ಬೆಂಗಳೂರು: ನಾಡಿನ ಶ್ರೇಷ್ಠ ವಿದ್ವಾಂಸರಾಗಿದ್ದ ವಿದ್ಯಾ ವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ನಾಡಿನ ಶ್ರೇಷ್ಠ ಆಧ್ಯಾತ್ಮಿಕ ಪ್ರವಚನಕಾರರಾಗಿದ್ದ ಬನ್ನಂಜೆಯವರು ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಪತ್ರಕರ್ತರಾಗಿ ಶ್ರೇಷ್ಠ ಅಂಕಣಕಾರರಾಗಿ ಜನಮನಕ್ಕೆ ಹತ್ತಿರವಾಗಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಶ್ರೀಯುತರು ಸಂಸ್ಕೃತದ ಕೃತಿಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದರು.
ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದ ಇವರು ಚಲನಚಿತ್ರ ಸಂಭಾಷಣಾಕಾರರಾಗಿಯೂ ಹೆಸರಾಗಿದ್ದರು. ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಮುಂತಾದ ಉತ್ತಮ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ಭರಿಸಲಾಗದ ನಷ್ಟವುಂಟಾಗಿದೆ.
ಭಗವಂತನು ಇವರ ನಿಧನದಿಂದ ದುಃಖಿತರಾಗಿರುವ ಕುಟುಂಬ ವರ್ಗ ಹಾಗೂ ಅಭಿಮಾನಿ ಬಳಗಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಶ್ರೀಯುತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಾರಸ್ವತ ಲೋಕದ ಅಗಾಧ ಪ್ರತಿಭೆ ಡಾ. ಬನ್ನಂಜೆ ಗೋವಿಂದಾಚಾರ್ಯ: ಸುರೇಶ್ ಕುಮಾರ್ ಸಂತಾಪ