Advertisement

ದುಪಟ್ಟು ನೀರಿನ ಬಿಲ್‌; ಗ್ರಾಹಕರಿಗೆ ಪಾಲಿಕೆಯ ಶಾಕ್‌ !

09:55 AM Jul 10, 2018 | |

ಮಹಾನಗರ: ಘಟನೆ ಒಂದು: ಕಾವೂರಿನ ರಕ್ಷಿತ್‌ ಅವರ ಹೊಟೇಲ್‌ಗೆ ಪ್ರತಿ ತಿಂಗಳು 1,500 ರೂ. ಗಳಷ್ಟು ಬರುತ್ತಿದ್ದ ನೀರಿನ ಬಿಲ್‌ ಈ ಬಾರಿ ಬಂದಿದ್ದು 18,000 ರೂ. ! ಘಟನೆ ಎರಡು: ಕುಂಜತ್ತಬೈಲಿನ ವಾಮನ ಅವರ ಮನೆಗೆ ಪ್ರತಿ ತಿಂಗಳು ಬರುತ್ತಿದ್ದ ನೀರಿನ ಬಿಲ್‌ 80 ರೂ. ಆದರೆ ಈ ಬಾರಿ ಮಾತ್ರ 850 ರೂ.! ಆಶ್ಚರ್ಯವಾದರೂ ಸತ್ಯ. ನೀರಿನ ಬಿಲ್‌ ಬಂದಿಲ್ಲ ಎಂದು ಮನೆ ಮಂದಿ ಕಾಯುತ್ತಿದ್ದರೆ, ಈಗ ಬಂದ ಬಿಲ್‌ ನೋಡಿ ಬೆಚ್ಚಿ ಬೀಳುವಂತಾಗಿದೆ. ನಗರದ ಬಹುತೇಕ ಕಡೆ ಇದೇ ರೀತಿಯಾಗಿದೆ. ಎಪ್ರಿಲ್‌ನಿಂದ ನೀರಿನ ಬಿಲ್‌ ತಲುಪಿಲ್ಲ ಎಂದು ನಗರದ ಬಹುತೇಕ ಮಂದಿ ಪಾಲಿಕೆಗೆ ದೂರು ನೀಡಿದ್ದರು.  ಈ ಬಗ್ಗೆ ಉದಯವಾಣಿ ಸುದಿನ ವಿಶೇಷ ವರದಿಯನ್ನೂ ಪ್ರಕಟಿಸಿತ್ತು. ಪಾಲಿಕೆ ಸಭೆಯೂಲ್ಲೂ ಇದು ಪ್ರಸ್ತಾವವಾಗಿತ್ತು. ಆದರೆ, ಈಗ ಈ ಸಮಸ್ಯೆ ಬಗೆಹರಿಸಲು ಪಾಲಿಕೆ ತೆಗೆದುಕೊಂಡ ಕ್ರಮ ಇನ್ನೊಂದು ಎಡವಟ್ಟಿಗೆ ಕಾರಣವಾಗಿದೆ.

Advertisement

ಸಿಬಂದಿಯಿಂದ ಬಿಲ್‌
ಹತ್ತು ವರ್ಷಗಳ ಹಿಂದೆ ಖಾಸಗಿ ಸಂಸ್ಥೆಗಳಿಗೆ ನೀರಿನ ಬಿಲ್‌ ನೀಡಲು ಟೆಂಡರ್‌ ನೀಡಲಾಗಿತ್ತು. ಇದರಿಂದ ಕೆಲವು ಭಾಗಗಳಿಗೆ ಬಿಲ್‌ ಹೋಗುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಸಮಸ್ಯೆ ಇತ್ಯರ್ಥಕ್ಕೆ ಪಾಲಿಕೆಯ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿಯನ್ನು ನಿಯೋಜಿಸಿದೆ. ನೀರಿನ ಬಿಲ್‌ ಸಾರ್ವಜನಿಕರಿಗೆ ನೀಡಲು ಹೊರಗುತ್ತಿಗೆ ನೀಡಿದವರ ಅವಧಿ ಮಾರ್ಚ್‌ಗೆ ಕೊನೆಗೊಂಡ ಕಾರಣ ಎಪ್ರಿಲ್‌ನಿಂದ ಪಾಲಿಕೆ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಆ ವೇಳೆ ಚುನಾವಣೆ ಎದುರಾಗಿದ್ದು ಒಂದೆಡೆಯಾದರೆ, ಹೊಸತಾಗಿ ಕಾರ್ಯ ನಿರ್ವಹಿಸುವ ಹಿನ್ನೆಲೆಯಲ್ಲಿ ಪಾಲಿಕೆಯ 60 ವಾರ್ಡ್ ಗಳಿಗೂ ಭೇಟಿ ನೀಡಿ ಬಿಲ್‌ ನೀಡಲು ಸಾಧ್ಯವಾಗಿರಲಿಲ್ಲ. ಜತೆಗೆ ಎರಡು ತಿಂಗಳು ತರಬೇತಿ ಅವಧಿ ಎಂದು ಪರಿಗಣಿಸಿ, ಜೂನ್‌ 1ರಿಂದ ನೀರಿನ ಬಿಲ್‌ ನೀಡಲು ಮನೆಮನೆಗೆ ತೆರಳುತ್ತಿದ್ದಾರೆ. ಈ ಗೊಂದಲಗಳ ನಡುವೆ ಈಗ ಗ್ರಾಹಕರ ಕೈಗೆ ದುಪ್ಪಟ್ಟು ಬಿಲ್‌ ಸಿಕ್ಕಿದೆ.

ಆದಾಯ ವೃದ್ಧಿಸುವ ಉದ್ದೇಶ
ನೀರಿನ ಸಂಪರ್ಕದ ಬಿಲ್‌ ಪಾವತಿ ಯನ್ನು ಹೊರಗುತ್ತಿಗೆಗೆ ವಹಿಸಿದರೆ ಪಾಲಿಕೆಗೆ ಆರ್ಥಿಕ ಹೊರೆಯಾಗುತ್ತಿತ್ತು. ಅದಕ್ಕಾಗಿ ನೀರಿನ ಬಿಲ್‌ನ ಜತೆಗೆ ಮಲೇರಿಯಾ ನಿಯಂತ್ರಣ ಘಟಕದ ಸಿಬಂದಿ ಮಲೇರಿಯಾ ಕಾರ್ಯನಿರ್ವಹಣೆ ಮಾಡಿದರೆ ವೆಚ್ಚ ಕಡಿಮೆಯಾಗಿ ನೀರಿನ ತೆರಿಗೆ ಸಂಗ್ರಹ ದಿಂದ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇರಿಸಿತ್ತು. ಇದಕ್ಕಾಗಿ ಪ್ರತೀ ವಾರ್ಡ್‌ಗೆ ಒಬ್ಬ ಎಂ.ಪಿ.ಡಬ್ಲ್ಯೂ. ಅನ್ನು ನಿಯುಕ್ತಿಗೊಳಿಸಲಾಗಿತ್ತು.

ನೀರಿನ ಸಂಪರ್ಕ
ಪಾಲಿಕೆ ವ್ಯಾಪ್ತಿಯಲ್ಲಿ ಈಗಿನ ಮಾಹಿತಿ ಪ್ರಕಾರ ಒಟ್ಟು ಸುಮಾರು 87,000 ನೀರಿನ ಸಂಪರ್ಕಗಳಿವೆ. ಇದರಲ್ಲಿ ವಸತಿ-79,304, ವಸತಿಯೇತರ-5,000, ನಿರ್ಮಾಣ ಹಂತದ ಕಟ್ಟಡ-1,328, ಬಹುಮಹಡಿ ಕಟ್ಟಡ-805, ಕೈಗಾರಿಕೆಗಳು-845, ಶಾಲೆ, ದೇವಸ್ಥಾನ ಸಹಿತ ಸಾರ್ವಜನಿಕ ನೀರಿನ ಸಂಪರ್ಕಗಳು-6,000 ಇವೆ.

ಸಮಸ್ಯೆ ಪರಿಹಾರಕ್ಕೆ  ಸೂಚನೆ
ಕೆಲವು ದಿನಗಳ ನೀರಿನ ಬಿಲ್‌ನಲ್ಲಿ ವ್ಯತ್ಯಾಸವಾಗಿರುವ ಗಮನಕ್ಕೆ ಬಂದಿದೆ. ಯಾವ ಕಡೆಯಲ್ಲಿ ಸಮಸ್ಯೆ ಆಗಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಮುಂದೆ ಈ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ
ಸೂಚಿಸಲಾಗುವುದು.
– ಭಾಸ್ಕರ್‌ ಕೆ., ಮೇಯರ್‌, ಮನಪಾ

Advertisement
Advertisement

Udayavani is now on Telegram. Click here to join our channel and stay updated with the latest news.

Next