ಮಂಡ್ಯ: ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಲಿಂಗಾಯತರು ಯಾವುದೇ ಪಕ್ಷದ ಅಡಿಯಾಳುಗಳಲ್ಲ. ಸಮುದಾಯದ ಮತಗಳು ಮಾರಾಟಕ್ಕಿಲ್ಲ ಎಂದು ಶ್ರೀಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
ನಗರದ ಹಿಂದಿ ಭವನದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ, ಲಿಂಗಾಯತ ಮಹಾಸಭಾ ಟ್ರಸ್ಟ್ ಉದ್ಘಾಟನೆ ಹಾಗೂ ನೂರು ಮಂದಿ ಸಾಧಕರಿಗೆ “ಬಸವಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗಬೇಕೆಂಬ ಹೋರಾಟ ಇನ್ನೂ ಜೀವಂತವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಳ್ಳದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಪ್ರಜ್ಞೆ ಜಾಗೃತವಾಗಲಿ: ಲಿಂಗಾಯಿ ತರಲ್ಲಿ ರಾಜಕೀಯ ಪ್ರಜ್ಞೆ ಜಾಗೃತವಾಗಬೇಕು. ಬಸವಾದಿ ಶರಣರ ಪರಂಪರೆಯಲ್ಲಿ ಲಿಂಗಾಯತ, ವೀರಶೈವ ಎಂಬುದು ಬೇರೆ ಬೇರೆಯಲ್ಲ. ಲಿಂಗವನ್ನು ಪೂಜಿಸುವವರೆಲ್ಲರೂ ಲಿಂಗಾಯತರೇ. ಬಣಜಿಗ ಲಿಂಗಾಯಿತ, ಶೆಟ್ಟಿ ಲಿಂಗಾಯಿತ, ಪಂಚಮಶಾಲಿ ಮುಂತಾಗಿ ಏನೆಲ್ಲ ಹೆಸರಿನಿಂದ ಕರೆದರೂ ಒಟ್ಟಾರೆ ನಾವು ಲಿಂಗಾಯತರು ಎಂಬುದನ್ನು ಅರಿಯಬೇಕು ಎಂದು ಹೇಳಿದರು.
ಮುನ್ನೂರು ವರ್ಷ ನಮ್ಮನ್ನಾಳಿದ ಬ್ರಿಟಿಷರು ತಮ್ಮ ಪಾರ್ಲಿಮೆಂಟ್ ಮುಂಭಾಗ ಅಶ್ವಾರೂಢ ಬಸವೇಶ್ವರರ ಪ್ರತಿಮೆ ಸ್ಥಾಪಿಸಿದ್ದಾರೆ. ಎಂದರೆ ವಿಶ್ವದಲ್ಲೇ ಪ್ರಥಮ ಕಲ್ಯಾಣ ಸಂಸತ್ ಸ್ಥಾಪಿಸಿದ್ದ ವಿಶ್ವಗುರು ಬಸವಣ್ಣನವರನ್ನು ಬ್ರಿಟಿಷರು ಅರ್ಥ ಮಾಡಿಕೊಂಡಷ್ಟು ನಮ್ಮ ದೇಶದ ಜನರೇ ಇನ್ನೂ ಅರ್ಥಮಾಡಿಕೊಂಡಿಲ್ಲ. ಲಿಂಗಾಯತ ಸಮಾಜ ಆಗ್ರಹಿಸದಿದ್ದರೂ, ಭಾರತ ಸರ್ಕಾರ ಕೇಳದಿದ್ದರೂ ಬ್ರಿಟಿಷರು ಬಸವಣ್ಣನ ಪ್ರತಿಮೆ ಸ್ಥಾಪಿಸಿ ಅಗ್ರಮಾನ್ಯ ಸ್ಥಾನ ಕಲ್ಪಿಸಿದ್ದಾರೆ ಎಂದರು.
ದೇವಾಲಯ ಸಂಸ್ಕೃತಿಯಲ್ಲ: ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನಶ್ರೀ ಕುಮಾರಸ್ವಾಮಿ ಮಾತನಾಡಿ, ಲಿಂಗಾಯಿತರದ್ದು ದೇವಾಲಯ ಸಂಸ್ಕೃತಿಯಲ್ಲ. ದೇಹಾಲಯದ ಸಂಸ್ಕೃತಿ ಉಳ್ಳವರು. ದೇವಾಲಯವ ಮಾಡಿದರೆ ನಾನೇನು ಮಾಡಲಿ ಎನ್ನ ಕಾಲೇ ಕಂಬ ಎನ್ನ ಶಿರವೇ ಹೊನ್ನ ಕಳಶವಯ್ಯ ಎನ್ನುವ ಮೂಲಕ ಬಸವಣ್ಣನವರು ಭಕ್ತಿಪ್ರಿಯ ಕೂಡಲ ಸಂಗಮದೇವ ಎಂದಿದ್ದಾರೆ. ಹಾಗಾಗಿ ಬಸವಣ್ಣ ಓರ್ವ ವ್ಯಕ್ತಿಯಲ್ಲ, ಒಂದು ಶಕ್ತಿಯಾಗಿದ್ದಾರೆ. ಲಿಂಗಾಯತ ಮಹಾಸಭಾ ಟ್ರಸ್ಟ್ ಮುಂದೆ ದೊಡ್ಡ ಜವಾಬ್ದಾರಿಯಿದೆ ಎಂದರು.
ಈ ವೇಳೆ “ಬಸವಮಾರ್ಗ’ ಕರಪತ್ರವನ್ನು ಕನ್ನಡ ಹೋರಾಟಗಾರ ಅಶೋಕ್ ಜಿ.ಲೋನಿ ಬಿಡುಗಡೆಗೊಳಿಸಿದರು.
ಲಿಂಗಾಯತ ಮಹಾಸಭಾ ಟ್ರಸ್ಟ್ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್ ಎಂ.ಬೆಟ್ಟಹಳ್ಳಿ, ಟ್ರಸ್ಟ್ ಕಾರ್ಯಾಧ್ಯಕ್ಷ ಎಂ.ಶಿವಕುಮಾರ್, ಮಲ್ಲಿಕಾರ್ಜುನ್, ನಿಜಗುಣ, ವಿ.ಎಂ.ಮಹೇಂದ್ರ ಮತ್ತಿತರರಿದ್ದರು.
ಬಸವಮಾರ್ಗದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಕಂದಾಚಾರಗಳು, ಮೂಢನಂಬಿಕೆಗಳಿಂದ ನಾವು ಹೊರಬರ ಬೇಕು. ನಮ್ಮ ತಂದೆ-ತಾಯಿಯರನ್ನು ಗೌರವಿಸಬೇಕು.
-ಎಂ.ಸುಬ್ರಹ್ಮಣ್ಯ, ಜಿಲ್ಲಾಧ್ಯಕ್ಷ, ಅಖೀಲ ಭಾರತ ಲಿಂಗಾಯತ ಮಹಾಸಭಾ