನ್ನು ಗುರುತಿಸಿ, ಮರಳಿ ಶಾಲೆಗೆ ಸೇರಿಸಿದರು. ಪಠ್ಯಪುಸ್ತಕ, ಸಮವಸ್ತ್ರ, ಕಲಿಕಾ ಸಾಮಗ್ರಿ ಹೀಗೆ ಸಂಪೂರ್ಣ ವೆಚ್ಚ ನೀಡಿ ಬೆನ್ನಲುಬಾಗಿ ನಿಂತರು. ಬುದ್ಧ, ಬಸವ, ಅಂಬೇಡ್ಕರ್‌ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ರಾಜು ನಾಯ್ಕರ ಸಂಘ ಪರಿವಾರದ ಕಟ್ಟಾಳು. ಸದಾ ನಗುತ್ತಲೇ ಹಸನ್ಮುಖೀ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ.

ಕಾರ್ಮಿಕರ ಪಾಲಿನ ಧ್ವನಿ

ತಮ್ಮ ಸಂಘಟನಾತ್ಮಕ ಕೆಲಸ, ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕೆಂಬ ರಾಜು ನಾಯ್ಕರ ಅವರ ಹಂಬಲದ ಪರಿಣಾಮ ಇಂದು ಜಿಲ್ಲೆಯ ಸುಮಾರು 8,630ಕ್ಕೂ ಹೆಚ್ಚು ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಡಿ ನೋಂದಾಯಿಸಿ ಅವರಿಗೆ ಸರ್ಕಾರದ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಅಸಂಘಟಿತ ಕಾರ್ಮಿಕರನ್ನು ಸಂಘಟಿತರನ್ನಾಗಿ ಮಾಡಿದ್ದು ಇವರ ಚಾಣಾಕ್ಷ್ಯ ಸಂಘಟನಾತ್ಮಕ ಕೆಲಸಗಳಲ್ಲಿ ಬಹುದೊಡ್ಡ ಕಾರ್ಯವಾಗಿದೆ. ವೃತ್ತಿಯಿಂದ ಪ್ರಥಮ ದರ್ಜೆ ಸಿವಿಲ್‌ ಗುತ್ತಿಗೆದಾರರೂ ಆಗಿರುವ ರಾಜು ನಾಯ್ಕರ ಹತ್ತಾರು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಾಯಕ. ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾ ಅಧ್ಯಕ್ಷರಾಗಿ, ಜಿಲ್ಲಾ ಗೃಹ ನಿರ್ಮಾಣ ಮತ್ತು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ವುಶು ಕ್ರೀಡಾ ಸಂಸ್ಥೆ ಅಧ್ಯಕ್ಷರಾಗಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ನಾಯಕರ ನಾಯಕ ಎಂಬ ದಿನಪತ್ರಿಕೆ ಆರಂಭಿಸಿ ಪತ್ರಿಕೋದ್ಯಮದಲ್ಲೂ ಯಶಸ್ಸು ಕಂಡಿದ್ದಾರೆ. ಬಾಗಲಕೋಟೆ ಅರ್ಬನ್‌ ಕೋ-ಆಪ್‌ ಬ್ಯಾಂಕ್‌, ಬೀಳೂರು ಗುರುಬಸವ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಸೇವೆ, ಕಾಯಕಕ್ಕೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಐದು ಮಕ್ಕಳ ಶಿಕ್ಷಣ ದತ್ತು ಸ್ವೀಕಾರ

ಸಮಾಜ ನೀಡಿದ್ದನ್ನು ಮರಳಿ ಸಮಾಜಕ್ಕೆ ನೀಡು ಎಂಬ ಧ್ಯೇಯ ರಾಜು ನಾಯ್ಕರ ಅನ್ವಯಿಸುತ್ತಿದ್ದಾರೆ. ರಾಜನಹಳ್ಳಿ ವಾಲ್ಮೀಕಿ ಪೀಠದ ಜಗದ್ಗುರುಗಳ ಆಶಯದಂತೆ ಐಎಎಸ್‌, ಕೆಎಎಸ್‌ ಶ್ರೇಣಿಯಲ್ಲಿ ಸಮಾಜದ ಮಕ್ಕಳು ಕೆಲಸ ಮಾಡಬೇಕೆಂಬ ಹಂಬಲಕ್ಕೆ ತಾವೂ ಕೈ ಜೋಡಿಸುತ್ತಿದ್ದಾರೆ. ವಾಲ್ಮೀಕಿ ಸಮಾಜದ ಹಿರಿಯ ನಾಯಕರಾದ ಸತೀಶ ಜಾರಕಿಹೊಳಿ ಅವರು 3 ಜನ, ರಾಜುಗೌಡ 3 ಜನ, ಸಚಿವ ಶ್ರೀರಾಮುಲು ಅವರು 6 ಜನ ಸಮಾಜದ ಮಕ್ಕಳನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ದತ್ತು ಪಡೆದು ಉನ್ನತ ಶಿಕ್ಷಣ ಕೊಡಿಸುತ್ತಿದ್ದಾರೆ. ಅದೇ ರೀತಿ ರಾಜು ನಾಯ್ಕರ ಅವರೂ ಹಾವೇರಿಯ ಚೈತ್ರಾ ಬಿಂಗಿ (ಯುಪಿಎಸ್‌ಸಿ), ಅನುಮಪಾ ಬಿಂಗಿ ಮತ್ತು ರಾಣೆಬೆನ್ನೂರಿನ ನಿರ್ಮಲಾ ದಂಡಿನ ಕೆಎಎಸ್‌ ಅಧ್ಯಯನ ಮಾಡುತ್ತಿದ್ದಾರೆ. ಈ ಮೂವರು ಯುಪಿಎಸ್‌ಸಿ ಹಾಗೂ ಕೆಎಎಸ್‌ ಅಧ್ಯಯನಕ್ಕಾಗಿ ಈವರೆಗೆ ಸುಮಾರು 14 ಲಕ್ಷ ರೂ.ವರೆಗೆ ಶೈಕ್ಷಣಿಕ ನೆರವು ನೀಡಿರುವುದು ಇವರ ಉದಾರ ಗುಣ. ಅಲ್ಲದೇ ತೇರದಾಳದ ಅಶ್ವಿ‌ನಿ ಕಾಟಾಪುರ(ಪಿಯುಸಿ), ಜಮಖಂಡಿಯ ಮುನ್ನಾ ನದಾಫ(ಪಿಯುಸಿ) ಎಂಬ ಮಕ್ಕಳ ಶಿಕ್ಷಣಕ್ಕೂ ನೆರವು ನೀಡುತ್ತಿದ್ದಾರೆ.

ನನಗೆ ಮೊದಲ ದುಡಿಮೆ ಕೊಟ್ಟ ಲಾಲಸಾಬ ಬಿಜಾಪುರ ಅವರು ನನ್ನನ್ನು ಬಾಗಲಕೋಟೆಯಿಂದ ಹುನಗುಂದ ತಾಲೂಕಿನ ಅಂಬಲಿಕೊಪ್ಪಕ್ಕೆ ಕಳುಹಿಸಿದ್ದರು. 1996ರಿಂದ ಎರಡು ವರ್ಷ ಅಂಬಲಿಕೊಪ್ಪದಲ್ಲಿ ಬಸವಣ್ಣನ ಗುಡಿ ಕಟ್ಟಡ ಸೇರಿದಂತೆ ವಿವಿಧ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದೆ. ಆಗ ಅಲ್ಲಿನ ರಾಜಪ್ಪಜ್ಜ ಎಂಬುವರು ಮನೆ ಮನೆಯಿಂದ ಕಜ್ಜಾ ಎಬ್ಬಿಸಿ(ಆಹಾರ ಸಂಗ್ರಹ) ತರುತ್ತಿದ್ದರು. ಅದನ್ನೇ ಊಟ ಮಾಡಿ ಬದುಕು ನಡೆಸುತ್ತಿದ್ದೆ. ಹೀಗಾಗಿ ಅನ್ನದ ಮಹತ್ವ ಇಂದಿಗೂ ನನಗಿದೆ. ಕಳೆದ 2016ರಲ್ಲಿ ಬಾಗಲಕೋಟೆಯಲ್ಲಿ ಭಾರತೀಯ ಸೈನ್ಯ ಭರ್ತಿ ರ್ಯಾಲಿ ನಡೆದಿತ್ತು. ಆಗ ಸಾವಿರಾರು ಯುವಕರು ಸೈನ್ಯ ಭರ್ತಿಗೆ ಬಂದಾಗ ಊಟ-ಆಹಾರವಿಲ್ಲದೇ ಸಮಸ್ಯೆ ಅನುಭವಿಸಿದ್ದರು. ನಾನು ನಿತ್ಯ 3 ಕ್ವಿಂಟಲ್‌ ಅಕ್ಕಿ ಅನ್ನದಾನ ಮಾಡಿದೆ. ಇಂದು ಅವರೆಲ್ಲರೂ ಪಂಜಾಬ್‌, ಹರಿಯಾಣ, ದೆಹಲಿ ವಿವಿಧೆಡೆ ಸೇನೆ ಸೇರಿ ದೇಶ ಸೇವೆ ಮಾಡುತ್ತಿದ್ದು, ಇದು ಬಹಳಷ್ಟು ಧನ್ಯತೆ ಎನಿಸಿದೆ.

ಡಾ|ರಾಜು ವಿ. ನಾಯ್ಕರ, ಜಿಲ್ಲಾ  ಪ್ರಧಾನ ಕಾರ್ಯದರ್ಶಿ, ಬಿಜೆಪಿ.

Advertisement

Udayavani is now on Telegram. Click here to join our channel and stay updated with the latest news.

Next