Advertisement

ಸಾವಯವ ಕೃಷಿಯೇ ಪರಮೋನ್ನತ ಪರಿಹಾರ: ಡಾ|ಭಾಗವತ್‌

08:07 AM Mar 03, 2021 | Team Udayavani |

ಮಣಿಪಾಲ : ಸಾವಯವ ಕೃಷಿಗೆ ಒತ್ತು ನೀಡುವುದು ಮತ್ತು ಬೆಳೆದ ಉತ್ಪನ್ನಗಳಿಗೆ ಯೋಗ್ಯ ಬೆಲೆ, ಅಗತ್ಯವಾದ ಮಾರುಕಟ್ಟೆ ಕಲ್ಪಿಸುವುದೇ ಕೃಷಿ ಕ್ಷೇತ್ರದ ಸುಧಾರಣೆಗೆ ಇರುವ ಅತ್ಯುತ್ತಮ ಮಾರ್ಗ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ| ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಮಣಿಪಾಲ ಸಮೂಹ ಸಂಸ್ಥೆಗಳಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭ “ಉದಯವಾಣಿ’ ಸಂಪಾದಕೀಯ ಬಳಗದೊಂದಿಗೆ ಅಭಿಪ್ರಾಯವನ್ನು ಹಂಚಿಕೊಂಡರು.

ಸ್ಥಳೀಯ ಕೃಷಿ ಪದ್ಧತಿಯನ್ನು ಮತ್ತಷ್ಟು ಸದೃಢಗೊಳಿಸಬೇಕಾಗಿದೆ. ಜತೆಗೆ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸಬೇಕು. ಕೃಷಿ ಉತ್ಪನ್ನಗಳನ್ನು ಹಾಳಾಗದಂತೆ ಕಾಪಾಡಿ ಕೊಳ್ಳುವ ವ್ಯವಸ್ಥೆ ಮತ್ತು ತಂತ್ರಜ್ಞಾನ ಸ್ಥಳೀಯ ನೆಲೆಯಲ್ಲೇ ಲಭ್ಯವಾಗುವಂತೆ ಮಾಡಬೇಕು. ಇವೆಲ್ಲ ಜತೆಯಾಗಿ ಸಾಧ್ಯವಾದರೆ ಕೃಷಿ ಕ್ಷೇತ್ರ ಉಚ್ಛ್ರಾಯ ಸ್ಥಿತಿಯನ್ನು ತಲುಪಬಲ್ಲುದು ಎಂದು ಡಾ| ಭಾಗವತ್‌ ಪ್ರತಿಪಾದಿಸಿದರು.

ವಿಷಮುಕ್ತ- ಉಪಯುಕ್ತ ಸಾವಯವ ಕೃಷಿ
ವಿಷಮುಕ್ತ – ಉಪಯುಕ್ತ ಸಾವಯವ ಕೃಷಿಗೆ ಒತ್ತು ನೀಡಬೇಕು. ಇದು ಎಲ್ಲರ ಆರೋಗ್ಯವನ್ನೂ ಕಾಪಾಡಲಿದೆ. ಕಾಲೇಜು, ಪ್ರಯೋಗಾಲಯಗಳಲ್ಲಿ ಹೇಳಿಕೊಡುವ ವೈಜ್ಞಾನಿಕತೆ, ಕೌಶಲ ನಮ್ಮ ಪಾರಂಪರಿಕ ಕೃಷಿ ಪದ್ಧತಿಯಲ್ಲಿದೆ. ಆಧುನಿಕ ಕೃಷಿ ತಂತ್ರಜ್ಞಾನ – ವಿಜ್ಞಾನ ಬಳಕೆಗೆ ಬರುವುದಕ್ಕೆ ಮುನ್ನವೇ ನಮ್ಮ ದೇಶದ ಪಾರಂಪರಿಕ ಕೃಷಿ ಪದ್ಧತಿಯಲ್ಲಿ ಈ ಬಗೆಗಿನ ಒಳನೋಟಗಳು ಇದ್ದವು. ಅವು ಪ್ರಾಯೋಗಿಕ ಬಳಕೆಯ ಅನುಭವದ ಮೂಲಕ ಶ್ರುತಪಟ್ಟವು ಆಗಿದ್ದವು. ಹಿಂದೆ ಅತೀ ಹೆಚ್ಚು ಆಹಾರ ಧಾನ್ಯದ ತಳಿಗಳನ್ನು ನಮ್ಮ ದೇಶವೇ ಹೊಂದಿತ್ತು. ಇಂದಿಗೂ ನೂರಾರು ಅತ್ಯುತ್ತಮವಾದ ಮತ್ತು ನಮ್ಮ ದೇಶದ ವಾತಾವರಣಕ್ಕೆ ಒಗ್ಗಿಕೊಳ್ಳಬಲ್ಲ ಆಹಾರ ತಳಿಗಳು ಉಳಿದಿವೆ. ಅವುಗಳನ್ನು ಪುನರುಜ್ಜೀವನಗೊಳಿಸಬೇಕಿದೆ. ಬಿಹಾರ ದಲ್ಲಿ 12 ಎಕ್ರೆ ಸ್ಥಳದಲ್ಲಿ ಜೈವಿಕ ಕೃಷಿ ವಿಧಾನದಲ್ಲಿ ಉತ್ತಮ ಲಾಭ ಗಳಿಸಿದ ಉದಾಹರಣೆಯೂ ಇದೆ. ಇಲ್ಲಿ ಸೀಡ್ಸ್‌ (ಬೀಜ)ನಿಂದ ಹಿಡಿದು ಪೆಸ್ಟಿಸೈಡ್ಸ್‌ (ಕೀಟನಾಶಕ) ವರೆಗೆ ಎಲ್ಲವೂ ದೇಸೀತನದಿಂದ ಕೂಡಿವೆ. ಸಾವಯವ ಕೃಷಿಯನ್ನು ಅನುಸರಿಸುತ್ತಿರುವ ಬಹುತೇಕ ಎಲ್ಲ ರೈತರು ಇಳುವರಿ ವೃದ್ಧಿ – ಆದಾಯ ವೃದ್ಧಿಯ ದುಪ್ಪಟ್ಟು ಪ್ರಯೋಜನವನ್ನು ಅನುಭವಿಸುತ್ತಿದ್ದಾರೆ. ಮಿಶ್ರ ಕೃಷಿಯನ್ನು ನಾವು ಹೆಚ್ಚು ಹೆಚ್ಚು ಅವಲಂಬಿಸಬೇಕು. ಎಷ್ಟೋ ಕಡೆಗಳಲ್ಲಿ ಅತ್ಯಾಧುನಿಕ ಶಿಕ್ಷಣ ಪಡೆದ ಯುವಕರು ಕೃಷಿ ಕಾರ್ಯಕ್ಕೆ ಹಿಂದಿರುಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಡಾ| ಭಾಗವತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next