ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾಗಿ ವೈದ್ಯಕೀಯ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಖ್ಯಾತ ವೈದ್ಯೆ ಡಾ.ಕಾಮಿನಿ ರಾವ್, ವೈದ್ಯಕೀಯ ರಂಗದ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡವರು.
ಇದೀಗ ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಡಾ.ಕಾಮಿನಿ ರಾವ್, ಮನರಂಜನಾಕ್ಷೇತ್ರಕ್ಕೂ ಅಡಿಯಿಡಲುಸಿದ್ಧತೆ ಮಾಡಿಕೊಂಡಿದ್ದಾರೆ. ಸದ್ಯ “ಪೂರ್ವಿ ಪ್ರೊಡಕ್ಷನ್ಸ್’ ಹೆಸರಿನಲ್ಲಿ ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯನ್ನು ಆರಂಭಿಸುತ್ತಿರುವ ಡಾ.ಕಾಮಿನಿ ರಾವ್, ಈ ಮೂಲಕ ಒಂದಷ್ಟು ಮನರಂಜನಾ ಚಟುವಟಿಕೆಗಳ ಮೂಲಕ ಪ್ರೇಕ್ಷರ ಮುಂದೆ ಬರಲು ತಯಾರಿ ನಡೆಸಿದ್ದಾರೆ. ತಮ್ಮ ಹೊಸ ಯೋಚನೆಗಳ ಬಗ್ಗೆ ಮಾತನಾಡಲು ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದ ಡಾ. ಕಾಮಿನಿ ರಾವ್ ಈ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ಇದನ್ನೂ ಓದಿ : ಜನವರಿ 22ಕ್ಕೆ ಯುವರತ್ನ ತೆರೆಗೆ?
“ಹೊಸದೇನಾದರೂ ಮಾಡಬೇಕು ಅಂದುಕೊಳ್ಳುತ್ತಿದ್ದಾಗ, ನಮ್ಮದೇಯಾದ ಪ್ರೊಡಕ್ಷನ್ ಹೌಸ್ ಮಾಡುವ ಯೋಚನೆ ಬಂತು. ಇದರ ಮೂಲಕ ಸಿನಿಮಾ ನಿರ್ಮಾಣ, ಡಾಕ್ಯುಮೆಂಟರಿಗಳು, ಹಾಡು-ಹರಟೆ ರೀತಿಯ ಕಾರ್ಯಕ್ರಮಗಳನ್ನು ಮಾಡಲು ಯೋಜಿಸಿದ್ದೇವೆ. ಈ ಮೂಲಕ ಒಂದಷ್ಟು ಜನರಿಗೆ ಸ್ಫೂರ್ತಿದಾಯಕವಾದ ವಿಷಯಗಳನ್ನು ಹೇಳಬೇಕು, ಹೊಸ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ’ ಎಂದರು.
ಇನ್ನು ಡಾ.ಕಾಮಿನಿ ರಾವ್ ಅವರ ನಿರ್ಮಾಣ ಸಂಸ್ಥೆಯ ಉಸ್ತುವಾರಿಯನ್ನು ಅವರ ಸೊಸೆ ಪೂಜಾ ಸಿದ್ಧಾರ್ಥ್ ರಾವ್ ವಹಿಸಿಕೊಂಡಿದ್ದಾರೆ. ಇದೇ ವೇಳೆ ಹಾಜರಿದ್ದ ಡಾ.ಕಾಮಿನಿ ರಾವ್ ಅವರ ಪತಿ ಹಿರಿಯ ವೈದ್ಯ ಡಾ. ಎ.ಎಸ್ ಅರವಿಂದ್ಕೂಡ ಚಿತ್ರರಂಗದ ನಂಟು ಮತ್ತು ತಾರೆಯರ ಜೊತೆಗಿನ ಒಡನಾಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು.