ನೆಲಮಂಗಲ: ಚಿತ್ರನಟ ಪುನೀತ್ ರಾಜ್‌ಕುಮಾರ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದು ಹಿರಿಯ ನಟಿ ಡಾ.ಲೀಲಾವತಿ ಕಂಬನಿ ಮಿಡಿದಿದ್ದಾರೆ. ತಾಲೂಕಿನ ಸೋಲದೇವನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ತುಂಬಾ ಚೆನ್ನಾಗಿ ನಟಿಸುತಿದ್ದ ಪುನೀತ್ ಒಬ್ಬ ಶ್ರೇಷ್ಠ ನಟನಾಗಿ ನಾಡಿನ ಜನಮನ ಗೆದಿದ್ದಾನೆ.
ಅವನ ಅಗಲಿಕೆಯಿಂದ ತುಂಬಾ ಬೇಸರವಾಗಿದೆ. ಅಪ್ಪು ಅಗಲಿಕೆ ನೋವು ಸಹಿಸುವ ಶಕ್ತಿಯನ್ನು ದೇವರು ಕುಟುಂಬ ಸದಸ್ಯರಿಗೆ ನೀಡಲಿ. ದೊಡ್ಡಮನೆಯ ಕುಡಿ ಅಣ್ಣಾವ್ರ ಪ್ರಾಣವಾಗಿದ್ದನು. ಬಾಲ್ಯದಿಂದಲೂ ಅವನನ್ನು ನೋಡಿದ್ದೇನೆ. ಎಲ್ಲರ ಬಳಿಯೂ ನಗುತಿದ್ದ ಪ್ರೀತಿಯಿಂದ ಮಾತನಾಡಿಸುತಿದ್ದ. ಅಪ್ಪು ಅಗಲಿಕೆ ಜಗತ್ತನ್ನೇ ಬೆಪ್ಪು ಮಾಡಿಸಿದೆ. ಪುನೀತ ನಿನಗೆ ಮೋಕ್ಷ ಸ್ಥಾನವನ್ನು ನೀಡಲಿ. ಭಗವಂತನಿಗೆ ಬೇರೆ ಯಾರೂ ಸಿಗಲಿಲ್ವೇ ಎಂದು ಕಣ್ಣೀರಿಟ್ಟರು.
ಇದನ್ನೂ ಓದಿ;- ನಟಿ ನೀತಾ ಆಶೋಕ್ ಬ್ಯೂಟಿಫುಲ್ ಗ್ಯಾಲರಿ
ಅಪ್ಪು ನನ್ನೊಂದಿಗಿದ್ದಾರೆ: ನಟ ವಿನೋದ್ ರಾಜ್ ಮಾತನಾಡಿ, ಎಷ್ಟೇ ಬೆಳೆದಿದ್ದರೂ ಅಪ್ಪು ಮುದ್ದುಮುದ್ದಾಗಿ ಕಾಣುತ್ತಿದ್ದರಿಂದ ಅವನಿಗೆ ಅಪ್ಪು ಎಂದು ಹೆಸರಿಡ ಲಾಯಿತು. ಎಲ್ಲರ ಪ್ರೀತಿಯ ಅಪ್ಪುಗೆಯ ವ್ಯಕ್ತಿಯೇ ಅಪ್ಪು. ನನಗೆ ಅಪ್ಪು ಜೊತೆ ಸಾಕಷ್ಟು ಮಾತನಾಡಲು ಸಾಧ್ಯವಾಗಲಿಲ್ಲ ಅದಕ್ಕೆ ಬೇಸರವಾಗಿದೆ. ಅವರು ನನ್ನೊಂದಿಗಿದ್ದಾರೆ.
ಅಪ್ಪು ಅಗಲಿಕೆ ನನಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಹೇಗೆ ಕೊನೆಯುಸಿರೆಳೆದರು ಎಂದು ಅರ್ಥವಾಗುತ್ತಿಲ್ಲ. ನಮ್ಮನ್ನು ಜೀವಂತವಾಗಿ ಕೊಂದು ಬಿಟ್ಟು ಹೋದರು. ಯಾವ ಪಾಪಿಯ ದೃಷ್ಟಿ ನಿನ್ನ ಮೇಲೆ ಬಿತ್ತು. ಪಾಪಿ ದೇವರಿಗೆ ಎಷ್ಟು ಕೈಮುಗಿಬೇಕು. ಅಪ್ಪುಗೆ ಈ ರೀತಿ ಆಗಬಾರದಿತ್ತು ಎಂದು ಕಂಬನಿ ಮಿಡಿದರು.