ವಿಜಯಪುರ: ರಾಜಕೀಯದಲ್ಲಿ ಅಧಿಕಾರದ ಮಹತ್ವಾಕಾಂಕ್ಷೆ ತಪ್ಪಲ್ಲ, ಅದೇ ರೀತಿ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದಿರುವ ಹೇಳಿಕೆಯಲ್ಲಿ ತಪ್ಪೇನಿಲ್ಲ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರೂ ಆಗಿರುವ ಡಾ.ಪರಮೇಶ್ವರ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಹೌದು. ಹೀಗಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದಿರುವುದು ಸಹಜವಾಗಿದೆ ಎಂದರು.
ನಮ್ಮ ಮುಂದಿರುವುದು ಭ್ರಷ್ಟಾಸುರ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯುವ ವಿಷಯದಲ್ಲಿ ಸಂಘರ್ಷವಿದೆಯೇ ಹೊರತು ಮುಖ್ಯಮಂತ್ರಿ ಹುದ್ದೆಗಾಗಿ ಅಲ್ಲ ಎಂದರು.
ರಾಜ್ಯದ ಭ್ರಷ್ಟಾಸುರ ಬಿಜೆಪಿ ಸರ್ಕಾರದಿಂದ ಕಮೀಷನ್ ವಿರುದ್ಧದ ನಮ್ಮ ಸಂಘರ್ಷವನ್ನು ಕರ್ನಾಟಕದ ಪ್ರತಿ ಮನೆಗೆ ಕೊಂಡೊಯ್ಯಲಿದ್ದೇವೆ. ಮಹಿಳಾ ಸಬಲೀಕರಣಕ್ಕಾಗಿ ಕುಟುಂಬದ ಮುಖ್ಯಸ್ಥೆಗೆ 2 ಸಾವಿರ ರೂ., ಉಚಿತ ವಿದ್ಯುತ್ ಯೋಜನೆಗಳಂಥ ಕಾರ್ಯಕ್ರಮಗಳನ್ನು ಜಾರಿಗೆ ತರುವ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಬದ್ಧತೆ ಇದೆ ಎಂದರು.
ಇದಕ್ಕಾಗಿ ಮಹಿಳೆಯರು, ಬಡವರು, ಯುವಕರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಸೇರಿದಂತೆ ಸರ್ವರಿಗೂ ನ್ಯಾಯ ಕೊಡಿಸುವುದಕ್ಕಾಗಿ ಬಿಜೆಪಿ ಭ್ರಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟವಿದೆ ಎಂದರು.
ಬಿಜೆಪಿ ಶೇ.40 ರಷ್ಟು ಕಮೀಷನ್ ಸರ್ಕಾರದಿಂದ ಕರ್ನಾಟಕಕ್ಕೆ ಅಂಟಿರುವ ಕಳಂಕ ತೊಡೆದು ಹಾಕಿ, ಅಭಿವೃದ್ಧಿ ವಿಷಯದಲ್ಲಿ ಮಾದರಿ ಕರ್ನಾಟಕ ಮಾಡುವುದು ಕಾಂಗ್ರೆಸ್ ಪಕ್ಷದ ಗುರಿ. ಭವಿಷ್ಯದಲ್ಲಿ ಕರ್ನಾಟಕ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ದೇಶಕ್ಕೆ ಮಾದರಿ, ಅನುಕರಣೀಯ ಎನ್ನುವಂತೆ ಮಾಡುವುದರತ್ತ ನಮ್ಮ ಚಿತ್ತವಿದೆ ಎಂದರು.