Advertisement

ಡಾ|ರಾಜಕುಮಾರ ಭಾರತೀಯ ಚಿತ್ರರಂಗ ಕಂಡ ಅದ್ಬುತ ನಟ

11:37 AM Apr 25, 2022 | Team Udayavani |

ಕಾರಟಗಿ: ಡಾ| ರಾಜಕುಮಾರ ಅಭಿಮಾನಿಗಳ ಸಂಘದಿಂದ ಕರ್ನಾಟಕ ರತ್ನ, ಪದ್ಮಭೂಷಣ ಡಾ| ರಾಜಕುಮಾರ ಜನ್ಮದಿನವನ್ನು ರವಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

Advertisement

ಪಟ್ಟಣದ ಡಾ| ರಾಜಕುಮಾರ ಕಲಾ ಮಂದಿರದಲ್ಲಿ ಡಾ| ರಾಜ್‌ ಅಭಿಮಾನಿ ಸಂಘದಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ ವರನಟ ಡಾ| ರಾಜಕುಮಾರ ಹಾಗೂ ಪವರ್‌ ಸ್ಟಾರ್‌ ಪುನೀತರಾಜಕುಮಾರ್‌ ಭಾವಚಿತ್ರಕ್ಕೆ ಅರ್ಚಕ ಮುತ್ತುಸ್ವಾಮಿ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.

ನಂತರ ನೆರೆದಿದ್ದ ಅಭಿಮಾನಿಗಳು ಇಬ್ಬರು ಮಹನೀಯರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಅಭಿಮಾನಿಗಳಿಗೆ ಸಿಹಿ ಹಂಚಿದ್ದಲ್ಲದೇ ಸ್ಥಳೀಯ ಕಡು ಬಡವರಾದ ದಂಪತಿಗೆ ಬಟ್ಟೆ ವಿತರಿಸಿದರು.

ಡಾ| ರಾಜ್‌ ಅಭಿಮಾನಿ ಸಂಘದ ಗೌರವಾಧ್ಯಕ್ಷ ಮಹಾರುದ್ರಯ್ಯ ಸ್ವಾಮಿ ಮಾತನಾಡಿ, ಡಾ| ರಾಜಕುಮಾರ ಕನ್ನಡ ಚಲನಚಿತ್ರರಂಗ ಕಂಡ ಅದ್ಭುತ ನಟ. ಅವರು ಬರೀ ನಟರಷ್ಟೇ ಅಲ್ಲ ರಾಜ್ಯದ ನೆಲ, ಜಲ, ಭಾಷೆಗಾಗಿ ಅವಿರತವಾಗಿ ಶ್ರಮಿಸಿದ ಮಹಾನ್‌ ಕನ್ನಡ ಪ್ರೇಮಿ ಮತ್ತು ಹೋರಾಟಗಾರರು ಹೌದು. ಸುಮಾರು ಐವತ್ತು ವರ್ಷಗಳ ಕಾಲ ಸುಮಾರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಕೋಟ್ಯಂತರ ಕಲಾಪ್ರೇಮಿಗಳ ಹೃದಯ ಗೆದ್ದಿದ್ದರು. ತಮ್ಮ ಚಿತ್ರಗಳ ಮೂಲಕ ಬರೀ ಮನರಂಜನೆ ನೀಡದೇ ಸಾಮಾಜಿಕ ಮೌಲ್ಯಗಳನ್ನು ಸಾರಿದ್ದು, ಅವರ ಚಿತ್ರ ಜೀವನದ ವಿಶೇಷವಾಗಿತ್ತು. ಇಷ್ಟಲ್ಲದೇ ಇತ್ತೀಚಿಗೆ ತಾನೇ ತೀರಿಕೊಂಡ ಅವರ ಕೊನೆಯ ಪುತ್ರ ಕೂಡ ಅಭಿಜಾತ ಕಲಾವಿದರಾಗಿದ್ದರು. ಜೊತೆಗೆ ಅಂಧ, ಅನಾಥ ಮಕ್ಕಳ ಶಿಕ್ಷಣಕ್ಕೆ, ಗೋಶಾಲೆಗಳಿಗೆ ಕೋಟ್ಯಂತರ ರೂಪಾಯಿ ದಾನ ನೀಡಿದ್ದರು. ಇದಕ್ಕೆಲ್ಲ ಸ್ಫೂರ್ತಿ ವರನಟ ಡಾ| ರಾಜಕುಮಾರ ಆಗಿದ್ದರು ಎಂದರು.

ನಂತರ ಶಿಕ್ಷಕ ಸೂಗುರೇಶ ಬಪ್ಪೂರು ಮಾತನಾಡಿ, ಆರು ಕೋಟಿ ಕನ್ನಡಿಗರ ಆರಾಧ್ಯ ದೈವ ಡಾ| ರಾಜಕುಮಾರ ಅವರು ಈ ನಾಡಿಗೆ ನೀಡಿದ ಕೊಡುಗೆ ಅನುಪಮವಾದುದು. ಅವರು ಬರೀ ಚಿತ್ರರಂಗಕ್ಕೆ ಮಾತ್ರ ಸೇವೆ ಸಲ್ಲಿಸಲಿಲ್ಲ. ನಾಡು-ನುಡಿಗೆ ಧಕ್ಕೆ ಬಂದಾಗ ಬೀದಿಗೆ ಇಳಿದು ಹೋರಾಡಿದರು. ಅವರ ಆದರ್ಶ, ತತ್ವಗಳನ್ನು ಇಂದಿನ ಯುವ ಪೀಳಿಗೆ ಅನುಸರಿಸಬೇಕು. ಆ ಮೂಲಕ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.

Advertisement

ಡಾ| ರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಮಹಾರುದ್ರಯ್ಯಸ್ವಾಮಿ, ಅಧ್ಯಕ್ಷ ಯಮನೂರಪ್ಪ ಬೇವಿನಾಳ, ನಾಗರಾಜ್‌ ಬಾಂಢೆ ಅಂಗಡಿ, ವೆಂಕಟೇಶ ಮೂಲಿಮನಿ, ವೆಂಕಟೇಶ ಭೋವಿ, ಅರ್ಜುನ ಸಿಂಗ್‌, ಖಾಜಾಸಾಬ್‌ ಪೇಂಟರ್‌, ವೆಂಕಟೇಶ ಚಿತ್ರಬರಹಗಾರರು, ತಿಪ್ಪಣ್ಣ ಮೂಲಿಮನಿ, ರಾಘವೇಂದ್ರ ಹಡಪದ್‌, ಕೃಷ್ಣಯ್ಯಶ್ರೇಷ್ಠಿ ಇನ್ನಿತರರು.

Advertisement

Udayavani is now on Telegram. Click here to join our channel and stay updated with the latest news.

Next