Advertisement

ಪೇಟೆ ವೈದ್ಯರಿಗೆ ಹಳ್ಳಿ ದರ್ಶನ ಕಡ್ಡಾಯ

03:45 AM Jul 07, 2017 | Team Udayavani |

ಬೆಂಗಳೂರು: ಗ್ರಾಮಾಂತರ ಪ್ರದೇಶದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿರುವುದರಿಂದ, ಇದೀಗ ಆರೋಗ್ಯ ಇಲಾಖೆ ಕಡ್ಡಾಯವಾಗಿ ಅವರನ್ನು ಹಳ್ಳಿ ಸೇವೆಗೆ ಕಳುಹಿಸಲು ಮುಂದಾಗಿದೆ. ಇದಕ್ಕಾಗಿ ನಗರ-ಪಟ್ಟಣಗಳಲ್ಲಿನ ಸರ್ಕಾರಿ ವೈದ್ಯರನ್ನು ಹಳ್ಳಿಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಕೈ ಹಾಕಿದೆ.

Advertisement

ಈಗಿರುವ ನಿಯಮದಂತೆ ಸರ್ಕಾರಿ ವೈದ್ಯಾಧಿಕಾರಿಗಳು ಗ್ರಾಮೀಣ ಸೇವೆ ಮಾಡಲೇಬೇಕು ಎಂಬ ನಿಯಮವಿದೆ. ಆದರೆ, ಇದು° ಪಾಲಿಸದ ವೈದ್ಯರು ನಗರ-ಪಟ್ಟಣ ಪ್ರದೇಶಗಳಲ್ಲೇ ಠಿಕಾಣಿ ಹೂಡಿದ್ದಾರೆ. ಹೀಗಾಗಿ ಕಡ್ಡಾಯ ಗ್ರಾಮೀಣ ಸೇವೆಯ ನಿಯಮವನ್ನು ಮುಂದಿಟ್ಟುಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನಿಷ್ಠ ಆರು ವರ್ಷ ಹಳ್ಳಿ ಸೇವೆ ಮಾಡದ ವೈದ್ಯರನ್ನು ಕಳುಹಿಸಲು ನಿರ್ಧರಿಸಿದೆ. ಇಂಥ ವೈದ್ಯರ (ಕಾರ್ಯಕ್ರಮಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ವೈದ್ಯರು) ಪಟ್ಟಿಯನ್ನು ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಸದ್ಯ ರಾಜ್ಯದಲ್ಲಿ ಸರ್ಕಾರಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ವರ್ಗಾವರ್ಗಿ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂದರ್ಭದಲ್ಲೇ ಇವರನ್ನು ಗ್ರಾಮಮುಖೀಗಳನ್ನಾಗಿ ಮಾಡಲು ತೀರ್ಮಾನಿಸಲಾಗಿದೆ.

ಆರೋಗ್ಯ ಇಲಾಖೆಯ ಸುತ್ತೋಲೆ
ಈ ಕುರಿತಂತೆ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಹಳ್ಳಿಗೆ ಹೋಗದ ವೈದ್ಯರನ್ನು ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಗ್ರಾಮಗಳಲ್ಲಿನ ವೈದ್ಯರ ಕೊರತೆಯಿಂದಾಗಿ ರಾಜ್ಯ ಸರ್ಕಾರ, ವೈದ್ಯ ಪದವಿ ಮುಗಿಸಿದವರಿಗೆ ತಮ್ಮ ಸೇವಾವಧಿಯಲ್ಲಿ ಕನಿಷ್ಠ ಆರು ವರ್ಷ ಗ್ರಾಮೀಣ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಿ ನಿಯಮಾವಳಿ ರೂಪಿಸಿತ್ತು. ಆದರೆ ಇದು ಜಾರಿಯಾಗಿದ್ದಕ್ಕಿಂತ ವಿಫ‌ಲವಾಗಿದ್ದೇ ಹೆಚ್ಚು. ಇದೀಗ ಅನಿವಾರ್ಯವಾಗಿ ನಗರಗಳಲ್ಲಿ ಠಿಕಾಣಿ ಹೂಡಿರುವ ವೈದ್ಯರನ್ನು ಹಳ್ಳಿಗಳಿಗೆ ಎತ್ತಂಗಡಿ ಮಾಡಲಾಗುತ್ತಿದೆ.

ಇದಲ್ಲದೆ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ನಿಯಮ ಪಾಲನೆ ಮತ್ತು  ಖಾಲಿ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಹಲವು ಮಾಹಿತಿಗಳನ್ನು ಕೇಳಲಾಗಿದೆ. ಅವುಗಳಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಅವಧಿ ಒಂದೇ ಕಡೆ ಸೇವೆ ಸಲ್ಲಿಸಿದ ವೈದ್ಯರು ಮತ್ತು  ತಜ್ಞ ವೈದ್ಯರ ಕುರಿತ ಪಟ್ಟಿಯನ್ನೂ ಕೇಳಲಾಗಿದ್ದು, ಅವರನ್ನೂ ಈ ಬಾರಿಯ ವರ್ಗಾವಣೆ ವೇಳೆ ಎತ್ತಂಗಡಿ ಮಾಡಲಾಗುತ್ತದೆ. ಅದಕ್ಕಾಗಿ ಈಗಾಗಲೇ ವರ್ಗಾವಣೆ ಪ್ರಮಾಣವನ್ನು ಒಟ್ಟು ಹುದ್ದೆಯ ಶೇ. 5ರಿಂದ ಶೇ. 15ಕ್ಕೆ ಹೆಚ್ಚಿಸಲಾಗಿದೆ.

Advertisement

ಇದಲ್ಲದೆ, ತಜ್ಞ ವೈದ್ಯರ ಕೊರತೆಯನ್ನು ಸ್ವಲ್ಪ ಮಟ್ಟಿಗಾದರೂ ಬಗೆಹರಿಸಬೇಕು ಎಂಬ ಉದ್ದೇಶದಿಂದ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ತಜ್ಞ ವೈದ್ಯರನ್ನು ಮತ್ತೆ ವೈದ್ಯಕೀಯ ಸೇವೆಗೆ ಕಳುಹಿಸಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ತಜ್ಞತೆಯನ್ವಯ ನೇಮಕಾತಿ ಅಥವಾ ಹುದ್ದೆ ಹೊಂದಿಲ್ಲದವರು ಅಂದರೆ ಮಿಸ್‌ಮ್ಯಾಚ್‌ ಅಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ವರ್ಗಾವಣೆಗಾಗಿ ಅಂತಹ ವೈದ್ಯರ ಕುರಿತ ಮಾಹಿತಿ ನೀಡುವಂತೆಯೂ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇತರೆ ಪ್ರಮುಖ ನಿರ್ದೇಶನಗಳು
– ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಮಾತ್ರ ಇರಬೇಕು, ಹೆಚ್ಚುವರಿ ಇದ್ದರೆ ಮಾಹಿತಿ ಕೊಡಬೇಕು.
– 100 ಹಾಸಿಗೆಗಳ ಆಸ್ಪತ್ರೆಯಲ್ಲಿ ಕನಿಷ್ಠ ಇಬ್ಬರು ತಜ್ಞ ವೈದ್ಯರಿರಬೇಕು. ಎರಡಕ್ಕಿಂತ ಕಡಿಮೆ ಹಾಗೂ ಎರಡಕ್ಕಿಂತ ಹೆಚ್ಚು ತಜ್ಞ ವೈದ್ಯರಿದ್ದರೆ ವಿಷಯ ತಿಳಿಸಬೇಕು.
– ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ ಎರಡು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ ಒಂದು ದಂತ ಕುರ್ಚಿ ಇರುವಂತೆ ನೋಡಿಕೊಳ್ಳಬೇಕು.
– ಇದಕ್ಕೆ ತಕ್ಕಂತೆ ದಂತ ವೈದ್ಯರನ್ನು ವರ್ಗಾವಣೆ ಮಾಡಲು ಅನುಕೂಲವಾಗುವಂತೆ ಅಗತ್ಯ ಮಾಹಿತಿ ಒದಗಿಸಬೇಕು.
– 120 ದಿನಕ್ಕಿಂತ ಹೆಚ್ಚು ಅವಧಿ ಅನಧಿಕೃತ ಗೈರು ಅಥವಾ ಅಮಾನತಾದ ಅಧಿಕಾರಿಗಳ ಬಗ್ಗೆ ಮಾಹಿತಿ ಕೊಡಬೇಕು.
– ಇಂಥ ಹುದ್ದೆಗಳನ್ನು ಖಾಲಿ ಎಂದು ಪರಿಗಣಿಸಿ ಮಾಹಿತಿ ನೀಡಬೇಕು

– ಎಂ. ಪ್ರದೀಪ್‌ ಕುಮಾರ

Advertisement

Udayavani is now on Telegram. Click here to join our channel and stay updated with the latest news.

Next