ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ನೂತನ ಕುಲಪತಿಯನ್ನಾಗಿ ಸಂಶೋಧನಾ ನಿರ್ದೇಶಕರಾಗಿದ್ದ ಡಾ.ಪಿ.ಎಲ್.ಪಾಟೀಲ ಅವರನ್ನು ನೇಮಕಗೊಳಿಸಿ, ರಾಜ್ಯಪಾಲರು ಶುಕ್ರವಾರ ಆದೇಶ ಹೊರಡಿದ್ದಾರೆ.
ಈ ಅವಧಿಯು ಒಟ್ಟು 4 ವರ್ಷಗಳಾಗಿದ್ದು ಅಥವಾ 65 ವರ್ಷ ವಯಸ್ಸಿಗೆ ಸೀಮಿತಗೊಂಡಂತೆ ಇರುತ್ತದೆಂದು ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಂಟಗಣಿ ಗ್ರಾಮದ ಕೃಷಿಕರ ಕುಟುಂಬದಿಂದ ಬಂದಿರುವ ಡಾ.ಪಿ.ಎಲ್.ಪಾಟೀಲ ಅವರು, ಪ್ರಸ್ತುತ ಸಂಶೋಧನಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 35 ವರ್ಷಗಳ ಸುದೀರ್ಘ ಸೇವೆಯನ್ನು ಬೋಧನೆ, ಸಂಶೋಧನೆ ಹಾಗೂ ವಿಸರಣಾ ರಂಗದಲ್ಲಿ ಕೈಗೊಂಡಿದ್ದಾರೆ.
ಸುಜಲಾನಂತಹ ಬೃಹತ್ ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ. ಒಟ್ಟು 17 ಸ್ನಾತಕೋತ್ತರ ಮತ್ತು 5 ಡಾಕ್ಟರಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೇ 118 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು, ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಮಣ್ಣು ಮತ್ತು ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ ಮತ್ತು ಶಿಕ್ಷ್ಷಕರಾಗಿ ಹಲವಾರು ನೂತನ ಸಂಶೋಧನೆಗಳನ್ನು ಕೈಗೊಂಡಿದ್ದಾರೆ.