Advertisement

ಸಿಗ್ಲಿ ರಾಜಕುಮಾರನಂತೆ ಬೆಳೆದೆ

12:30 AM Mar 10, 2018 | |

ಸರಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ, ವಿಶೇಷವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಬಡ ಕಲಾವಿದರಿಗೆ ನೆರವಾಗಿ ಸಂತೃಪ್ತಿ ಪಟ್ಟವರು ಮನು ಬಳಿಗಾರ್‌. ಈಗ ನಾಡಿನ ಅಕ್ಷರ ಲೋಕದ ಸಾಕ್ಷಿಪ್ರಜ್ಞೆಯಂತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು ತಮ್ಮ ಬದುಕ ಪಯಣವನ್ನು ಉದಯವಾಣಿಯೊಂದಿಗಿನ ಮಾತುಕತೆಯಲ್ಲಿ ಹರವಿಟ್ಟಿದ್ದು ಹೀಗೆ…

Advertisement

ನಮ್ಮ ಊರಲ್ಲಿ ಜಾತಿ ಧರ್ಮದ ಭೇದಭಾವವೇ ಇರಲಿಲ್ಲ. ಅಲ್ಲಿ ಕುರುಬರವನೂ ನಮಗೆ ಕಾಕಾ, ತಳವಾರ ಮಹಿಳೆಯೂ ನಮಗೆ ಚಿಗವ್ವ(ಚಿಕ್ಕಮ್ಮ). ನಮ್ಮಪ್ಪ ಎಲ್ಲರಿಗೂ ದೊಡ್ಡಪ್ಪ, ನಮ್ಮಮ್ಮ ದೊಡ್ಡಮ್ಮ. ಆದರೆ ನಗರಕ್ಕೆ ಬಂದ ಮೇಲೆ ಎಲ್ಲರೂ ಅಂಟಿ! ಸ್ವಂತ ಚಿಕ್ಕಮ್ಮನೂ ಆಂಟೀನೇ! ಇಲ್ಲಿ ಚಿಗವ್ವ ಅನ್ನುವ ಪದವೇ ಇಲ್ಲ. ನಮ್ಮ ಕಡೆ ಯಾರಿಗೂ ಹೆಸರೇ ಇಲ್ಲ.ಅಷ್ಟು ಅನ್ಯೋನ್ಯ ಬದುಕು ಅಲ್ಲೆಲ್ಲ.

ನಾನು ಅಖಂಡ ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸಿಗ್ಲಿ ಗ್ರಾಮದ ಪ್ರಗತಿಪರ ರೈತ ಪರಮೇಶ್ವರಪ್ಪ ಅವರ 
ಹನ್ನೊಂದು ಮಕ್ಕಳಲ್ಲಿ ಒಬ್ಬ. ರಾಜ್ಯದ ಸರ್ಕಾರಿ ಸೇವೆಯಲ್ಲಿ ಬಳಿಗಾರ ಹೆಸರು ಕೇಳದವರಿಲ್ಲ ಎನಿಸುತ್ತದೆ. ನಾನು ಕೆಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದರೆ, ತಮ್ಮ ವಿ.ಪಿ. ಬಳಿಗಾರ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ.

ನಮ್ಮ ತಂದೆ ಸಿಗ್ಲಿ ಪರಮೇಶ್ವರಪ್ಪ ದೊಡ್ಡ ಪ್ರಗತಿಪರ ರೈತರು. ಮುಲ್ಕಿ ಪರೀಕ್ಷೆ ಪಾಸಾಗಿದ್ದ ಅವರಿಗೆ ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಇತ್ತು. ನಾನು ಚಿಕ್ಕವನಿದ್ದಾಗಿನಿಂದಲೂ ಸಿಗ್ಲಿಯ ರಾಜಕುಮಾರನಂತೆ ಬೆಳೆದವನು. ಸಿಗ್ಲಿ ಪ್ರಗತಿಪರ ಗ್ರಾಮವಾಗಿತ್ತು. ನಾನು ಸಣ್ಣವನಿದ್ದಾಗ ವಿನೋಭಾ ಭಾವೆ ಸಿಗ್ಲಿಗೆ ಬಂದು ಹೋಗಿದ್ದರು. ಗಾಂಧಿ ಪ್ರಭಾವ ಊರಿನ ಮೇಲೆ ಬಹಳ ಬಿದ್ದಿತ್ತು. “ಗಣಿತ ಮತ್ತು ವ್ಯಾಕರಣ ಯಾರದು ಪಕ್ಕಾ ಐತಿ, ಅವರ ನಿಜವಾದ ಶಾಣ್ಯಾರು’ ಅಂತ ನಮ್ಮ ತಂದೆ ಹೇಳುತ್ತಿದ್ದರು. 

“ರಾಷ್ಟ್ರಪತಿಗಿಂತ ರಾಷ್ಟ್ರ ಪ್ರಜ್ಞೆ ಇರುವ ಪ್ರಜೆ ಮೇಲು, ಪ್ರಧಾನಿಗಿಂತ ವಿಚಾರ ಪ್ರಾಧಾನ್ಯತೆಯುಳ್ಳ ಪ್ರಜೆ ಮಿಗಿಲು. ರಾಷ್ಟ್ರಕ್ಕಾಗಿ ನೀನು’ ಅಂತ ಅಪ್ಪ ಮನೆಯ ಗೋಡೆಯ ಮೇಲೆ ಬರೆಸಿದ್ದರು. ನಾವು ಅದರ ಮೇಲೆ ಮತ್ತೆ ಬಣ್ಣ ಬಳಿದು ಪ. ಮ. ಬಳಿಗಾರ ಎಂದು ಅವರ ಹೆಸರನ್ನು ಗೋಡೆಯ ಮೇಲೆ ಬರೆಸಿ ಅವರ ಕನಸನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಿದ್ದೇವೆ. 

Advertisement

ವೈಚಾರಿಕ ಪ್ರಜ್ಞೆ, ಕರುಣೆ, ದಯೆ, ದಾಸೋಹ ಮನೋಭಾವ, ಶಿಕ್ಷಕರು, ಸೈನಿಕರು, ಅದಕ್ಕಿಂತ ಹೆಚ್ಚಾಗಿ ರೈತರ ಬಗ್ಗೆ ಗೌರವ ಹೊಂದಿದ್ದ ಅಪ್ಪ ನಮಗೆಲ್ಲ ಬಾಲ್ಯದಲ್ಲೇ ಉತ್ತಮ ಶಿಕ್ಷಣ ಕೊಡಿಸಿ ದರು. ನಾನು ಸ್ವಗ್ರಾಮದಲ್ಲಿಯೇ ಎಸ್ಸೆಸ್ಸೆಲ್ಸಿವರೆಗೂ ಶಾಲೆ ಕಲಿತು ತಾಲೂಕಿಗೆ ಮೊದಲ ಸ್ಥಾನ ಪಡೆದೆ. ತಂದೆಯೇ ಬಹುಮಾನ ವಾಗಿಟ್ಟಿದ್ದ ಅರ್ಧ ಕೆಜಿ ಬಂಗಾರವನ್ನು ಪ್ರಥಮ ಬಹುಮಾನವಾಗಿ ಪಡೆದದ್ದನ್ನು ನೆನೆದಾಗ ನನಗೆ ಈಗಲೂ ಸಂತಸವಾಗುತ್ತದೆ. 

ಆದರೆ, ಈಗ ರೈತನ ಬಾಳಿನಲ್ಲಿನ ಏರಿಳಿತವನ್ನು ಕಂಡು ಅರ್ಧ ಕೆಜಿಯಷ್ಟಿದ್ದ ಬಂಗಾರದ ಬಹುಮಾನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದನ್ನು ನೋಡಿ ಬೇಸರ ಆಗುತ್ತದೆ. 

“”ರೈತನಿಗೆ ವೈಭವದ ಕಾಲ ಬಹಳ ದಿನ ಉಳಿಯೋದಿಲ್ಲ. ಒಂದು ಕ್ವಿಂಟಾಲ್‌ ಮೆಣಸಿನಕಾಯಿ ಮಾರುಕಟ್ಟಿಗೆ ಒಯ್ದು ಎರಡು ತ್ವಲಿ ಬಂಗಾರ ತರ್ತಿದ್ವಿ. ಈಗ ಆರು ಕ್ವಿಂಟಾಲ್‌ ಮೆಣಸಿನಕಾಯಿ ಒಯ್ದರೂ ಒಂದು ತ್ವಲಿ ಬಂಗಾರ ಬರೋದಿಲ್ಲ” ಎಂದು ಅಪ್ಪ ನೋವಿನಿಂದ ಹೇಳಿದ್ದ ಮಾತುಗಳನ್ನು ನೆನೆದರೆ ಮನಸ್ಸಿಗೆ ವೇದನೆ ಆಗುತ್ತದೆ. 

ಮಂದಿ ಮಾತು ಪ್ರೇರಣೆ 
ನಮ್ಮ  ಮನೆಯ ಸೊರಗಿದ ಎತ್ತುಗಳು ರಸ್ತೆಯಲ್ಲಿ ಹೋಗುತ್ತಿ ರುವು ದನ್ನು ನೋಡಿ ಊರಿನ ಜನ “ಪರಮೇಶ್ವರಪ್ಪನ ಎತ್ತುಗೋಳು ಹೊಂಟಾವ್‌ ನೋಡು ಜೋತ್ಯಾಡ್ಕೊàಂತ’ ಎನ್ನುತ್ತಿದ್ದರು. ಇದೇ ಮಾತನ್ನೇ ಸವಾಲಾಗಿ ಸ್ವೀಕರಿಸಿದ ಅಪ್ಪ “”ಧಾರವಾಡ ಜಿಲ್ಲಾದಾಗ ಹೆಚ್ಚಿಗಿ ಪೀಕ್‌ ತಗಿಮಟಾ ಮಾರ್ಚ್‌ ತಿಂಗಳು ಬೇಯಿಸಿದ ಆಹಾರ ಸೇವಿಸುವುದಿಲ್ಲ” ಅಂತ ಪ್ರತಿಜ್ಞೆ ಮಾಡಿ, ನಮಗೆಲ್ಲಾ ಹಣ್ಣು, ತರಕಾರಿ, ಹಾಲು ಹುಬ್ಬಳ್ಳಿಯಿಂದ ತರಿಸಿ ಕೊಡುತಿದ್ದರು.
 
ಬಂಗಿ ಗೊಬ್ಬರ ತಂದ ಖುಷಿ 
ನಾವು ಚಿಕ್ಕವರಿದ್ದಾಗ ತಮ್ಮ ವೀರಣ್ಣ  (ವಿ.ಪಿ. ಬಳಿಗಾರ) ನಮ್ಮ ಕಾಕಾನ ಮಗ ಶಂಭು ಬಳಿಗಾರ ಎಲ್ಲರೂ ಸೇರಿ ಧಾರವಾಡಕ್ಕ ಬಂಗಿ(ಮಲ)ಗೊಬ್ಬರ ತರಲು ಟ್ರಕ್ಕಿನಲ್ಲಿ ಹೋಗುತ್ತಿದ್ದೆವು. ಬಂಗಿ ಗೊಬ್ಬರ ತುಂಬಿಕೊಂಡು ಬಂದು ಹೊಲಕ್ಕೆ ಹಾಕಿದ್ದರಿಂದ ಅತಿವೃಷ್ಟಿ ಯಾಗುವಷ್ಟು ಮಳೆಯಾದರೂ ಉತ್ತಮ ಉಳ್ಳಾಗಡ್ಡಿ(ಈರುಳ್ಳಿ) ಬೆಳೆದಿದ್ದು ನೋಡಿ ಭಾರೀ ಖುಷಿ ಆಗುತ್ತಿತ್ತು. ನಾವೆಲ್ಲ ಬಂಗಿ ಗೊಬ್ಬರಾ ತುಂಬಲು ಹೋದಾಗ “ಪರಮಾತ್ಮನ ಗಾಡಿ ಬಂತು’ ಅಂತ ಆಳು ಮಕ್ಕಳು ಹೇಳುತ್ತಿದ್ದರು.  “ಬಂಗಿ ರಾಮಯ್ಯ ಎನ್ನುವ ಹರಿಜನ ಕಪ್ಪು ಮಹಾತ್ಮಾ ಗಾಂಧಿಯಂತೆ ಕಾಣುತ್ತಾರೆ’ ಎಂದು ನಾನು ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. 

ಆಗಿನ ಕಾಲದಲ್ಲಿ ಕೃಷಿ ತೆರಿಗೆ ಕಟ್ಟುವ ಪದ್ಧತಿ ಬಗ್ಗೆ ನಮ್ಮ ತಂದೆಯನ್ನು ಪ್ರಶ್ನಿಸಿದ್ದೆ. ಆಗ ಅವರೇ ನನ್ನನ್ನು ತೆರಿಗೆ ಕಟ್ಟಲು ಗದಗಿನವರೆಗೆ ಕಳುಹಿಸಿ, “ತೆರಿಗೆ ಕಟ್ಟದಿದ್ದರ ದೇಶ ಹೆಂಗ್‌ ಉಳಿತೈತಿ?’ ಅಂತ ಮರು ಪ್ರಶ್ನೆ ಹಾಕಿದ್ದರು. ಅಂದು ತಂದೆ ಹೇಳಿದ ಮಾತಿನಿಂದಾಗಿ ಬದುಕಿನಲ್ಲಿ ತೆರಿಗೆ ಮಹತ್ವವನ್ನು ಪಾಲಿಸಿಕೊಂಡು ಬರುವಂತಾಗಿದೆ. 

ನಮ್ಮ ತಂದೆಯ ಔದಾರ್ಯತೆ ಅಷ್ಟಿಷ್ಟಿರಲಿಲ್ಲ. ಇದೇ ವೇಳೆಯಲ್ಲೇ ಅಮ್ಮನ ತ್ಯಾಗ ಗುಣದ ಬಗ್ಗೆಯೂ ಹೇಳಲೇಬೇಕು. ಹನ್ನೊಂದು ಮಕ್ಕಳನ್ನು ಹೆತ್ತು ಈಗಲೂ ಗಟ್ಟಿಮುಟ್ಟಾಗಿರುವ ಅಮ್ಮ, ಅಪ್ಪನ ಜೀವನದ ಜೊತೆಗೆ ಬೆರೆತುಕೊಂಡವಳು. 

ಸಿಗ್ಲಿ ಊರಲ್ಲಿ ಜಾತಿ ಧರ್ಮದ ಭೇದಭಾವವೇ ಇರಲಿಲ್ಲ. ಅಲ್ಲಿ ಕುರುಬರವನೂ ನಮಗೆ ಕಾಕಾ, ತಳವಾರ ಮಹಿಳೆಯೂ ನಮಗೆ ಚಿಗವ್ವ(ಚಿಕ್ಕಮ್ಮ). ನಮ್ಮಪ್ಪ ಎಲ್ಲರಿಗೂ ದೊಡ್ಡಪ್ಪ, ನಮ್ಮಮ್ಮ ದೊಡ್ಡಮ್ಮ. ಆದರೆ ನಗರಕ್ಕೆ ಬಂದ ಮೇಲೆ ಎಲ್ಲರೂ ಅಂಟಿ! ಸ್ವಂತ ಚಿಕ್ಕಮ್ಮನೂ ಆಂಟೀನೇ! ಇಲ್ಲಿ ಚಿಗವ್ವ ಅನ್ನುವ ಪದವೇ ಇಲ್ಲ. ನಮ್ಮ ಕಡೆ ಯಾರಿಗೂ ಹೆಸರೇ ಇಲ್ಲ. ಅಷ್ಟು ಅನ್ಯೋನ್ಯವಾದ ಬದುಕು ನಮ್ಮ ಹಳ್ಳಿ ಕಡೆ. 

ಇನ್ನು ನಮಗೆ ಕುಸ್ತಿ ಕಲಿಸಿದ ಮರಡೆಪ್ಪ ಕುರುಬರವನಾದರೂ ಆತನೂ ನಮಗೆ ಅಜ್ಜ ಆಗಿದ್ದ. ಆಗೆಲ್ಲ ಬಸ್ಸಿನಲ್ಲಿ ಹೆಣ್ಣುಮಕ್ಕಳಿಗೆ ಸೀಟ್‌ ರಿಸರ್ವ್‌ ಮಾಡುವ ಅಗತ್ಯವೇ ಇರಲಿಲ್ಲ. ಹೆಣ್ಮಕ್ಕಳು ಬಂದರೆ ಗಂಡಸರು ಎದ್ದು ನಿಂತು ಜಾಗ ಕೊಡುತ್ತಿದ್ದರು.

ಕರ್ಣನ ಪಾತ್ರ ಬೇಕಿರಲಿಲ್ಲ
ಮನೆಗೆ ಬರುವ ದಿನ ಪತ್ರಿಕೆ, ಮಾಸ ಪತ್ರಿಕೆಗಳನ್ನು ಓದುತ್ತಿದ್ದ ನನಗೆ ಒಂಬತ್ತನೇ ಕ್ಲಾಸಿನಲ್ಲಿದ್ದಾಗಲೇ ಬರವಣಿಗೆಯ ಹುಚ್ಚು ಹತ್ತಿತು. ಆಗ ಒಂದು ಕವನ ಬರೆದೆ.ಅದು ಪತ್ರಿಕೆಯಲ್ಲಿ ಪ್ರಕಟ ಗೊಂಡಾಗ ಬಹಳ ಸಂಭ್ರಮಿಸಿದ್ದೆ. ಅದನ್ನು ನೆನಪು ಮಾಡಿ ಕೊಂಡರೆ ಈಗಲೂ ಅದೇ ಸಂಭ್ರಮ ಅನುಭವಿಸಿದಂತೆ ಆಗುತ್ತದೆ.

ಶಾಲೆಯಲ್ಲಿ ಮಹಾಭಾರತದ ಮಹಾರಥಿ ಕರ್ಣ ನಾಟಕದಲ್ಲಿ ನನಗೆ ಕರ್ಣನ ಪಾತ್ರ ಕೊಟ್ಟಿದ್ದರು. ಆದರೆ ಅಲ್ಲಿ ಕರ್ಣ ಯಾವಾಗಲೂ ಕೃಷ್ಣನ ಮುಂದೆ ಕುಳಿತು “ದೇವಾ’ ಅಂತ ನಮಸ್ಕಾರ ಮಾಡಬೇಕಿತ್ತು. ಆದರೆ ಕೃಷ್ಣನ ಪಾತ್ರ ಮಾಡುತ್ತಿದ್ದ ಹುಡುಗ ಅಷ್ಟು ಶಾಣ್ಯಾ ಇರಲಿಲ್ಲ! ಅವನಿಗಿಂತ ನಾನೇ ಬುದ್ಧಿವಂತನಾಗಿದ್ದರೂ ಅವನಿಗೆ ಯಾಕೆ ನಮಸ್ಕಾರ ಮಾಡಬೇಕು ಅಂತ ಅನಿಸಿ “ಸರ್‌, ನಾ ಕರ್ಣನ ಪಾತ್ರಾ ಒಲ್ಯಾ’ ಅಂದೆ. ಆಗ ಮಾಸ್ತರು “ಕರ್ಣಂದು ಹೀರೋ ಪಾತ್ರ. ಅದನ್ಯಾಕ ಒಲ್ಲೆಂತಿ?’ ಅಂದ್ರು. ಆದರೆ ನಾನು ಕಾರಣ ಹೇಳಲಿಲ್ಲ. ಕಡೆಗೆ ನಾನೇ ಕೃಷ್ಣ ನ ಪಾರ್ಟ್‌ ಮಾಡಿದೆ!

ಧಾರವಾಡ-ಇಂಗ್ಲಿಷ್‌ ಭಯ
ಆಗೆಲ್ಲ ಅನೇಕರು ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಧಾರವಾಡಕ್ಕೆ ಹೋಗಿ, ಅಲ್ಲಿ ಇಂಗ್ಲಿಷಿಗೆ ಹೆದರಿ “ಇಂಗ್ಲಿಷ್‌ ಭಯದಿಂದ ಛಳಿ ಆಗ್ತದ’ ಎಂದು ಊರಿಗೆ ವಾಪಸ್‌ ಬಂದಿದ್ದರು. ಆದರೆ ಅದನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ನಾನು ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್‌ ಅನ್ನೇ ಮೇಜರ್‌ ವಿಷಯವಾಗಿ ತೆಗೆದುಕೊಂಡು ಫ‌ಸ್ಟ್‌ ರ್‍ಯಾಂಕ್‌ ಪಡೆದೆ. ಸಿಗ್ಲಿಯಿಂದ ಧಾರವಾಡಕ್ಕೆ ಹೋದಾಗ ಅಲ್ಲಿನ ವಾತಾವರಣ ಬಹಳ ಹಿಡಿಸಿತ್ತು. ಡಾಕ್ಟರ್‌ ಆಗಬೇಕೆಂದು ಧಾರವಾಡಕ್ಕೆ ಹೋಗಿ ಇಂಗ್ಲಿಷ್‌ ಭಾಷೆ ಬರದೇ ವಾಪಸ್‌ ಬಂದಿದ್ದ ಗೆಳೆಯನೊಬ್ಬ ಡ್ರೈವರ್‌ ಆಗಿ ಬಿಟ್ಟಿದ್ದ. ಆಗೆಲ್ಲ ಹಳ್ಳಿ ಹುಡುಗರು ಇಂಗ್ಲಿಷ್‌ ಪಾಸ್‌ ಮಾಡಿದರು ಅಂದರೆ, ಅದು ಒಂದು ರೀತಿಯಲ್ಲಿ ಐಎಎಸ್‌ ಪಾಸ್‌ ಮಾಡಿದ್ದಕ್ಕೆ ಸಮನಾಗಿತ್ತು!

ಕಾಲೇಜಿನಲ್ಲಿದ್ದಾಗ ಹುಡುಗಿಯರನ್ನು ಕಣ್ಣೆತ್ತಿ ನೋಡುವುದೂ ದೊಡ್ಡ ಪಾಪ ಅಂದುಕೊಂಡು ಬೆಳದವರು ನಾವು. “ಬ್ರಹ್ಮ ಚರ್ಯೆಯೇ ಜೀವನ, ವೀರ್ಯ ನಾಶವೇ ಮೃತ್ಯು’ ಅನ್ನುವ ಪುಸ್ತಕ ಓದುತ್ತಿದ್ದೆವು. ನ್ಪೋರ್ಟ್ಸ್ನಲ್ಲಿ ಮುಂದು ಬರಬೇಕು ಅಂದರೆ ಕೆಟ್ಟ ಚಟಗಳಿಂದ ದೂರ ಇರಬೇಕು ಅಂತ ಹಿರಿಯರು ಹೇಳುತ್ತಿದ್ದರು. ಅದಕ್ಕಾಗಿಯೇ ಹುಡುಗಿಯರ ಸಹವಾಸದಿಂದ ದೂರ ಉಳಿಯುತ್ತಿದ್ದೆವು. ಕುಸ್ತಿ, ಮಲ್ಲಕಂಬ, ಯೋಗಾಸನಕ್ಕೆ ಪ್ರತ್ಯೇಕ ಗುರುಗಳನ್ನು ಇಟ್ಟುಕೊಂಡು ಕಲೆಯುತಿದ್ದೆವು. ಆಗ ನಾನು ಕುಸ್ತಿ, ಕಬಡ್ಡಿ, ಈಜಿನಲ್ಲಿ ಯಾವಾಗಲೂ ಚಾಂಪಿಯನ್‌. ಹೀಗಾಗಿ ನನ್ನ ಆರೋಗ್ಯ ಈಗಲೂ ಗಟ್ಟಿಮುಟ್ಟಾಗಿದೆ. 

ನನಗೆ ಯಾವುದೇ ಕೆಟ್ಟ ಚಟ ಇಲ್ಲ. ಫ್ರೆಂಡ್‌ ಒಬ್ಬರು ನನಗೆ ರಷ್ಯಾದಿಂದ ಗಿಫ್ಟ್ ಅಂತ ಸ್ಕಾಚ್‌ ತಂದು ಕೊಟ್ಟಿದ್ದರು. ಅದನ್ನ ಕುಂ. ವೀರಭದ್ರಪ್ಪ ಅವರಿಗೆ ಕೊಟ್ಟುಬಿಟ್ಟೆ. ಅದರ ರೇಟ್‌ ಬಹಳ ಇತ್ತು ಅನಿಸುತ್ತದೆ. ಬೇಡವಾಗಿರುವ ವಸ್ತು ಎಷ್ಟು ರೇಟ್‌ ಇದ್ದರೂ ತೊಗೊಂಡು ಏನು ಮಾಡುವುದು? 

ಜಾತಿ ಮೀರಿದ ಬೆಂಬಲ
ಸರಕಾರಿ ಅಧಿಕಾರಿಯಾಗಿ ನಿವೃತ್ತಿಯಾದ ನಂತರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಹುದ್ದೆಗೆ ಸ್ಪರ್ಧೆ ಮಾಡಿದಾಗ ಜನರು ಜಾತಿ ಮೀರಿ ಬೆಂಬಲ ವ್ಯಕ್ತಪಡಿಸಿದ್ದು, ಜನರು ತುಂಬಾ ಒಳ್ಳೆಯವರು ಎಂಬ ಭಾವನೆ ಮೂಡಿಸಿದೆ. ಅಧಿಕಾರದಲ್ಲಿದ್ದಾಗ ಜನರೇ ದೇವರು ಅಂತ ನಂಬಿದ್ದೆ. ಈಗ ಕನ್ನಡಿಗರೇ ದೇವರು ಅಂತ ನಂಬಿ ಕನ್ನಡ ಸೇವೆ ಮಾಡುವಲ್ಲಿ ನಿರತನಾಗಿದ್ದೇನೆ.

ನಿರೂಪಣೆ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next