Advertisement
ಏನು ಬದುಕಿನ ಅರ್ಥ ? ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಬದುಕನ್ನು ವೈರಾಗ್ಯದಿಂದ ಕಳೆಯುವವರಿಗೆ ಮಂಕುತಿಮ್ಮನ ಕಗ್ಗಗಳು ಎಂದಿಗೂ ಒಂದು ರೀತಿಯಲ್ಲಿ ಆಪ್ತ ಸಮಾಲೋಚನೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಜೀವನದ ಆಳ ಹಾಗೂ ವಿಸ್ತಾರಗಳ ನಡುವೆ ‘ಬದುಕು ಏನಿಲ್ಲವೋ’ ಬಂದಂತೆ ಬದುಕಿ ಬಿಡು ಎನ್ನುವ ಅವರ ಅಷ್ಟೂ ಕಗ್ಗಗಳ ಸಾರ ಮಾತ್ರವೇ ಸಾಕು ಬದುಕನ್ನು ಅತ್ಯಂತ ಆಪ್ತವಾಗಿ ಕಳೆಯುವುದಕ್ಕೆ. ಮತ್ತದರ ಅನುಭವವನ್ನು ಅನುರಾಗದೊಂದಿಗೆ ಕಳೆಯುವುದಕ್ಕೆ.
ಏನು ಜೀವ ಪ್ರಪಂಚಗಳ ಸಂಬಂಧ..?||
ಕಾಣದಿಲ್ಲಿರ್ಪುದೇನಾನುಮುಂಟೆ..? ಅದೇನು..?||
ಜ್ಞಾನ ಪ್ರಮಾಣವೇಂ..?- ಮಂಕುತಿಮ್ಮ ||
Advertisement
ಜ್ಞಾನ ಶಕ್ತಿಗೆ ಮೀರಿದ್ದು ಏನಾದರೂ ಇದೆಯೇ ಎಂದು ಡಿವಿಜಿ ಇಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಅಂದರೇ, ನಮ್ಮ ಎಲ್ಲಾ ಸಮಸ್ಯೆಗಳನ್ನು ನಮ್ಮ ಒಳ ಮನಸ್ಸಿನ ಜ್ಞಾನದಿಂದ ಸರಿ ಪಡಿಸಿಕೊಳ್ಳಬಹುದು. ಆದರೇ, ನಾವೆಂದೂ ಹಾಗೆ ಮಾಡುವ ಪ್ರಯತ್ನವನ್ನೂ ಕೂಡ ಮಾಡುವುದಿಲ್ಲ. ನಮ್ಮ ಜೀವನಕ್ಕೆ ಏನಾದರೂ ಅರ್ಥವಿದೆಯೇ..? ಈ ವಿಸ್ತಾರ ಜಗತ್ತಿಗೂ ಹಾಗೂ ಜೀವನಕ್ಕೆ ಏನಾದರೂ ಸಂಬಂಧ ಅಥವಾ ಬಂಧನ ಇದೆಯೇ..? ಕಾಣಿಸದೇ ಇರುವುದೇನಾದರೂ ಇದೆಯೇ..? ಏನದು..? ನಮ್ಮ ಜ್ಞಾನಕ್ಕೆ ಮೀರಿ ಇರುವ ಶಕ್ತಿಯೋ ಎನ್ನುವ ಪುಂಖಾನುಪುಂಖ ಪ್ರಶ್ನೆಗಳನ್ನು ನಮ್ಮೊಳಗೆ ತುಂಬಿಸುವುದರ ಜೊತೆಗೆ ಮಾರ್ಮಿಕ ಸರಳ ಸತ್ಯವನ್ನು ಡಿವಿಜಿ ಅದರಲ್ಲಿ ಅವಿತಿಟ್ಟಿದ್ದಾರೆ ಎನ್ನವುದು ಸತ್ಯ.
ನಮ್ಮ ಪ್ರಶ್ನೆಗಳು ನಮ್ಮನ್ನೇ ಕೇಳಿಕೊಂಡು ಮುಂದೂಡುವಂತಿರಬೇಕು ಹೊರತಾಗಿ ಅದನ್ನೂ ಮೀರಿ ಇರಬಾರದು. ಬದುಕಿನ ಸತ್ಯದ ಬಗ್ಗೆ ಹೆಚ್ಚು ಯೋಚನೆ ಮಾಡುವುದಕ್ಕೆ ಹೋದರೇ, ಜೀವನದ ಅರ್ಥ ಸಿಗುವುದಿಲ್ಲ. ಅದು ಜ್ಞಾನ ವೈರಾಗ್ಯಕ್ಕೆ ಕಾರಣವಾಗುತ್ತದೆ ಹೊರತಾಗಿ ಮತ್ತೆ ಯಾವ ವಿಚಾರಕ್ಕೂ ಹತ್ತಿರವಾಗುವುದಿಲ್ಲ ಎನ್ನುವುದನ್ನು ನಾವು ಅರಿತುಕೊಂಡಿರಬೇಕು.
ನಮ್ಮ ಸಮಸ್ಯೆಗಳು ಯಾವುದು ಎನ್ನುವುದನ್ನು ಅರಿತುಕೊಳ್ಳಲಾರದಷ್ಟು ದಡ್ಡರು ನಾವಲ್ಲ. ಮನುಷ್ಯನಿಗೆ ಇರುವ ಸಾಮಾನ್ಯ ಜ್ಞಾನಕ್ಕೆ ಕಾಣಿಸದೇ ಇರುವುದು ಯಾವುದೂ ಇಲ್ಲ. ಅಂತಾದ ಮೇಲೆ ನಾವು ನಮ್ಮ ಬದುಕನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಯಾವ ಹಿಂದೇಟು ಹಾಕುವ ಅಗತ್ಯವಿಲ್ಲ. ನಮ್ಮ ಸಂತೋಷ, ದುಃಖ, ದುಮ್ಮಾನ, ಹಿತ, ಅಹಿತ ಎಲ್ಲಾ ಭಾವಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಜಗತ್ತಿನಲ್ಲಿ ಅತ್ಯಂತ ಅಗ್ಗದ ಆಪ್ತ ಸಮಾಲೋಚನೆ ಇದೆ. ಅದು ಹೆಚ್ಚಿನರಿಗೆ ಗೊತ್ತಿಲ್ಲದೇ ಇರುವುದೇ ದೊಡ್ಡ ದುರಂತ.
ನಮ್ಮ ಸಾಮಾನ್ಯವಾದ ಎಲ್ಲಾ ಭಾವನೆಗಳಿಗೆ ಸ್ಪಂದಿಸಿ ನಮ್ಮ ಮನಸ್ಸನ್ನು ನಾವು ಕೇಳುವ ಪ್ರಶ್ನೆಗಳು, ಅದರಿಂದ ದೊರಕುವ ಉತ್ತರವೇ ನಮ್ಮ ಜೀವನವನ್ನು ಸರಳೀಕರಿಸುತ್ತದೆ ಎನ್ನವುದಕ್ಕೆ ಅನುಮಾನ ಇಲ್ಲ. ನಮ್ಮ ಜ್ಞಾನ ಶಕ್ತಿಯನ್ನು ಮೀರಿ ಯಾವುದೂ ಇಲ್ಲ. ನಮಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವಂತದ್ದು, ಹಾಗೂ ನಮಗೆ ಸರದೂಗಿಸಿಕೊಳ್ಳಲಾಗದಂತದ್ದು ಯಾವುದೂ ಇಲ್ಲ ಎನ್ನುವುದೇ ಈ ಮೇಲಿನ ಕಗ್ಗದ ತಾತ್ಪರ್ಯ.
ಜಗತ್ತಿನ ಸಂಬಂಧ ನಮಗೆಷ್ಟು ಆಪ್ತ ಎನ್ನುವ ಅರಿವು ನಮಗೆ ಎಳವೆಯಿಂದಲೇ ತಿಳಿದಿರುವಾಗ ಜೀವನದ ಅರ್ಥವನ್ನು ತುಂಬಾ ಯೋಚನೆ ಮಾಡುತ್ತಾ ಕೂರುವ ಅಗತ್ಯವಿಲ್ಲ.
ಒಗಟೇನಿ ಸೃಷ್ಟಿ..? ಬಾಳಿನರ್ಥವದೇನು..?ಬಗೆದು ಬಿಡಿಸುವವರಾರು ಸೋಜಿಗವದನಿದನು..? ||
ಜಗವ ನಿರವಿಸಿದ ಕೈಯೊಂದಾದೊಡೇಕಿಂತು?
ಬಗೆ ಬಗೆಯ ಜೀವಗತಿ – ಮಂಕುತಿಮ್ಮ ಡಿವಿಜಿ ಅವರು ಈ ಕಗ್ಗದಲ್ಲಿಯೂ ಈ ಹಿಂದಿನ ಕಗ್ಗದ ಭಾವಾರ್ಥವನ್ನೇ ಹೇಳುತ್ತಾರೆ. ಈ ಪ್ರಪಂಚವನ್ನು ಒಂದು ಕಾಣದ ಕೈ ನಿರಮಿಸಿದೆ ಎಂದು ಹೇಳುವುದಾದರೇ ಇಲ್ಲಿರುವ ವಿವಿಧ ರೀತಿಯ ಜೀವ ಗತಿಗಳು ಯಾಕೆ.. ? ಎನ್ನುವ ಪ್ರಶ್ನೆಯೊಳಗೆ ‘ಕಾಣದ ಕೈ’ ನಮ್ಮ ಮನಸ್ಸು ಎನ್ನುವ ಅರ್ಥವೂ ಅಡಗಿದೆ. ನಮ್ಮ ಬದುಕಿನ ನಿರ್ದೇಶಕ ಹಾಗೂ ನಿರ್ಮಾಪಕ ನಾವೇ ಆಗಬೇಕು. ಮತ್ತದು ನಮಗೆ ಕಾಣಿಸಿದ ಕೈ ಅಂದರೇ ಮನಸ್ಸಿನ ಪ್ರೇರಣೆಯಿಂದಲೇ ಆಗಬೇಕು ಎನ್ನುವ ತಾತ್ಪರ್ಯದಲ್ಲಿ ಎಷ್ಟು ಸರಳ ತತ್ವ ಇದೆ ಎನ್ನುವುದನ್ನು ಗಮನಿಸುವ ಪ್ರಯತ್ನಕ್ಕೆ ಡಿವಿಜಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ ಎಂದೆನ್ನಿಸಿ ಬಿಡುತ್ತದೆ. ಒಟ್ಟಿನಲ್ಲಿ, ಒಟ್ಟು ಬದುಕಿನ ಸಾರವನ್ನು ಹೇಳುವ ಆಪ್ತ ಸ್ನೇಹಿತನಾಗಿ ಡಿವಿಜಿಯವರ ಕಗ್ಗಗಳು ಕಾಣಿಸುತ್ತವೆ. -ಶ್ರೀರಾಜ್ ವಕ್ವಾಡಿ