Advertisement

ವಿದ್ಯೆ, ಸಂಸ್ಕೃತಿ, ನಾಗರಿಕತೆಯಿಂದ ವಿಶ್ವಮಾನವರಾಗೋಣ     

11:31 AM Dec 06, 2017 | |

ಉಡುಪಿ: ಕುವೆಂಪು ಅವರು ಹೇಳಿದಂತೆ ನಾವು ಹುಟ್ಟುತ್ತಾ ವಿಶ್ವಮಾನವರಾಗಿ ಹುಟ್ಟಿ ಅನಂತರ ಭಾಷೆ, ಧರ್ಮ, ಮತ ಮೊದಲಾದವುಗಳಿಂದಾಗಿ ಅಲ್ಪಮಾನವರಾಗುತ್ತೇವೆ. ಹಾಗಾಗಿ ವಿದ್ಯೆ, ಸಂಸ್ಕೃತಿ ಮತ್ತು ನಾಗರಿಕತೆಯಿಂದ ಮತ್ತೂಮ್ಮೆ ವಿಶ್ವಮಾನವರಾಗಬೇಕಾಗಿದೆ. ಅದಕ್ಕೂ ಮೊದಲು ಮಾನವರಾಗಬೇಕು ಎಂದು ಪದ್ಮಶ್ರೀ ಪುರಸ್ಕೃತ, ನಾಡೋಜ ಕವಿ ಡಾ| ಕೆ.ಎಸ್‌.ನಿಸಾರ್‌ ಅಹಮದ್‌ ಹೇಳಿದ್ದಾರೆ.

Advertisement

ಡಿ.5ರಂದು ಉಡುಪಿಯ ಸಾಂಸ್ಕೃತಿಕ ಸೇವಾ ಮತ್ತು ಸಂಶೋಧನಾ ಟ್ರಸ್ಟ್‌ “ರಂಗಸ್ಥಳ’ ಹಾಗೂ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆ “ಅಮೋಘ ಉಡುಪಿ’ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಪಂಪ ಪ್ರಶಸ್ತಿ ಘೋಷಿತ ಗೌರವಾರ್ಥ ಜರಗಿದ ಸಮ್ಮಾನ ಮತ್ತು ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.

ಹಣ ಗಳಿಸುವುದೊಂದೇ ಧ್ಯೇಯ ವಾಗಬಾರದು. ಸಾಹಿತ್ಯದಿಂದ ಸಂತೋಷ ಸಿಗುತ್ತದೆ. ಬೆಳಕು, ಸವಿ, ಸೊಗಸಿನೊಂದಿಗೆ ಸದ್ಗುಣದ ಜೀವನ ನಮ್ಮದಾಗಬೇಕು ಎಂದು ಅವರು ಹೇಳಿದರು. 

ಇಂಗ್ಲಿಷ್‌ ಭಾಷೆ ಇರಲಿ, ಸಂಸ್ಕೃತಿ ಬೇಡ
ಇಂಗ್ಲಿಷ್‌ ಕಲಿಯಬೇಕು. ಇಲ್ಲವಾದರೆ ಈ ಜಗತ್ತಿನಲ್ಲಿ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಆದರೆ ಇಂಗ್ಲಿಷ್‌ ಸಂಸ್ಕೃತಿಯ ಜತೆಗೆ ಸೇರಿ ಕೊಳ್ಳಬಾರದು. ಇಂಗ್ಲಿಷ್‌ ಸ್ನೇಹ ಸಂಬಂಧದ ಭಾಷೆಯೇ ಹೊರತು ರಕ್ತ ಸಂಬಂಧದ ಭಾಷೆಯಲ್ಲ. ಕನ್ನಡ ಮತ್ತು ಇತರ ದ.ಕ ಭಾರತೀಯ  ಭಾಷೆಗಳು ರಕ್ತಸಂಬಂಧದ ಭಾಷೆಗಳು ಎಂದು ಡಾ| ನಿಸಾರ್‌ ಅಹಮ್ಮದ್‌ ಅಭಿಪ್ರಾಯಪಟ್ಟರು.

ರವೀಂದ್ರ ಮಂಟಪ ಎ.ಸಿ ಆಗಲಿದೆ 
ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಣಿಪಾಲ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌.ಬಲ್ಲಾಳ್‌ ಅವರು, ನಿಸಾರ್‌ ಅಹಮದ್‌ ಅವರು ಪ್ರಪಂಚದಾದ್ಯಂತ ಸಂಚಲನ ಉಂಟು ಮಾಡಿರುವ ಕವಿ. ಈ ಸಮ್ಮಾನ ಕಾರ್ಯಕ್ರಮದಿಂದ ಪೇರಿತರಾಗಿ ಮತ್ತಷ್ಟು ಕವನಗಳನ್ನು ಕೊಡುವಂತಾಗಲಿ. ಇಂತಹ ಕಾರ್ಯಕ್ರಮಕ್ಕೆ ವೇದಿಕೆ ಯಾಗಿರುವ ನೂತನ ರವೀಂದ್ರ ಮಂಟಪವನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ನ 75ನೇ ವರ್ಷಾಚರಣೆ ಪ್ರಯುಕ್ತ ಸಂಪೂರ್ಣ ಹವಾನಿಯಂತ್ರಿತ ಸಭಾಂಗಣವಾಗಿ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Advertisement

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆರ್‌.ಪಿ.ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. “ರಂಗಸ್ಥಳ’ದ ಮ್ಯಾನೇಜಿಂಗ್‌ ಟ್ರಸ್ಟಿ  ಯು.ಆರ್‌.ಸಭಾಪತಿ ಸ್ವಾಗತಿಸಿದರು. “ಅಮೋಘ’ ನಿರ್ದೇಶಕಿ ಪೂರ್ಣಿಮಾ ಸುರೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂಜಿಎಂ ಕಾಲೇಜು ಪ್ರಾಂಶುಪಾಲೆ ಸಂಧ್ಯಾ ನಂಬಿಯಾರ್‌, “ರಂಗಸ್ಥಳ’ದ ಗೌರವಾಧ್ಯಕ್ಷ ಮನೋಹರ ಶೆಟ್ಟಿ, ಅಧ್ಯಕ್ಷ ಕಿಶನ್‌ ಹೆಗ್ಡೆ, ಜತೆ ಕಾರ್ಯದರ್ಶಿ ಪ್ರೊ| ಉದಯ ಕುಮಾರ ಶೆಟ್ಟಿ, ಇನ್ನೋರ್ವ ಜತೆ ಕಾರ್ಯದರ್ಶಿ ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರ್ವಹಿಸಿದರು. 

ಕರಾವಳಿ ಪ್ರೀತಿಗೆ ಸೋತ ನಿತ್ಯೋತ್ಸವ ಕವಿ
ನಾನು 5 ವರ್ಷಗಳ ಹಿಂದೆ ಆಳ್ವಾಸ್‌ ನುಡಿಸಿರಿಯಲ್ಲಿ ಪಾಲ್ಗೊಂಡಿದ್ದೆ. ಇದು ಕರಾವಳಿಯ ನನ್ನ ಮೊದಲ ಕಾರ್ಯಕ್ರಮ. ಅದರ ಅನಂತರ ಇದುವರೆಗೆ ಕರಾವಳಿಯಲ್ಲಿ 27 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೆ. ಇಲ್ಲಿನ ಜನರ ಅದೇನು ಪ್ರೀತಿ, ಅಕ್ಕರೆಯೋ ತಿಳಿಯದು. ತುಳುನಾಡಿನಲ್ಲಿ  ತುಳು ಭಾಷೆ ಇದ್ದರೂ ಕನ್ನಡದ ಮೇಲಿನ ಪ್ರೀತಿ ಅಗಾಧ. ಕನ್ನಡದ ಪ್ರೀತಿ ಪತಾಕೆ ಎತ್ತಿ ಹಿಡಿಯುವವರು ಹಳೆ ಮೈಸೂರಿನವರಲ್ಲ, ಅದು ಕರಾವಳಿಯವರೇ. ಯಕ್ಷಗಾನ, ಭೂತಾರಾಧನೆ, ನಾಗಾರಾಧನೆಗಳಿಂದ ಈ ಪ್ರದೇಶ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ನನ್ನ ಉಸಿರು ಇರುವವರೆಗೂ ಕರಾವಳಿಯ ಸೆಳೆತ ಇರುತ್ತದೆ.

– ಡಾ| ಕೆ.ಎಸ್‌.ನಿಸಾರ್‌ ಅಹಮದ್‌, “ಪದ್ಮಶ್ರೀ’ ಪುರಸ್ಕೃತ ಕವಿ

Advertisement

Udayavani is now on Telegram. Click here to join our channel and stay updated with the latest news.

Next