ಗಿಡ ಮರಗಳು ತುಂಬಿದ ಕೇರಿ, ಲಂಡನ್‌ನ ಮಧ್ಯ ಭಾಗಕ್ಕೆ 30 ಕಿಲೋ ಮೀಟರ್ ದೂರ. ಹಳ್ಳಿಯ ಹೆಸರು ಡಾನ್, ಮನೆಯ ಹೆಸರು ಡೌನ್‌ಹೌಸ್.
ಲಂಡನ್‌ನಲ್ಲಿ ತಂಗಿದ್ದ ನಾನು ಮತ್ತು ಪತ್ನಿ ಉಷಾ ಟ್ರೈನ್ ಹಿಡಿದು ವಿಕ್ಟೋರಿಯಾ ಮೂಲಕ ದಕ್ಷಿಣ ಬ್ರಾಮ್ಲಿ ಸ್ಟೇಷನ್ ತಲಪಿದೆವು. ಅನಂತರ ಟ್ಯಾಕ್ಸಿ. ಒಟ್ಟು ಸುಮಾರು ಒಂದೂವರೆ ಗಂಟೆಗಳ ಪ್ರಯಾಣ. ಟ್ಯಾಕ್ಸಿಯ ಡ್ರೈವರ್‌ಗೆ ಯಾವ ಹೆಚ್ಚಿನ ವಿವರವೂ ಕೊಡಬೇಕಿಲ್ಲ. ಡೌನ್‌ಹೌಸ್‌ಗೆ ಕರೆದೊಯ್ಯಿರಿ ಎಂದರೆ ಸಾಕು.
1842ರಲ್ಲಿ ಡಾರ್ವಿನ್‌ನ ಮೂರನೇ ಮಗು ಹುಟ್ಟುವ ಸಂದರ್ಭ. ಅವನು ಮತ್ತು ಹೆಂಡತಿ ಎಮ್ಮಾ ಕಟ್ಟಿಕೊಂಡ ಮನೆ ಇದು. ತಂದೆ ರಾಬರ್ಟ್ ಡಾರ್ವಿನ್ ಇದಕ್ಕೆ 3,000 ಪೌಂಡ್ ಕೊಟ್ಟಿದ್ದರು. ಇಲ್ಲಿ ಅವನ ಮಿಕ್ಕ ಏಳು ಮಕ್ಕಳು ಹುಟ್ಟಿದರು. 1882ರಲ್ಲಿ ಡಾರ್ವಿನ್ ಕೊನೆಯುಸಿರು ಎಳೆದದ್ದು ಇಲ್ಲಿಯೇ. ಡಾರ್ವಿನ್‌ನದ್ದು ಅತ್ಯಂತ ಶ್ರೀಮಂತ ಕುಟುಂಬ. ತಂದೆ, ಮಾವನ ಮೂಲಕ ಬಂದ ಆಸ್ತಿಯಲ್ಲಿ ಡಾರ್ವಿನ್ ಕುಟುಂಬ ಮಾತ್ರವಲ್ಲ ಅವನ ಮಕ್ಕಳು ಮತ್ತು ಮೊಮ್ಮಕ್ಕಳೂ ನೆಮ್ಮದಿಯಾಗಿ ಜೀವಿಸಬಹುದಾಗಿತ್ತು.
ಮನೆಯ ಮುಂದೆ ನಿಂತಾಕ್ಷಣ ಮೂಕನಾದೆ. ಡಾರ್ವಿನ್ ವಾಸಿಸಿದ್ದ ಇದೇ ಮನೆಯಲ್ಲಿ ಅವನು ಒರಿಜಿನ್ ಆಫ್ ಸ್ಪೀಸಿಸ್ ( Origin of Species),,ವೇರಿಯೇಷನ್ ಆಫ್ ಅನಿಮಲ್ಸ್ (Variation of Animals and Plants),, ಡಿಸೆಂಟ್ ಆಫ್ ಮ್ಯಾನ್ (Descent of Man ) ಮೊದಲಾದ ಗ್ರಂಥಗಳನ್ನು ರಚಿಸಿದ್ದ. ಇವನ್ನು ಒಂದುಗೂಡಿಸಿದರೆ 3,000 ಪುಟಗಳಾಗುತ್ತವೆ. ಇಲ್ಲಿಯೇ ಅವನು 10,000 ನಮೂನೆಯ ಕಡಲ ಏಡಿಗಳನ್ನು (Barnacles) ಸಾಕಿ ಅಧ್ಯಯನ ಮಾಡಿದ್ದ. ಇಲ್ಲಿಯೇ ಅವನು ಮತ್ತು ಅವನ ಕುಟುಂಬ ಎರೆಹುಳುಗಳೊಡನೆ ಒಂದಾಗಿ ಅವುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದು,ಡಾರ್ವಿನ್ ಈ ಮನೆಯಿಂದಲೇ ವಿಶ್ವಾದ್ಯಂತ ವಿಜ್ಞಾನಿಗಳು, ಪ್ರಮುಖರನ್ನು ಸಂಪರ್ಕಿಸಿದ್ದು. ಅವನು ಯಾವ ಕೆಲಸಕ್ಕೂ ಸೇರದೇ ಮನೆಯಲ್ಲಿಯೇ ತನ್ನ ಸಂಶೋಧನೆಗಳನ್ನು ನಡೆಸಿದ. ಮಾಹಿತಿ ಬೇಕಾದಾಗ ಸಂಬಂಧಪಟ್ಟವರನ್ನು ಪತ್ರ ಮುಖೇನ ಸಂಪರ್ಕಿಸುತ್ತಿದ್ದ. ಅವನು ಬರೆದ ಪತ್ರಗಳ ಸಂಖ್ಯೆ 15,000. ಇವುಗಳಲ್ಲಿ ಅರ್ಧದಷ್ಟನ್ನು ತಾನೇ ಬರೆದ.
ಮನೆಯನ್ನು ಪ್ರವೇಶಿಸು ತ್ತಿದ್ದಂತೆಯೇ ಟಿಕೆಟ್ ನೀಡುವ ಸ್ಥಳ. ಹೋದೊಡನೆ ಪರಿಚಯ ಮಾಡಿಕೊಂಡು, ನಾನು ಬರೆದಿರುವ ಡಾರ್ವಿನ್ ಮತ್ತು ನ್ಯೂಟನ್ ಪುಸ್ತಕಗಳ ಪ್ರತಿಗಳನ್ನು ನೀಡಿದೆವು. ಸಿಬಂದಿ ಸಂತೋಷಪಟ್ಟು ಸ್ವೀಕರಿಸಿ ನಮ್ಮ ವಿಳಾಸವನ್ನು ಬರೆದುಕೊಂಡು, ಮನೆಯ ಸೂಕ್ತ ಸ್ಥಳದಲ್ಲಿ ಇರಿಸುವುದಾಗಿ ಹೇಳಿದರು.
ಮನೆಯನ್ನು ಪ್ರವೇಶಿಸಿದಂತೆ ಮಹಡಿ ಹತ್ತಲು ಮೆಟ್ಟಿಲುಗಳು. ಅದರ ಮೇಲೆ ಒಂದು ಹಲಗೆ. ಇದನ್ನು ಡಾರ್ವಿನ್ ತನ್ನ ಮಕ್ಕಳ ವಿನೋದಕ್ಕಾಗಿ ಹಾಕಿಸಿದ್ದ. ಅವರು ಮೆಟ್ಟಿಲುಗಳನ್ನು ಉಪಯೋಗಿಸದೆ ಇದರ ಮೇಲೆ ಜಾರುತ್ತಿದ್ದರು.
ಮಕ್ಕಳೆಂದರೆ ಡಾರ್ವಿನ್ ಮತ್ತು ಅವನ ಹೆಂಡತಿಗೆ ಪ್ರಾಣ. ಅವರು ಏನು ಮಾಡಿದರೂ ಸರಿ. ತಮ್ಮ ಆಟದ ಸಾಮಗ್ರಿಗಳನ್ನು ಎಲ್ಲೆಡೆ ಎಸೆದಾಡಿದರೂ ಏನೂ ಹೇಳುತ್ತಿರಲಿಲ್ಲ. ತಾನಾಯ್ತು, ತನ್ನ ಪಿಯಾನೋ ಆಯಿತು. ಅನಂತರ ಸೇವಕರನ್ನು ಕರೆದು ಕೊಠಡಿಯನ್ನು ಸ್ವತ್ಛ ಮಾಡಿಸಿ, ಆಟದ ಸಾಮಾನುಗಳನ್ನು ಸರಿಯಾಗಿಡಿ ಎಂದು ಹುಕುಂ ನೀಡುತ್ತಿದ್ದಳಂತೆ.
ಕೆಳಗೆ ತುಸು ವಿಶಾಲವಾದ ಡಾರ್ವಿನ್‌ನ ಅಭ್ಯಾಸ ಕೊಠಡಿ. ವೀಕ್ಷಕರಿಗೆ ತೆರೆದಿಟ್ಟಿರುವ ಮುಖ್ಯ ಭಾಗ ಇದು. ಎಲ್ಲೆಲ್ಲೂ ಪುಸ್ತಕಗಳು. ಎದ್ದು ಕಾಣುವ ಎರಡು ಮೇಜು, ಒಂದು ಚೌಕಾಕಾರ, ಮತ್ತೂಂದು ವೃತ್ತಾಕಾರ. ಮೊದಲನೆಯದರ ಮೇಲೆ ಡಾರ್ವಿನ್ ಬಳಸುತ್ತಿದ್ದ ಎನ್ನಲಾಗುವ ಕಾಗದ, ಪತ್ರಗಳು, ಲೇಖನಿ, ಒಂದೆರಡು ಪುಸ್ತಕಗಳು, ಕತ್ತರಿ, ಇತ್ಯಾದಿ. ಅಲ್ಲಿಯೇ ಕುರ್ಚಿಯ ಮೇಲಿರಿಸಿದ ಊರುಗೋಲು ಮತ್ತು ಆತನ ಟೋಪಿ. ಹಿಂದೆಯೇ ಕಸದ ಬುಟ್ಟಿ. ಕೈ ತೊಳೆಯುವ ಜಾಗ, ನೀರಿನ ಹೂಜಿ ಇತ್ಯಾದಿ.
ಗೋಡೆಗೆ ತಾಗಿ ಕೊಂಡಿದೆ ಪುಸ್ತಕಗಳ ಕಪಾಟು. ಅದರ ಮೇಲೆ ಡಾರ್ವಿನ್‌ಗೆ ಪಾಠ ಹೇಳಿದ ಮತ್ತು ಸ್ಫೂರ್ತಿಯಾದ ಜಾನ್ ಸ್ಟೀವನ್ಸ್ ಹೆನ್ಸ್‌ಲೋ ಮತ್ತು ಚಾರ್ಲ್ಸ್ ಲೈಲ್ ಅವರ ಚಿತ್ರಗಳು. ಮೇಜಿನ ಮತ್ತೂಂದೆಡೆ ಡಾರ್ವಿನ್ ಆಗಾಗ ವಿರಮಿಸುತ್ತಿದ್ದ ಆರಾಮ ಖುರ್ಚಿ.
ವೃತ್ತಾಕಾರದ ಮೇಜಿನ ಮೇಲೆ ರಾಸಾಯನಿಕ ವಸ್ತುಗಳು ಮತ್ತು ಉಪಕರಣಗಳಿವೆ. ಅನೇಕ ಪ್ರಯೋಗಗಳನ್ನು ನಡೆಸಿದ್ದ ಡಾರ್ವಿನ್, ಪ್ರಾಣಿಗಳನ್ನು ಸುಟ್ಟು ಅವುಗಳ ಅಸ್ತಿಪಂಜರಗಳನ್ನೂ ಪರೀಕ್ಷಿಸುತ್ತಿದ್ದ. ಆದರೆ ಇವನ್ನು ಈ ಕೊಠಡಿಯಲ್ಲಿ ಮಾಡಿರಲಾರ.
ಪಕ್ಕದಲ್ಲಿ ಶಯ್ನಾಗೃಹ. ಎತ್ತರದ ಮಂಚ ಹತ್ತಲು ಮೆಟ್ಟಿಲು ಆವಶ್ಯಕ. ನಾಲ್ಕೂ ಕಡೆ ಪರದೆಗಳು. ಹತ್ತಿರದಲ್ಲೇ ಇರುವ ಇನ್ನೊಂದು ಕೊಠಡಿಯಲ್ಲಿ ಎಮ್ಮಾ ನುಡಿಸುತ್ತಿದ್ದ ಪಿಯಾನೋ, ಹಲವಾರು ಪೀಠೊಪಕರಣಗಳು ಮತ್ತು ಪುಸ್ತಕಗಳು ಇವೆ. ಅಲ್ಲದೆ ಇಲ್ಲಿ ಡಾರ್ವಿನ್ ಮತ್ತು ಆಕೆ ಪ್ರತಿದಿನ ಬ್ಯಾಕ್ ಗ್ಯಾಮನ್ ಆಟ ಆಡುತ್ತಿದ್ದಿರಬೇಕು. ಆತ ಪ್ರತಿದಿನದ ಫಲಿತಾಂಶವನ್ನು ಬರೆದುಕೊಳ್ಳುತ್ತಿದ್ದ. ಅವನು 2,795 ಬಾರಿ ಗೆದ್ದಿದ್ದರೆ, ಅವಳು 2,490 ಬಾರಿ ವಿಜಯ ಸಾಧಿಸಿರುವ ಉಲ್ಲೇಖವಿದೆ.
ಮನೆಯ ಹಿಂದೆ ವಿಶಾಲ ಪ್ರದೇಶ. ಅಲ್ಲಿ ಡಾರ್ವಿನ್ ಮೂರು ಎಕರೆ ಭೂಮಿ ಖರೀದಿಸಿ, ವಾಕಿಂಗ್‌ಗಾಗಿ ಕಾಲುದಾರಿಯನ್ನು ರಚಿಸಿಕೊಂಡಿದ್ದ. ಅದನ್ನು ಸ್ಯಾಂಡ್ ವಾಕ್ ಎನ್ನಲಾಗುತ್ತದೆ. ಕಟ್ಟುನಿಟ್ಟಿನ ದಿನಚರಿ ಪಾಲಿಸುತ್ತಿದ್ದ ಅವನು ನಿತ್ಯ ನಾಲ್ಕೈದು ಬಾರಿ ವಾಕಿಂಗ್ ಹೋಗುತ್ತಿದ್ದ. ಇದಕ್ಕೆ ಕಾರಣವೂ ಇತ್ತು. ಊರುಗೋಲನ್ನು ರಸ್ತೆಗೆ ತಾಗಿಸಿ ಶಬ್ಧ ಮಾಡಿಕೊಂಡು ನಡೆಯುವಾಗ ಅವನು ದೀರ್ಘ ಆಲೋಚನೆ ಯಲ್ಲಿರುತ್ತಿದ್ದ ಎನ್ನುವುದನ್ನು ಅವನ ಕುಟುಂಬದವರು ನೆನಪಿಸಿಕೊಂಡಿದ್ದಾರೆ. ಪಥದ ತುದಿಯಲ್ಲಿ ಒಂದು ರಾಶಿ ಸಣ್ಣ ಕಲ್ಲುಗಳನ್ನು ಹಾಕಿದ್ದ ಡಾರ್ವಿನ್ ಪ್ರತಿಯೊಂದು ಬಾರಿ ವಾಕಿಂಗ್ ಮುಗಿದಾಗಲೂ ಒಂದು ಕಲ್ಲನ್ನು ತೆಗೆದು ಪಕ್ಕಕ್ಕೆ ಇಟ್ಟು ಇಂದು ಎಷ್ಟು ನಡೆದೆ ಎಂಬುದರ ಲೆಕ್ಕವಿಡುತ್ತಿದ್ದ. ಕೆಲವು ಬಾರಿ ಅವನ ಮಕ್ಕಳು ವಿನೋದಕ್ಕಾಗಿ ಕಲ್ಲುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದರಂತೆ ಎಂದು ಇಲ್ಲಿಯ ಸಿಬಂದಿ ನಮಗೆ ತಿಳಿಸಿದರು.
ಹೀಗೆ ಡೌನ್ ಹೌಸ್ ಅವಲೋಕಿಸಿ ಕೇಂಬ್ರಿಡ್ಜ್ ನಗರಕ್ಕೆ ಟ್ರೈನ್ ಹತ್ತಿದೆವು. ಒಂದು ಗಂಟೆಯ ಪ್ರಯಾಣ. ಟ್ಯಾಕ್ಸಿ ಹಿಡಿದು ಕ್ರೈಸ್ಟ್ಸ್ ಕಾಲೇಜಿಗೆ ಧಾವಿಸಿದೆವು. ಡಾರ್ವಿನ್‌ನ ತಂದೆ ರಾಬರ್ಟ್ ಡಾರ್ವಿನ್‌ಗೆ ಮಗ ವೈದ್ಯನಾಗಲಿ ಎಂಬ ಹಂಬಲ. ಅದಕ್ಕಾಗಿ ಆತನನ್ನು ಎಡಿನ್ ಬರೋ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಲಾಯಿತು. ಆದರೆ ಚಾಲ್ಸ…ì ರಕ್ತವನ್ನು ನಾನು ನೋಡಲಾರೆ, ಸಹಿಸಲಾರೆ ಎಂದು ಮರಳಿ ಬಂದ. ಆಗ ತಂದೆ ಅವನನ್ನು
ಚರ್ಚ್‌ನ ಕ್ಲೆರ್ಜಿಮನ್ ಆಗು ಎಂದು ಕೇಂಬಿಡ್ಜ್ ಕ್ರೈಸ್ಟ್ಸ್ ಕಾಲೇಜಿಗೆ ಸೇರಿಸಿದ. ಹೀಗಾಗಿ ಇಲ್ಲಿ ಡಾರ್ವಿನ್ ಎರಡು ವರ್ಷ ಓದಿ ಪದವಿ ಪಡೆದ. ಡಾರ್ವಿನ್‌ಗೆ ಪ್ರೋತ್ಸಾಹ ನೀಡಿದ ಇಲ್ಲಿ ಸಸ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಹೆನ್ಸ್‌ಲೋ ಎಂಬವರು ಭೂಶಾಸ್ತ್ರದ ಪ್ರಾಧ್ಯಾಪಕರಾದ ಅಡಾಮ್ ಸೆಡಿವಿಕ್ ಎಂಬವರನ್ನೂ ಪರಿಚಯಿಸಿದರು. ಇಲ್ಲಿ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಡಾರ್ವಿನ್ “ಬೀಗಲ್’ ಎಂಬ ಹಡಗಿನಲ್ಲಿ ಐದು ವರ್ಷಗಳ ಕಾಲ ದಕ್ಷಿಣ ಅಮೆರಿಕ, ಗ್ಯಾಲಪಗೋಸ್ ಮೊದಲಾದ ಕಡೆಗಳಲ್ಲಿ ಸಂಚರಿಸಿ ಅಪಾರ ಪ್ರಾಣಿಗಳು, ಅವುಗಳ ಅವಶೇಷಗಳ ಸಂಗ್ರಹ ಮಾಡಿದ್ದ.
ಕ್ರೈಸ್ಟ್ ಕಾಲೇಜಿನ ಮುಖ್ಯದ್ವಾರಕ್ಕೆ ಹೋಗಿ ಅಧಿಕಾರಿಗಳ ಬಳಿ ಪರಿಚಯಿಸಿಕೊಂಡಾಗ ಅವರು ಅಲ್ಲಿನ ಮುಖ್ಯ ಲೈಬ್ರೇರಿಯನ್ ಅವರನ್ನು ಹೋಗಿ ನೋಡುವಂತೆ ಹೇಳಿದರು. ಗ್ರಂಥಾಲಯದಲ್ಲೂ ಪ್ರೀತಿಪೂರ್ವಕ ಸ್ವಾಗತ ದೊರೆಯಿತು. ಮುಖ್ಯ ಲೈಬ್ರೇರಿಯನ್ ಜಾನ್ ವ್ಯಾಗ್ ಸ್ಟಾಫ್ ಅವರು ತಾವಾಗಿಯೇ ಬಂದು ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ನನ್ನ ಪುಸ್ತಕವನ್ನು ಸ್ವೀಕರಿಸಿ, ಅನೇಕ ಪ್ರಶ್ನೆಗಳನ್ನೂ ಕೇಳಿದರು. ತಮ್ಮ ಸಹಾಯಕಿಯನ್ನು ಕರೆದು ಪುಸ್ತಕದ ಹೆಸರನ್ನು ಕ್ಯಾಟಲಾಗಿನಲ್ಲಿ ಸೇರಿಸುವಂತೆ ಸೂಚಿಸಿದರು. ಅನಂತರ ಅವರು ಭಂಡಾರದಲ್ಲಿದ್ದ ಡಾರ್ವಿನ್ ಕುರಿತ ಗ್ರಂಥಗಳನ್ನು ತೋರಿಸಿದರು. ಅಲ್ಲಿಗೆ ನಿಲ್ಲಿಸಲಿಲ್ಲ. ಮತ್ತೂ ಒಳಗೆ ಕರೆದೊಯ್ದುರು. ಅಲ್ಲಿ ಒಂದು ಅತೀ ಸುರಕ್ಷಿತ ಕಪಾಟಿನಲ್ಲಿದ್ದ ಅತ್ಯಂತ ಬೆಲೆಬಾಳುವ ಪುಸ್ತಕಗಳಲ್ಲಿ ಒಂದು ದಪ್ಪ ಹೊತ್ತಗೆಯನ್ನು ತೆಗೆದು ನೋಡಿ, ಇದು “ಒರಿಜಿನ್ ಆಫ್ ಸ್ಪೀಸಿಸ್’ನ ಮೊದಲ ಮುದ್ರಣ. ಸಿಗುವುದು ಕಷ್ಟ. ನಮ್ಮ ಬಳಿ ಇದೆ. ಇದೇ ಮೊದಲ ಮುದ್ರಣ ಎನ್ನುವುದಕ್ಕೆ ಇಲ್ಲಿಯೇ ಪುರಾವೆ ಇದೆ ನೋಡಿ ಎಂದು ಒಂದು ಪುಟ ತೆರೆದು ತೋರಿಸಿದರು. ಅಲ್ಲಿ ಸ್ಪೀಸಿಸ್ ಎಂಬ ಪದವನ್ನು speeces ಎಂದು ತಪ್ಪು ಮುದ್ರಿಸಲಾಗಿದೆ. ಅದನ್ನು ಮುಂದೆ ಸರಿಪಡಿಸಲಾಯಿತು. ಅಲ್ಲಿಂದ ಬೀಳ್ಕೊಟ್ಟು ಕಾಲೇಜಿನ ಹಿಂದಿನ ಉದ್ಯಾನದಲ್ಲಿದ್ದ ಡಾರ್ವಿನ್‌ನ ಪ್ರತಿಮೆಯನ್ನು ನೋಡಿಕೊಂಡು ನಾವು ಹಿಂದಿರುಗಿದೆವು.
-ಸಿಡ್ನಿ ಶ್ರೀನಿವಾಸ್