Advertisement

ಖರ್ಗೆ ಕಲಬುರಗಿಗೆ ವಿನಾಶಕಾರಿ: ಕಮಲ’ಪಾಳಯ ಸೇರಿ ಡಾ|ರಡ್ಡಿ

11:38 PM Mar 22, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವ ಕಲಬುರಗಿಗೆ ವಿನಾಶಕಾರಿ. ಅವರಿಗೆ ಸ್ವಾರ್ಥ ಹೆಚ್ಚಾಗಿದ್ದು, ಅಲ್ಲಿನ ಶಾಸಕರಾರೂ ಲೆಕ್ಕಕ್ಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಜನೋಪಕಾರಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವರ ಕಾರ್ಯ ಬೆಂಬಲಿಸಲು ಬಿಜೆಪಿ ಸೇರಿದ್ದೇನೆ ಎಂದು ಮಾಜಿ ಸಚಿವ ಡಾ|ಎ.ಬಿ.ಮಾಲಕರಡ್ಡಿ ಹೇಳಿದರು.

Advertisement

ರಾಜ್ಯ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಕಲಬುರಗಿಯಲ್ಲಿ ಯಾವುದೇ ತೀರ್ಮಾನವಾಗಬೇಕಾದರೂ ಖರ್ಗೆಯವರ ಮೂಲಕವೇ ನಡೆಯಬೇಕು. ಸ್ಥಳೀಯ ಶಾಸಕರು ಲೆಕ್ಕಕ್ಕಿಲ್ಲ. ನಾನು ಆರು ಬಾರಿ ಶಾಸಕನಾಗಿದ್ದರೂ ಅವಕಾಶ ನೀಡದೆ ತಮ್ಮ ಪುತ್ರನನ್ನು ಸಚಿವರನ್ನಾಗಿ ಮಾಡಿದರು. ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಪುತ್ರನನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವ ಮೂಲಕ ಹಿರಿಯರು ಅವರ ಪುತ್ರನ ಕೈಕೆಳಗೆ ಕೆಲಸ ಮಾಡುವ ಮುಜುಗರ ಸೃಷ್ಟಿಸಿದ್ದರು. ತಮ್ಮ ಕುಟುಂಬದವರಿಗೆ ಮಾತ್ರ ಪ್ರೋತ್ಸಾಹ ಮಾಡುತ್ತಾರೆ. ಅವರ ನಾಯಕತ್ವ ವಿನಾಶಕಾರಿಯಾಗಿದೆ ಎಂದು ವಾಗ್ಧಾಳಿ ನಡೆಸಿದರು.

ಯಡಿಯೂರಪ್ಪ ಮಾತನಾಡಿ, ಹಿರಿಯ ಮುತ್ಸದ್ದಿ ಡಾ|ಎ.ಬಿ.ಮಾಲಕರಡ್ಡಿ ಸಹಿತ ಇತರರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಿದೆ. ಹಲವು ನಾಯಕರು ಪಕ್ಷ ಸೇರಲು ಅಪೇಕ್ಷಿಸುತ್ತಿದ್ದು, ಅವರಿಗೂ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು. ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಹಲವು ನಾಯಕರು ಬಿಜೆಪಿ ಸೇರಿದರು.

ದೊಡ್ಡ ಅಂತರದಲ್ಲಿ ಗೆಲುವು
ರಾಜ್ಯದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾಗಿದೆ. ಉಳಿದ 7 ಕ್ಷೇತ್ರ ಗಳ ಅಭ್ಯರ್ಥಿಗಳ ಪಟ್ಟಿಯೂ ಸದ್ಯದಲ್ಲೇ ಬಿಡುಗಡೆ ಯಾಗಲಿದೆ. ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಡಾ| ಉಮೇಶ್‌ ಜಾಧವ್‌ ಅವರು ಎಲ್ಲ ಸಮುದಾಯ, ವರ್ಗದವರ ಒಪ್ಪಿತ ಅಭ್ಯರ್ಥಿ ಎನಿಸಿದ್ದಾರೆ. ಅವರು ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಬಿಎಸ್‌ವೈ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next