ಧಾರವಾಡ: ಹುಬ್ಬಳ್ಳಿಯ ಕಿಮ್ಸ್ ನಿರ್ದೇಶಕ ಸ್ಥಾನಕ್ಕೆ ಡಾ|ದತ್ತಾತ್ರೇಯ ಬಂಟ್ ಅನರ್ಹರು ಎಂಬುದನ್ನು ಹೈಕೋರ್ಟ್ ಪೀಠವೇ ಆದೇಶ ನೀಡಿದ್ದು, ಹೀಗಾಗಿ ಕೂಡಲೇ ಆ ಸ್ಥಾನದಿಂದ ಬಂಟ್ ಅವರನ್ನು ವಜಾ ಮಾಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಮುಖ್ಯಸ್ಥ ಎಸ್. ಆರ್.ಹಿರೇಮಠ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಟ್ ಅವರ ಮೇಲೆ ಬಂದಿರುವ ಆರೋಪಗಳ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳಬೇಕು. ದಕ್ಷ ಹಾಗೂ ಪ್ರಾಮಾಣಿಕರನ್ನು ಕಿಮ್ಸ್ ನಿರ್ದೇಶಕರನ್ನಾಗಿ ಸರಕಾರ ನೇಮಕಗೊಳಿಸಬೇಕು ಎಂದು ಒತ್ತಾಯಿಸಿದರು.
ಡಾ|ಬಂಟ್ ಅವರ ಮೇಲೆ ಸಾಕಷ್ಟು ಆರೋಪ ಇರುವ ಹಿನ್ನೆಲೆಯಲ್ಲಿ ಸಮಾಜ ಪರಿವರ್ತನ ಸಮುದಾಯ ಸಂಸ್ಥೆ 2015ರಲ್ಲಿ ಸರ್ಕಾರಕ್ಕೆ ದಾಖಲೆಗಳ ಸಮೇತ ದೂರು ನೀಡಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಂಡಿದಿಲ್ಲ. ಇದೀಗ ಡಾ| ಜಾತಾ ಗಿರಿಯನ್ ಅವರು ಹೈಕೋರ್ಟ್ ಮೆಟ್ಟಿಲೇರಿದ ಪರಿಣಾಮ ವಿಚಾರಣೆ ನಡೆಸಿದ ನ್ಯಾಯಾಲಯವು ಕಳೆದ ಮಾ.16ರಂದು ಬಂಟ್ ನೇಮಕಾತಿಯನ್ನು ಅನರ್ಹಗೊಳಿಸಿದೆ ಎಂದರು.
ಕಿಮ್ಸ್ ನಿರ್ದೇಶಕರಾಗಲು ಐದು ವರ್ಷಗಳ ಕಾಲ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ ಅನುಭವ ಇರಬೇಕೆಂಬ ನಿಯಮವಿದೆ. ನೋಟಿμಕೇಶನ್ ವೇಳೆ ಅವರು ಐದು ವರ್ಷ ಪೂರೈಸಿಲ್ಲ. ಅಲ್ಲದೇ, ಅನಾರೋಗ್ಯದ ನೆಪದಿಂದ ರಜೆ ಪಡೆದ ಡಾ|ಬಂಟ್ ಅನಧಿಕೃತ ವಿದೇಶ ಪ್ರವಾಸ ಮಾಡಿ ಹಣ ಗಳಿಸಿದ್ದಾರೆ ಎಂಬ ಗಂಭೀರ ಆರೋಪವಿದೆ.
ಇವರ ವಿರುದ್ಧ ಹಲವು ಸರ್ಕಾರಿ ತನಿಖೆಗಳಾಗಿದ್ದು ದೃಢಪಟ್ಟಿವೆ. ಅವರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮರಳಿ ಪಡೆಯಬೇಕು. ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹಾಕುವಂತೆ ಆಗ್ರಹಿಸಿದರು.