Advertisement

ಅಂಬೇಡ್ಕರ್ ಭೇಟಿ ನೀಡಿದ ವಾಡಿ ರಾಷ್ಟ್ರ ಗುರುತಿಸಲಿ

05:05 PM May 12, 2022 | Team Udayavani |

ವಾಡಿ (ಚಿತ್ತಾಪುರ): ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಸ್ಮಾರಕ ನಿರ್ಮಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ನಿರ್ಮಾಣ ಹೋರಾಟ ಸಮಿತಿ ಸರ್ಕಾರಕ್ಕೆ ಮನವಿ ಮಾಡಿದೆ.

Advertisement

ಈ ಕುರಿತು ಗುರುವಾರ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿರುವ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ನಿರ್ಮಾಣ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿಕ್ರಮ ನಿಂಬರ್ಗಾ, ಅಂಬೇಡ್ಕರರು ಭೇಟಿ ನೀಡಿದ ರಾಜ್ಯದ ವಿವಿಧ ಸ್ಥಳಗಳನ್ನು ಗುರುತಿಸಿ ರಾಷ್ಟ್ರೀಯ ಸ್ಮಾರಕವಾಗಿಸಲು ಸರ್ಕಾರ ಬಜೆಟ್‌ನಲ್ಲಿ ಅನುದಾನ ಘೋಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಅಭಿವೃದ್ಧಿಪಡಿಸಲು ಸರ್ಕಾರ ಗುರುತಿಸಿರುವ ರಾಜ್ಯದ ಹತ್ತು ಸ್ಥಳಗಳಲ್ಲಿ ವಾಡಿ ಪಟ್ಟಣವೂ ಸೇರಿದೆ. ಬಾಬಸಾಹೇಬರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ 1944 ರ ಸೆ.20 ಹಾಗೂ 1952ರ ಏ.27 ರಂದು ಎರಡು ಸಲ ವಾಡಿ ಪಟ್ಟಣಕ್ಕೆ ಭೇಟಿ ನೀಡಿರುವ ಕುರಿತು ದಾಖಲೆಗಳಿವೆ. ಪರಿಣಾಮ ವಿವಿಧೆತೆಯಲ್ಲಿ ಏಕತೆ ಮೆರೆಯುತ್ತಿರುವ ಭಾರತಕ್ಕೆ ಪ್ರಜಾಪ್ರಭುತ್ವ ನೆಲೆಯ ಶ್ರೇಷ್ಠ ಸಂವಿಧಾನ ನೀಡಿರುವ ಬಾಸಾಹೇಬ ಡಾ.ಭೀಮರಾವ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಮತ್ತು ಐತಿಹಾಸಿಕ ಕುರುಹುಗಳನ್ನು ಇತಿಹಾಸದ ಪುಟವಾಗಿಸುವ ಅಗತ್ಯವಿದೆ. ವಿಶ್ವ ಮಾನವನ ಹೋರಾಟದ ಚರಿತ್ರೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಮಹತ್ವದ ಜವಾಬ್ದಾರಿ ಸರ್ಕಾರದ ಮೇಲಿದೆ. ಆದ್ದರಿಂದ ವಾಡಿ ಪಟ್ಟಣದಲ್ಲಿ ಸಂಶೋಧನಾ ಕೇಂದ್ರ, ಗ್ರಂಥಾಲಯ ಹಾಗೂ ವಸ್ತು ಸಂಗ್ರಹಾಲಯ ಹೊಂದಿರುವಂತಹ ರಾಷ್ಟ್ರೀಯ ಸ್ಮಾರಕ ನಿರ್ಮಿಸಲು ಹತ್ತು ಎಕರೆ ಜಮೀನು ಮಂಜೂರು ಮಾಡುವ ಜತೆಗೆ 25 ಕೋಟಿ ರೂ. ವಿಶೇಷ ಅನುದಾಮ ಮಂಜೂರು ಮಾಡಬೇಕು ಎಂದು ಸಿಎಂಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ದಲಿತ ಮುಖಂಡರಾದ ಭೀಮಾಶಂಕರ ಸಿಂಧೆ, ರವಿಕುಮಾರ ಕೋಳಕೂರ, ರಘುವೀರ ಪವಾರ, ಖೇಮಲಿಂಗ ಬೆಳಮಗಿ, ಮಲ್ಲೇಶ ನಾಟೀಕಾರ, ಶ್ರವಣಕುಮಾರ ಮೊಸಲಗಿ, ಪರಶುರಾಮ ರಾವೂರ ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next