Advertisement

ವಿಶ್ರಾಂತ ಕುಲಪತಿ ಘಂಟಿಗೆ ಡಾ|ಶಿಮುಶ ಪ್ರಶಸ್ತಿ

06:22 PM Dec 28, 2021 | Team Udayavani |

ಹಾವೇರಿ: ಶರಣ ಸಂಸ್ಕೃತಿ ಉತ್ಸವ ನಿಮಿತ್ತ ನೀಡುವ ‘ಡಾ| ಶಿಮುಶ’ ಪ್ರಶಸ್ತಿಯನ್ನು ಪ್ರಸಕ್ತ ವರ್ಷ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ| ಮಲ್ಲಿಕಾ ಘಂಟಿ ಅವರಿಗೆ ನೀಡಿ ಗೌರವಿಸಲಾಯಿತು.

Advertisement

ನಗರದ ಬಸವಕೇಂದ್ರ ಹೊಸಮಠದಲ್ಲಿ ಲಿಂ| ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಶ್ರೀ ಹಾಗೂ ಅಥಣಿ ಮುರುಘೇಂದ್ರ ಶ್ರೀಗಳ ಸ್ಮರಣೋತ್ಸವ ನಿಮಿತ್ತ ಸೋಮವಾರ ಏರ್ಪಡಿಸಿದ್ದ ಶರಣ ಸಂಸ್ಕೃತಿ ಉತ್ಸವ-2021ದಲ್ಲಿ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು.

ಡಾ| ಮಲ್ಲಿಕಾ ಘಂಟಿ ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಅಗಸನಬಾಳ ಗ್ರಾಮದವರಾಗಿದ್ದು, ದಲಿತ, ಬಂಡಾಯ ಮೊದಲಾದ ಪ್ರಗತಿಪರ ಚಳವಳಿಗಳ ಹಿನ್ನೆಲೆಯಲ್ಲಿ ಬೆಳೆದು ಬಂದಿದ್ದಾರೆ. ಶ್ರೀಯುತರು ಹಂಗರಗಿ ಮತ್ತು ಬಾದಾಮಿಯಲ್ಲಿ ಪ್ರೌಢಶಿಕ್ಷಣ ಪಡೆದು, ಬಾಗಲಕೋಟೆ ಮತ್ತು ಜಮಖಂಡಿಯಲ್ಲಿ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಪದವಿ ಪಡೆದರು.

ಕೆರೂರು ಎಂಎಚ್‌ಎಂ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಕಲಬುರಗಿ (ಗುಲಬರ್ಗ) ವಿಶ್ವವಿದ್ಯಾಲಯ, ಸೊಂಡೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2015ರಿಂದ 2018ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಈ ಹೆಣ್ಣುಗಳೇ ಹೀಗೆ, ರೊಟ್ಟಿ ಮತ್ತು ಹುಡುಗಿ, ಬೆಲ್ಲದಚ್ಚು ಮತ್ತು ಇರುವೆ ದಂಡು ಸೇರಿದಂತೆ ಮೊದಲಾದ ಕವನ ಸಂಕಲನಗಳು. ತನುಕರಗದವರಲ್ಲಿ, ಭೂಮಿಯ ಮೇಲೆ ವಿಮರ್ಶಾ ಕೃತಿಗಳು. “ಚಾಚ’ ನಾಟಕ ಮೊದಲಾಗಿ ಅನೇಕ ಕೃತಿ ನಾಡಿಗೆ ಕಾಣಿಕೆ ನೀಡಿದ್ದಾರೆ. ಅಲ್ಲದೇ ಇವರು ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮಠದಿಂದ ನೀಡುವ ಡಾ| ಶಿಮೂಶ ಪ್ರಶಸ್ತಿ 50 ಸಾವಿರ ರೂ. ಮೊತ್ತ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದು, ಇದುವರೆಗೆ 10 ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Advertisement

ಮೊದಲ ಬಾರಿಗೆ ಮಹಿಳಾ ಸಾಧಕರನ್ನು ಗುರುತಿಸಿ ಪ್ರಸಕ್ತ ಸಾಲಿನಲ್ಲಿ ಡಾ| ಮಲ್ಲಿಕಾ ಘಂಟಿ ಅವರಿಗೆ ಮಠದಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಶಿಗ್ಗಾವಿ ವಿರಕ್ತಮಠದ ಸಂಗನಬಸವ ಸ್ವಾಮೀಜಿ, ಸವಣೂರಿನ ದೊಡ್ಡಹುಣಸೇಕಲ್ಮಠದ ಚನ್ನಬಸವ ಸ್ವಾಮೀಜಿ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹಿರೇಕೆರೂರು ಸಿಇಎಸ್‌ ವಿದ್ಯಾಸಂಸ್ಥೆಯ ಎಸ್‌.ಎಸ್‌. ಪಾಟೀಲ, ಶರಣ ಸಂಸ್ಕೃತಿ ಉತ್ಸವದ ಅಧ್ಯಕ್ಷ ದಯಾನಂದ ಯಡ್ರಾಮಿ, ಕಾರ್ಯಾಧ್ಯಕ್ಷ ಶಂಕರ ಬಿಸರಳ್ಳಿ, ನಾಗೇಂದ್ರ ಕಟಕೋಳ, ರಾಜೇಂದ್ರ ಸಜ್ಜನರ, ರುದ್ರೇಶ ಚಿನ್ನಣ್ಣನವರ, ಪರಮೇಶ್ವರಪ್ಪ ಮೇಗಳಮನಿ, ಡಾ| ಬಸವರಾಜ ವೀರಾಪುರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next