Advertisement

Dr. C.J. Sashidhar: ಸಹಕಾರ ಕ್ಷೇತ್ರದಲ್ಲಿ ಡಾ| ಸಿ.ಜೆ. ಶಶಿಧರ್‌ ಸಾಧನೆ

03:45 PM Aug 15, 2023 | Team Udayavani |

ಮನಸ್ಸು ಮಾಡಿದ್ದರೆ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಸಾಧನೆ ಜತೆಗೆ ದುಡಿಮೆ ಮಾಡಬಹುದಿತ್ತು. ಆದರೆ ರಾಷ್ಟ್ರೀಕೃತ ಬ್ಯಾಂಕುಗಳು ಜನಸ್ನೇಹಿಯಲ್ಲ ಎಂಬ ಉದ್ದೇಶದಿಂದ ತಾವೇ ಕೆಲವು ನಿರ್ದೇಶಕರ ಜತೆಗೂಡಿ “ಅರಿವಿನಮನೆ ಸೌಹಾರ್ದ ಸಹಕಾರ ಸಂಘ’ ಸ್ಥಾಪಿಸಿ ಜನಸೇವೆಗೆ ಬದ್ಧವಾಗಿ ಸಹಕಾರ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಡಾಣ ಸಿ.ಜೆ.ಶಶಿಧರ್‌ ಅವರ ಸಾಧನೆ ಅಪಾರ.

Advertisement

ಶಶಿಧರ ಅವರ ಹುಟ್ಟೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಸಿ.ನಂದೀಹಳ್ಳಿಯಾದರೂ ಅವರ ಕಾರ್ಯಕ್ಷೇತ್ರವೆಲ್ಲಾ ಕಡೂರು ತಾಲ್ಲೂಕು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಶಶಿಧರ ಮದುವೆಯಾಗಿರುವುದು ತರೀಕೆರೆ ತಾಲೂಕಿನ ಮಲ್ಲೇನಹಳ್ಳಿಯ ಕೃಷಿಕ ರುದ್ರಪ್ಪ ಮತ್ತು ಸರ್ವಮಂಗಳಾ ದಂಪತಿಯ ಪುತ್ರಿಯನ್ನು. ಹಾಗಾಗಿ ಸಹಕಾರ ಕ್ಷೇತ್ರದ ಅವರ ಕಾರ್ಯ ಚಟುವಟಿಕೆ ಕಡೂರು ತಾಲೂಕಿನಿಂದಲೇ ಶುರುವಾಗಿದೆ.

ಕೃಷಿಕ ಜಯಣ್ಣ ಮತ್ತು ಗಿರಿಜಮ್ಮ ಅವರ ಮಗನಾಗಿ ಹುಟ್ಟಿ ಪ್ರಾಥಮಿಕ ಮಾಧ್ಯಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಆರಂಭಿಸಿದ ಇವರು ನಂತರ ಪಿಯುಸಿ ವ್ಯಾಸಂಗಕ್ಕೆ ವಾಸವಿ ಪದವಿ ಪೂರ್ವ ಕಾಲೇಜಿಗೆ ಸೇರಿದರು. ಬಳಿಕ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬಿಇ ವ್ಯಾಸಂಗ ಮುಗಿಸಿದರು. ನಂತರ ತಮ್ಮ ವೃತ್ತಿಗೆ ಅನುಗುಣವಾಗಿ ನೌಕರಿ ಹುಡುಕದೇ ಮೈಸೂರು, ಕೊಲ್ಕತ್ತಾ, ದೆಹಲಿ, ಪನಾಮ ಊರುಗಳಲ್ಲಿ ಉನ್ನತ ವ್ಯಾಸಂಗ ಪಡೆದು ಗಣಿತ ವಿಭಾಗದ ಹೈಯರ್‌ ಇಂಜಿನಿಯರಿಂಗ್‌ ಪಿಹೆಚ್‌ಡಿ ಪದವಿಯನ್ನೂ ಪಡೆದಿರುವುದು ಸಾಧನೆಯೇ ಸರಿ.

ವ್ಯಾಸಂಗ ಬಳಿಕ ಬೆಂಗಳೂರಿನಲ್ಲಿ ಒಂದು ವರ್ಷ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡಿದ ಶಶಿಧರ್‌ ನಂತರ ಚಾರ್ಟ್‌ಡ್‌ ಇಂಜಿನಿಯರಿಂಗ್‌ ಕ್ಷೇತ್ರದಲ್ಲಿ ತಮ್ಮದೇ ಆದ ಸ್ವಂತ ಕಂಪನಿ ಆರಂಭಿಸಿದರು. ಅದರಲ್ಲೂ ಹೆಚ್ಚು ದಿನ ಇರದೇ ತಮ್ಮ ಕನಸಿನ ಕ್ಷೇತ್ರವಾದ “ಅರಿವಿನಮನೆ ಸೌಹಾರ್ದ ಸಹಕಾರ ಸಂಘ’ ನಿಯಮಿತ ಸಂಘವನ್ನು 2015ರಲ್ಲಿ ತುಮಕೂರಿನಲ್ಲಿ ಆರಂಭಿಸಿದರು. ಹತ್ತು ಜನ ನಿರ್ದೇಶಕರ ಮಂಡಳಿ ಸ್ಥಾಪಿಸಿ ಆರಂಭಗೊಂಡ ಸಂಘ ನಿಧಾನವಾಗಿ ಭದ್ರ ನೆಲೆ ಕಂಡುಕೊಂಡಿತು.

ಮದುವೆಯಾದ ಬಳಿಕ 2019ರಲ್ಲಿ ಕಡೂರಿನಲ್ಲಿ ಈ ಸಂಘದ ಶಾಖೆ ತೆರೆಯಲು ಮುಂದಾದ ಶಶಿಧರ್‌ ನಿರ್ದೇಶಕರ ಒತ್ತಾಯ ಮೇರೆಗೆ ಕಡೂರು ಶಾಖೆಯನ್ನೇ ಕೇಂದ್ರ ಕಚೇರಿಯನ್ನಾಗಿ ಮಾಡಿ ತುಮಕೂರು ಕಚೇರಿಯನ್ನೇ ಶಾಖೆಯನ್ನಾಗಿ ಪರಿವರ್ತಿಸಿದರು. ಆ ಬಳಿಕ ಅವರು ಹಿಂದೆ ತಿರುಗಿ ನೋಡಲೇ ಇಲ್ಲ. ಎರಡೂ ಶಾಖೆಗಳು ಏರುಗತಿಯಲ್ಲಿ ಪ್ರಗತಿ ಹೊಂದಲು ಶುರು ಮಾಡಿದವು.
ಯಾವಾಗ ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲ್‌ ಸೇವೆಗೆ ಒತ್ತು ನೀಡಿದರೋ ಆಗ ಅರಿವಿನಮನೆ ಸಂಘದ ಅದೃಷ್ಟವೇ ಬದಲಾಯಿತು. ಗ್ರಾಹಕರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮಾದರಿಯಲ್ಲಿಯೇ ಡಿಜಿಟಲ್‌ ಸೇವೆಗಳನ್ನು ನೀಡತೊಡಗಿತು. ಇದರ ಹಿಂದೆ ಶಶಿಧರ್‌ ಅವರ ಮಾಸ್ಟರ್‌ ಮೈಂಡ್‌ ಇದೆ ಎಂಬುದನ್ನು ಮರೆಯಲು ಸಾಧ್ಯವಿಲ್ಲ.

Advertisement

ಇದೆಲ್ಲದರ ನಡುವೆ ಒಂದು ಕೊರತೆ ಅವರನ್ನು ಸದಾ ಕಾಡುತ್ತಲೇ ಇತ್ತು. ಅರಿವಿನಮನೆ ಪ್ರತಿಷ್ಠಾನ ಸ್ಥಾಪಿಸಿದರಲ್ಲದೆ ಜತೆಗೆ ಒಂದು ಕೋ ಆಪರೇಟಿವ್‌ ಸೊಸೈಟಿ ಯಾಕೆ ಮಾಡಬಾರದೆಂಬ ಅವರ ಆಲೋಚನೆಗೆ 2016ರಲ್ಲಿ ಚಾಲನೆ ಸಿಕ್ಕಿತು. ಆ ಮೂಲಕ ಗ್ರಾಹಕರಿಗೆ ಉತ್ಕೃಷ್ಟ ದರ್ಜೆಯ ಜೇನುತುಪ್ಪ ಮತ್ತಿತರೆ ಉತ್ಪನ್ನ ನೀಡಲು ಆರಂಭಿಸಿದರು.

ಪರಿಣಾಮವಾಗಿ ಇಂದು 250 ಜನರಿಗೆ ಪ್ರತ್ಯಕ್ಷ  ಪರೋಕ್ಷವಾಗಿ ಉದ್ಯೋಗ ಸಿಕ್ಕಿದೆ. ಭದ್ರಾವತಿ, ಶಿವಮೊಗ್ಗ ಹಾಗೂ ಬಳ್ಳಾರಿ
ಜಿಲ್ಲೆಗಳಲ್ಲಿ ಈ ಉತ್ಪನ್ನಗಳ ಮಳಿಗೆಗಳಿವೆ. ಇನ್ನೂ ವಿಸ್ತರಣೆಗೆ ಚಿಂತನೆ ನಡೆದಿದೆ. ಕಿರಿಯ ವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿರುವ ಶಶಿಧರ್‌ ಅವರು ಸಂಘದ ಅಭಿವೃದ್ಧಿಗೆ ಹತ್ತಾರು ಆಲೋಚನೆಗಳನ್ನು ಹೊಂದಿದ್ದಾರೆ. ಇವರ ಸಾಧನೆಗೆ ಒತ್ತಾಸೆಯಾಗಿ ಆಡಳಿತ ಮಂಡಳಿಯ ಎರಡೂ ಶಾಖೆಯ ನಿರ್ದೇಶಕರು ಬೆಂಬಲಕ್ಕೆ ಇದ್ದಾರೆ.

ಪ್ರಾಣಿ ಕಲ್ಯಾಣ ಪ್ರತಿನಿಧಿಯಾಗಿ ನೇಮಕ
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ದೆಹಲಿಯ ಪ್ರಾಣಿ ಕಲ್ಯಾಣ ಪ್ರತಿನಿಧಿಯಾಗಿ 5 ವರ್ಷಗಳ ಅವಧಿಗೆ ಡಾಣ ಸಿ.ಜೆ. ಶಶಿಧರ್‌ ಅವರು ನೇಮಕವಾಗಿದ್ದಾರೆ.

ಭಾರತ ಸರ್ಕಾರದ ಮೀನುಗಾರಿಕೆ, ಪಶುಪಾಲನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಈ ನೇಮಕ ಮಾಡಿದ್ದು, ಪ್ರಾಣಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಸಮಗ್ರ ಅನುಷ್ಠಾನ ಮಾಡುವುದು, ಪ್ರಾಣಿಗಳ ಮೇಲೆ ಹಿಂಸೆ, ಅಕ್ರಮ ಸಾಗಾಟ ಮಾಡುವುದು, ಹಸು ಹಂದಿ ಪಕ್ಷಿಗಳನ್ನು ಕಾನೂನು ಉಲ್ಲಂಘನೆ ಮಾಡಿ ಕ್ರೌರ್ಯವನ್ನು ಮಾಡುವುದನ್ನು ತಡೆಯುವುದು ಇಂತಹ ಅನೇಕ ವಿಷಯಗಳ ಮೇಲೆ  ಹದ್ದಿನ ಕಣ್ಣಿಟ್ಟು ಕಾದು ಸಂಬಂಧಿಸಿದ ಅಧಿಕಾರಿಗಳ ಮೂಲಕ ನ್ಯಾಯ ನೀಡಿಸುವುದು ಹಾಗೂ ಪ್ರಾಣಿ ಪಕ್ಷಿಗಳನ್ನು ಸಂರಕ್ಷಿಸಿ ಪೋಷಿಸುವ ಕೆಲಸವಾಗಿದೆ.

ಶಾಲಾ ಕಾಲೇಜುಗಳಲ್ಲಿ ಪ್ರಾಣಿ ದೌರ್ಜನ್ಯದ ಬಗ್ಗೆ ಅರಿವು ಮೂಡಿಸುವುದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾಣಿ ದೌರ್ಜನ್ಯ ತಡೆಗಟ್ಟುವ ಪ್ರತಿಬಂಧಕ ಸಂಸ್ಥೆಯ ಮೂಲಕ ವನ್ಯಜೀವಿಗಳ ಮೇಲೆ ಆಗುವ ಅಪರಾಧ, ಕ್ರೌರ್ಯಗಳನ್ನು ತಡೆಯುವುದು, ಇಂತಹ ವಿಷಯಗಳಲ್ಲಿ ದಾಖಲಾಗುವ ದೂರುಗಳಿಗೆ ಐಒ ಆಗಿ ಕಾರ್ಯನಿರ್ವಹಿಸಿ, ಸಮಗ್ರ ವರದಿಯನ್ನು ನೀಡುವುದು ಇವರ ಕರ್ತವ್ಯವಾಗಿರುತ್ತದೆ.

ಗೋಶಾಲೆಗಳನ್ನು ತೆರೆಯಲು ಉತ್ತೇಜನ ನೀಡುವುದು, ಅವರಿಗೆ ಅಗತ್ಯ ಮಾಹಿತಿ ನೀಡುವುದು, ಪ್ರತಿ ಜಿಲ್ಲೆಗಳಲ್ಲಿ ಪ್ರಾಣಿಗಳ ಆರೈಕೆ ಕೇಂದ್ರ ತೆರೆದು ಫ‌ಸ್ಟ್‌ಏಡ್‌ ಕೇಂದ್ರಗಳನ್ನು ತೆರೆದು ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಕೆಲಸದ ಬಗ್ಗೆ ಕಾರ್ಯಾಗಾರ ನಡೆಸುವುದು. ಸಾಕುಪ್ರಾಣಿ, ವನ್ಯ ಪ್ರಾಣಿಗಳ ರಕ್ಷಣೆಗೆ ಪೊಲೀಸ್‌ ಇಲಾಖೆಯೊಂದಿಗೆ ಸಂಬಂಧ ಇಟ್ಟುಕೊಂಡು ಅವರೊಂದಿಗೆ ವನ್ಯ ಪ್ರಾಣಿಗಳನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಪ್ರಾಣಿ ಕಲ್ಯಾಣ ಪ್ರತಿನಿಧಿಯ ಉದ್ದೇಶವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next