Advertisement

BJP: ಸವದಿಗೆ ಡಬಲ್‌ ಆಫ‌ರ್‌ , ರೆಡ್ಡಿಗೂ ಬಿಜೆಪಿ ಬುಲಾವ್‌ ?

10:23 PM Jan 25, 2024 | Team Udayavani |

ಬೆಂಗಳೂರು: ಬಿಜೆಪಿಗೆ ನನ್ನ ಹೆಣವೂ ಮರಳಿ ಹೋಗುವುದಿಲ್ಲ ಎಂದು ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೂ ಬಿಜೆಪಿ ಗಾಳ ಹಾಕಿದ್ದು, ಮರಳಿ ಪಕ್ಷಕ್ಕೆ ಬಂದರೆ “ಡಬಲ್‌ ಆಫ‌ರ್‌’ ಭರವಸೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿಯವರಿಗೂ ಆಹ್ವಾನ ನೀಡಲಾಗಿದೆ.
ಬಿಜೆಪಿ ಮೂಲಗಳ ಪ್ರಕಾರ ಸವದಿ ಸೇರ್ಪಡೆಗೆ ಯಡಿಯೂರಪ್ಪ ಪಾಳಯದ ವಿರೋಧವಿದ್ದರೆ, ಶೆಟ್ಟರ್‌ ಆಗಮನಕ್ಕೆ ಸಂತೋಷ್‌ ಬಣದ ಅಡ್ಡಿ ಇತ್ತು. ಈಗ ಎರಡೂ ಬಣಕ್ಕೂ ಒಪ್ಪಿತವಾಗುವ ಒಡಂಬಡಿಕೆಯನ್ನು ವರಿಷ್ಠರೇ ರೂಪಿಸಿದ್ದು, ಶೆಟ್ಟರ್‌ ಜತೆಗೆ ಸವದಿ ಸೇರ್ಪಡೆಗೂ ಸಮ್ಮತಿ ದೊರಕಿದೆ ಎಂದು ಹೇಳಲಾಗುತ್ತಿದೆ.

Advertisement

ಸವದಿ ಜತೆ ಮಾತುಕತೆ ನಡೆಸುವಂತೆ ಸ್ಥಳೀಯ ನಾಯಕರಿಗೆ ಅಮಿತ್‌ ಶಾ ಸೂಚನೆ ನೀಡಿದ್ದು, ತೆರೆಮರೆಯಲ್ಲಿ ಈಗಾಗಲೇ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಆದರೆ ಈ ಹಂತದಲ್ಲಿ ರಾಜೀನಾಮೆ ನೀಡುವುದರಿಂದ ಯಾವುದೇ ಲಾಭ ಇಲ್ಲ ಎಂಬುದು ಸವದಿ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಡಬಲ್‌ ಆಫ‌ರ್‌ ನೀಡಲಾಗಿದೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

ಇದರ ಪ್ರಕಾರ ಸವದಿ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿಯಿಂದ ಸ್ಪರ್ಧಿಸಬೇಕು. ಇದಕ್ಕೆ ಪ್ರತಿಯಾಗಿ ಪುತ್ರ ಚಿದಾನಂದ ಸವದಿಯವರಿಗೆ ವಿಧಾನಸಭಾ ಟಿಕೆಟ್‌ ನೀಡಬೇಕೆಂಬ ಪ್ರಸ್ತಾಪವನ್ನು ಇಡಲಾಗಿದೆ. ಸವದಿ ಈ ಆಫ‌ರ್‌ನ್ನು ಇನ್ನೂ ಒಪ್ಪಿಲ್ಲ. ಆದರೆ “ವಾತಾವರಣ’ವನ್ನು ಅವಲೋಕಿಸಿ ಶೀಘ್ರ ನಿರ್ಧಾರ ತಿಳಿಸುವ ಸಾಧ್ಯತೆ ದಟ್ಟವಾಗಿದೆ.

ಇದರ ಜತೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಜನಾರ್ದನ ರೆಡ್ಡಿಯವರನ್ನೂ ಮರಳಿ ಪಕ್ಷಕ್ಕೆ ಕರೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಈ ಆಪರೇಷನ್‌ಗೆ ಬಳಕೆ ಮಾಡಲಾಗುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಕ್ಕಮಟ್ಟಿಗೆ ಮತ ಕೀಳುವ ಸಾಮರ್ಥ್ಯ ರೆಡ್ಡಿಗೆ ಇದೆ. ಸಹಜವಾಗಿಯೇ ಬಿಜೆಪಿ ಮತಗಳಿಗೆ ಅವರು ಕತ್ತರಿ ಹಾಕುತ್ತಿದ್ದಾರೆ. ಇದರಿಂದ ರೆಡ್ಡಿಯವರಿಗೆ ಲಾಭವಾಗದೇ ಇದ್ದರೂ ಬಿಜೆಪಿಗೆ ನಷ್ಟ ನಿರೀಕ್ಷಿತ. ಹೀಗಾಗಿ ಅವರನ್ನೂ ಪಕ್ಷಕ್ಕೆ ಮರಳಿ ಕರೆತಂದು ಕಾಂಗ್ರೆಸ್‌ ಕಟ್ಟಿ ಹಾಕುವುದಕ್ಕೆ ಬಿಜೆಪಿ ಲೆಕ್ಕಾಚಾರ ಹಾಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next