Advertisement

Dr G G Laxman Prabhu ಕವಿ ಹೃದಯದ ಹಾಸ್ಯಪ್ರಿಯ ವೈದ್ಯ

12:48 AM Nov 18, 2023 | Team Udayavani |

ನಾನು ಮಂಗಳೂರಿಗೆ ಬಂದು ಕೆಲ ವರುಷವಷ್ಟೇ ಆಗಿತ್ತು. ಮಲೆ ನಾಡಿಗರಿಗೆ ಬಿಸಿ ಬಿಸಿ ಕಾಫಿ ಕುಡಿ ಯುವುದನ್ನು ಬಿಟ್ಟು ಗಟಗಟ ನೀರು ಕುಡಿಯುವ ಅಭ್ಯಾಸ ಇಲ್ಲ. ಮಂಗಳೂರಲ್ಲಿ ಅದನ್ನೇ ಮುಂದು ವರಿಸಿದ್ದೆ ಎನಿಸುತ್ತದೆ. ಕಿಡ್ನಿ ಒಳಗೆ ಕಲ್ಲುಗಳು ಮನೆ ಮಾಡಿ ಒಂದು ದಿನ ಮಾರಣಾಂತಿಕ ನೋವಿನೊಂದಿಗೆ ಕೆಎಂಸಿಗೆ ಕರೆದೊಯ್ಯಲಾಯಿತು. ನನ್ನನ್ನು ನೋಡಲು ಬಂದ ವೈದ್ಯರು, ಮಾರ್ಚ್‌-ಎಪ್ರಿಲ್‌ ಅಲ್ಲವೇ? ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆಯುವ ಅಭ್ಯಾಸ ಮಾಡುವ ಬದಲು ಚೆನ್ನಾಗಿ ನೀರು ಕುಡಿ ಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು ಎಂದು ತಮಾಷೆ ಮಾಡುತ್ತಾ ನನ್ನ ನೋವನ್ನು ಮರೆ ಸುವಂತೆ ತಮ್ಮ ಹಾಸ್ಯ ಮಿಶ್ರಿತ ವಿವರಣೆಯೊಂದಿಗೆ ಕಲ್ಲುಗಳನ್ನು ತೆಗೆಯುವ ವಿಧಾನಗಳನ್ನು ವಿವರಿ ಸಿದರು. ಹಾಸ್ಯ ಲೇಖಕರಿಗೆ ನೋವನ್ನು ಸಹಿಸುವ ಮತ್ತು ಮರೆಸುವ ಶಕ್ತಿ ಇನ್‌ ಬಿಲ್ಟ್ ಆಗಿಯೇ ಬಂದಿರುತ್ತದೆ ಎಂದೆಲ್ಲ ಮಾತನಾಡಿದರು. ನನ್ನ ನೋವನ್ನು ಪರಿಹರಿಸಿದ ಅನಂತರ ತಾವು ಅಧ್ಯಕ್ಷರಾಗಿದ್ದ ರೋಟರಿ ಕ್ಲಬ್‌ಗ ಬಂದು ಭಾಷಣ ಮಾಡಬೇಕೆಂದು ಆಹ್ವಾನಿಸಿದ್ದರು.

Advertisement

ಅನಂತರದ ದಿನಗಳಲ್ಲಿ ಅವರ ವ್ಯಕ್ತಿತ್ವದ ಸವಿಯನ್ನು ಓರ್ವ ರೋಗಿಯಾಗಿ ಮಾತ್ರವಲ್ಲದೆ ಕರೆದಾಗ ಹೋಗಿ ಭಾಷಣ ಮಾಡಿ ಅವರ ಸಂಘಟನ ಪ್ರೀತಿಯನ್ನು ಕಣ್ಣಾರೆ ಕಂಡೆ. ಇವರ ಸುತ್ತಮುತ್ತಲಿರುವವರಿಗೆ, ಶಿಷ್ಯರಿಗೆ, ಸಹೋದ್ಯೋಗಿಗಳಿಗೆ ಲಕ್ಷ್ಮಣ ಪ್ರಭು ಎಂದರೆ ಯಾಕೆ ಅಚ್ಚುಮೆಚ್ಚು ಎಂಬುದು ನನಗೆ ಅರಿವಾಗುತ್ತಾ ಹೋಯಿತು. ಅವರೊಳಗೊಬ್ಬ ಕವಿ ಇದ್ದು ಸದಾ ಸಹೃದಯತೆಯಿಂದ ಮಿಡಿಯುತ್ತಿದ್ದ ವೈದ್ಯರಾಗಿದ್ದರು.

ರೋಗಿಗಳ ದೃಷ್ಟಿಯಿಂದ ವೈದ್ಯರಲ್ಲಿ ಇರಲೇಬೇಕಾದ ನಗುಮುಖ, ಹಾಸ್ಯಪ್ರಜ್ಞೆ, ತಾಳ್ಮೆ ಮತ್ತು ವೃತ್ತಿಯಲ್ಲಿ ತಾದಾತ್ಮé… ಇವೆಲ್ಲವೂ ಮಿಳಿತವಾದ ವೈದ್ಯ ಗುರು, ಲಕ್ಷ್ಮಣ ಪ್ರಭು ಇನ್ನಿಲ್ಲವೆಂದಾಗ ಅವರು ವಾಟ್ಸ್‌ಆ್ಯಪ್‌ ನಲ್ಲಿ ನನಗೆ ಆಗಾಗ ಕಳುಹಿಸುತ್ತಿದ್ದ ಚುಟುಕುಗಳು ಕಣ್ಮುಂದೆ ಬಂದವು. ವೈದ್ಯರ ದಿನಾಚರಣೆಗೆ ಅವರಿಗೆ ಹ್ಯಾಪಿ ಡಾಕ್ಟರ್ಸ್‌ ಡೇ ಎಂದು ಮೆಸೇಜ್‌ ಕಳಿಸಿದಾಗ ಮರುತ್ತರವೆಂಬಂತೆ ಅವರು ಕಳಿಸಿದ ಚುಟುಕು, ನನ ಗೊಂದು ಪ್ರಶಸ್ತಿ ಬಂದಾಗ ಅದಕ್ಕೋಸ್ಕರವೇ ರಚಿಸಿದ ಒಂದು ಚುಟುಕು, ಕೊನೆಯದಾಗಿ ಕಳಿಸಿರುವ ವೈದ್ಯನ ಬದ್ಧತೆಯ ಕುರಿತಾದ ಚುಟುಕು ಇವುಗಳು ನನ್ನ ಕಣ್ಣನ್ನು ತೇವಗೊಳಿಸಿವೆ. ನನ್ನ ವಾಟ್ಸ್‌ಆ್ಯಪ್‌ನಲ್ಲೊಂದೇ ಅಲ್ಲದೆ ಸ್ಮತಿ ಪಟಲದಲ್ಲಿಯೂ ಭದ್ರವಾಗಿ ಕುಳಿತಿವೆ.

ಅವರಿಗೆ ಕೋವಿಡ್‌ ತಗಲಿ ಕೆಎಂಸಿಯಲ್ಲಿಯೇ ಒಂದು ಪ್ರತ್ಯೇಕ ರೂಮ್‌ ಮಾಡಿಕೊಂಡಿ¨ªಾಗ ನಾನು ಅವರಿಗೆ ಫೋನ್‌ ಮಾಡಿದ್ದೆ ಎಷ್ಟು ಆರಾಮಾಗಿದ್ದೇನೆ ಗೊತ್ತಾ ಮೇಡಂ ಅಂತ ಸುಂದರವಾದ ಒಂದು ರೂಮಿನಲ್ಲಿ ಏಕಾಂತ ಸುಖ (ಅದು ನನ್ನ ಒಂದು ಹಾಸ್ಯ ಲೇಖನ.) ಅನುಭವಿಸುತ್ತಾ ಇದ್ದೇನೆ ಎನ್ನುತ್ತಾ ನಕ್ಕಿದ್ದರು. ಅವರ ಹಾಸ್ಯ ಪ್ರಜ್ಞೆ ನನ್ನನ್ನು ಅದೆಷ್ಟೋ ಬಾರಿ ಎಚ್ಚರಿಸಿದ್ದುದೂ ಇದೆ. ಇಂಥ ಕವಿ ಹೃದಯದ ವೈದ್ಯರು ಅವರು.
ನಾನು ನಿವೃತ್ತಿಯ ಅನಂತರ ಕೆಲವು ವರ್ಷ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದೆ. ಅಲ್ಲಿಗೂ ನನ್ನ ಕಲ್ಲು ಮುಳ್ಳುಗಳ ಹಾದಿ ನನ್ನನ್ನು ಹುಡುಕಿಕೊಂಡು ಬಂದು ಮನೆಯ ಬಳಿಯೇ ಇರುವ ಆಸ್ಟರ್‌ ಹಾಸ್ಪಿಟಲ್‌ ಗೆ ಕರೆದೊಯ್ಯಿತು. ಅಲ್ಲಿ ನನಗೆ ಆಪರೇಷನ್‌ ಮಾಡಿದ ವೈದ್ಯರು ನಿಮ್ಮದು ಯಾವೂರು ಎಂದು ಕೇಳಿ ದಾಗ ಮಂಗಳೂರು ನನ್ನ ವೈದ್ಯರು ಡಾಕ್ಟರ್‌ ಲಕ್ಷ್ಮಣ ಪ್ರಭು ಎಂದು ಪರಿಚಯಿಸಿಕೊಂಡೆ. ಓಹ್‌ ಅವರು ನನ್ನ ಗುರುಗಳು ಮತ್ತು ಜೀವನದ ಮಾರ್ಗದರ್ಶಕರು ಎಂದು ಹೇಳಿದ ಡಾಕ್ಟರ್‌ ರವೀಶ್‌ ನನ್ನ ಪೂರ್ತಿ ಚಿಕಿತ್ಸೆಯನ್ನು ಮುತುವರ್ಜಿಯಿಂದ ಮಾಡಿದ್ದಲ್ಲದೆ ನಾನು ಕೊನೆಯಲ್ಲಿ ಥ್ಯಾಂಕ್ಸ್‌ ಹೇಳಿದಾಗ, ನನಗೆ ಥ್ಯಾಂಕ್ಸ್‌ ಹೇಳಬೇಡಿ ನಿಮ್ಮ ವೈದ್ಯ ಡಾಕ್ಟರ್‌ ಲಕ್ಷ್ಮಣ ಪ್ರಭು ಅವರಿಗೆ ನಿಮ್ಮ ಶಿಷ್ಯ ಕ್ಲಾಸಲ್ಲಿ ಸ್ವಲ್ಪ ಪೋಕರಿ ಆಗಿದ್ದನಂತೆ. ಆದರೂ ತುಂಬಾ ಒಳ್ಳೆಯ ರೀತಿಯಲ್ಲಿ ಆಪರೇಷನ್‌ ಮಾಡಿ¨ªಾರೆ ಎಂದು ತಿಳಿಸಿಬಿಡಿ ಎಂದಿದ್ದರು. ಓರ್ವ ಹೃದಯವಂತ ವೈದ್ಯ ರೋಗಿಗಳಿಗೆ ಮಾತ್ರವಲ್ಲದೆ ಶಿಷ್ಯ ರಿಗೂ ವಾತ್ಸಲ್ಯ ಹಂಚಿದ ಉದಾಹರಣೆ ತುಂಬಾ ವಿರಳ. ಪ್ರಭುಗಳೇ ನಿಮ್ಮ ನಗುವ ಆತ್ಮ ಪರಿಮಳವ ಪಸರಿಸಿದ ನೆನಪಿನಲ್ಲಿ ನಿಮಗೆ ವಿದಾಯ ಹೇಳುತ್ತಿದ್ದೇನೆ.

ವೈದ್ಯ ಲಕ್ಷ್ಮಣ ಪ್ರಭು ಅವರ ಕೆಲವು ವಾಟ್ಸ್‌ಆ್ಯಪ್‌ ಚುಟುಕುಗಳು
ಕ್ಯಾಲೆಂಡರು – ಡೈರಿ
ಅದೇ ಜನ ಅದೇ ಮನೆ ಅದೇ ಕೆಲಸ ಮತ್ತು
ಅದೇ ಊರು,
ಬೇರೆಯೆಂದರೆ ಗೋಡೆಗೊಂದು
ಹೊಸತಾದ ಕ್ಯಾಲೆಂಡರು!
ಬದಲಾಗಲಿ ಜನ ಬದಲಾಗಲಿ ಮನ
ಹೊಸತಿರಲಿ ಗುರಿ
ಮರೆಯದಂತೆ ಬರೆದಿಡಲು ಮೇಜಿಗೊಂದು
ಹೊಸ ಡೈರಿ
***
ವೈದ್ಯರ ದಿನದಂದು ವೈದ್ಯನ ಹಾರೈಕೆ
ಗುಳಿಗೆ ಸೂಜಿಗಳಿದ್ದ ಸಂದೇಶಗಳು ಸಚಿತ್ರ
ಹಾರೈಸಿ ಕಳುಹುವರು ವಿಜೃಂಭಿಸಿ
ವೈದ್ಯನ ಪಾತ್ರ
ಒಳಿತಾಗಲೆನ್ನುವೆ ಹೋದವರಿಗೆಲ್ಲ ವೈದ್ಯನ ಹತ್ರ
ಹಾರೈಕೆ ಎಲ್ಲರೂ ಸುಖವಾಗಿರಬೇಕೆಂಬುದು ಮಾತ್ರ
***
ಸ್ಮಾರ್ಟ್‌ ನಗರ
ಮುರ ಕಲ್ಲಿನ ಗೋಡೆಯ ಚಂದದ ವಠಾರ,
ಗಾರೆಯ ಕೆಲಸವಿದರಲ್ಲಿ ಅದೆಂತಹ ಆರ್ಟು !
ಮುರಿದು ಕಟ್ಟಿದ ಗೋಡೆ ಅದೆಷ್ಟು ಕಠೊರ,
ಮೋರೆಯ ಕೆಡಿಸಿಕೊಂಡ ನಗರವೀಗ ಸ್ಮಾರ್ಟು !
***
ವೃತ್ತಿ ಧರ್ಮ
ತಾಗಿ ಇಂದ್ರಜಿತುವಿನ ಬಾಣ
ಮೂಛೆìಹೋಗಿ ಬಿದ್ದಿರಲು ಲಕ್ಷ್ಮಣ
ಶತ್ರು ಪಾಳಯಕ್ಕೆ ಬಂದು ಕರೆದಾಕ್ಷಣ
ವೃತ್ತಿ ಧರ್ಮ ಮೆರೆದ ವೈದ್ಯ ಸುಷೇಣ

Advertisement
Advertisement

Udayavani is now on Telegram. Click here to join our channel and stay updated with the latest news.

Next