ಯಾದಗಿರಿ: ವೈದ್ಯಕೀಯ ರಂಗದಲ್ಲಿ ಗಣನೀಯ ಸಾಧನೆ ಮಾಡಿದ ಡಾ| ಎಸ್.ಎಸ್. ನರಸಣಗಿಯವರು ಅಪರೂಪದ ವ್ಯಕ್ತಿತ್ವವುಳ್ಳವರಾಗಿದ್ದು, ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ ಎಂದು ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮಿಗಳು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಡಾ| ಎಸ್.ಎಸ್. ನರಸಣಗಿಯವರ ಜೀವನ ಚರಿತ್ರೆಯ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದ ನರಸಣಗಿ, ಈ ಭಾಗದಲ್ಲಿ ಪ್ರಸಿದ್ಧ ಶಸ್ತ್ರಚಿಕಿತ್ಸಕ ವೈದ್ಯರಾಗಿ ಸಹಸ್ರಾರು ರೋಗಿಗಳನ್ನು ಗುಣಪಡಿಸಿದ ಪುಣ್ಯಾತ್ಮ ಎಂದು ಸ್ಮರಿಸಿದರು. ದಾಸಬಾಳ ಮಠದ ವೀರೇಶ್ವರ ಸ್ವಾಮಿಗಳು ಮಾತನಾಡಿದರು. ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು.
ಹೆಡಗಿಮದ್ರಾ ಮಠದ ಪೀಠಾಧಿಪತಿ ಶಾಂತಚನ್ನಮಲ್ಲಿಕಾರ್ಜುನ ಪಂಡಿತಾರಾದ್ಯ ಶಿವಾಚಾರ್ಯರು ಮಾತನಾಡಿ, ಮೇಲಿನಿಂದ ಧುಮ್ಮಿಕ್ಕುವ ಜಲಧಾರೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಾಗೆಯೇ ಸಾಧನೆಯ ಪಥದಲ್ಲಿ ಸಾಗುವ ಸಾಧಕರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದಕ್ಕೆ ಡಾ| ನರಸಣಗಿಯವರು ಸಾಕ್ಷಿಯಾಗಿದ್ದಾರೆ ಎಂದರು.
ಶಾಸಕ ವೆಂಕಟರೆಡ್ಡಿ ಮುದ್ನಾಳ್ ಮಾತನಾಡಿದರು. ಪ್ರಾಂಶುಪಾಲ ಡಾ| ಸುಭಾಶ್ಚಂದ್ರ ಕೌಲಗಿ ಗ್ರಂಥ ಪರಿಚಯಿಸಿದರು. ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ, ಡಾ| ಬಸವರಾಜ ನರಸಣಗಿ, ಕೃತಿಯ ಲೇಖಕ ಸಾಹಿತಿ ಗಿರಿರಾಜ ಹೊಸಮನಿ ಇದ್ದರು.