ಮಂಗಳೂರು: ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ಪ್ರತಿಷ್ಠಿತ ಸಾಧನಾ ರಾಜ್ಯ ಪ್ರಶಸ್ತಿಯನ್ನು ಮಹಿಳಾ ಸಶಕ್ತೀಕರಣ ಕ್ಷೇತ್ರಕ್ಕೆ ನೀಡಿದ ಅನನ್ಯ ಸೇವೆಗಾಗಿ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರಿಗೆ ಸೋಮವಾರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಚೇರಿಯ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ಪ್ರಶಸ್ತಿ ಪ್ರದಾನ ಮಾಡಿದರು. ಸಂಘಟಕ, ಉದ್ಯಮಿ ಗುರುಪ್ರಸಾದ್ ಕಡಂಬಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ತುಳು ಲಿಪಿ ಶಿಕ್ಷಕಿ, ಕವಯತ್ರಿ ಗೀತಾ ಲಕ್ಷ್ಮೀಶ್ ಮುಖ್ಯ ಅತಿಥಿಗಳಾಗಿದ್ದರು.
ಕ್ಷೇತ್ರದಲ್ಲಿ ಗ್ರಾಮೀಣಾಭಿವೃದ್ಧಿ ಯೋಜನೆ ಆರಂಭವಾದಾಗಿನಿಂದ ರಾಜ್ಯವ್ಯಾಪಿಯಾಗಿ ಮಹಿಳೆಯರ ಜೀವನ ಗುಣಮಟ್ಟ ಅಭಿವೃದ್ಧಿಗಾಗಿ ಸಮಗ್ರವಾಗಿ ಕೆಲಸ ಮಾಡಿದ್ದೇವೆ. ಈ ಸಾಧನೆಯ ಹಿಂದೆ ಯೋಜನೆಯ ಕಾರ್ಯಕರ್ತರ ಶ್ರಮದ ಪಾಲು ದೊಡ್ಡದು. ಸೇವಾ ಮನೋಭಾವವೇ ಸಾಧನೆಯ ಸಾರ್ಥಕ್ಯ. ಸಾಧನಾ ರಾಜ್ಯ ಪ್ರಶಸ್ತಿಯನ್ನು ಅತ್ಯಂತ ಆನಂದದಿಂದ ಸ್ವೀಕರಿಸಿದ್ದೇನೆ ಎಂದು ಡಾ| ಹೇಮಾವತಿ ಹೆಗ್ಗಡೆ ಹೇಳಿದರು.
ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸಾಧನಾ ರಾಜ್ಯ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಸಂಚಾಲಕಿ ಲತಾ, ಕಾರ್ಯದರ್ಶಿ ರಾಜೇಶ್ವರಿ ಮಂಜುನಾಥ್, ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಕುಂತಲಾ ಬೆಳ್ಮಣ್, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ ಅಮಿತ್, ಅಳಿಯ ಎ.ಎಸ್. ಅಮಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾ.ನಿ. ಅಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.