ಮಂಗಳೂರು: ನಾಲ್ಕು ಟಾಸ್ಕ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡುವ ಆಮಿಷಕ್ಕೆ ವ್ಯಕ್ತಿಯೊಬ್ಬರು 5.02 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಊರಿಗೆ ಬಂದಿದ್ದ ವ್ಯಕ್ತಿಗೆ ಮಾ.27ರಂದು ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಆಪ್ ಖಾತೆಗೆ ಪಾರ್ಟ್ ಟೈಂ ಕೆಲಸದ ಕುರಿತ ಸಂದೇಶ ಬಂದಿದೆ. ನಂತರ ಅವರ ಟೆಲಿಗ್ರಾಂ ಆ್ಯಪ್‌ಗೆ ಮೆಸೇಜ್ ಬರಲು ಆರಂಭವಾಗಿದ್ದು, ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 4 ಟಾಸ್ಕ್ ಮಾಡಲು ತಿಳಿಸಲಾಗಿತ್ತು.
ಅದರಂತೆ ಮೆಸೇಜ್ ಕಳುಹಿಸಿದ ಆರೋಪಿಗಳು ಮೊದಲಿಗೆ ಇವರ ಖಾತೆಗೆ 150 ರೂ. ಹಾಕಿದ್ದಾರೆ. ಮಾ.28ರಂದು ಮೊದಲ ಟಾಸ್ಕ್‌ನಲ್ಲಿ 12 ಸಾವಿರ ರೂ.ಹಾಕಲು ತಿಳಿಸಿದ್ದು, ಗೂಗಲ್ ಪೇ ಮೂಲಕ ಪಾವತಿಸಿದ್ದಾರೆ.
ಟಾಸ್ಕ್ -2ರಲ್ಲಿ 40 ಸಾವಿರ ರೂ. ಹಾಕಲು ತಿಳಿಸಿದ್ದು, ಅದನ್ನೂ ಗೂಗಲ್ ಪೇ ಮೂಲಕ ಪಾವತಿಸಿದ್ದಾರೆ. 3ನೇ ಟಾಸ್ಕ್ನಲ್ಲಿ 1 ಲಕ್ಷ ರೂ. ಹಾಕಲು ತಿಳಿಸಿದ್ದು, 40 ಸಾವಿರ ಗೂಗಲ್ ಮೇ ಮೂಲಕ ಮತ್ತು 60 ಸಾವಿರ ರೂ.ನೆಟ್‌ಬ್ಯಾಂಕಿಂಗ್ ಮೂಲಕ ಪಾವತಿಸಿದ್ದಾರೆ. ಕೊನೆಯ ಟಾಸ್ಕ್‌ನಲ್ಲಿ 3,50,000 ರೂ.ಹಾಕಲು ತಿಳಿಸಿದ್ದು, ಅದನ್ನೂ ಐಎಂಪಿಎಸ್ ಮೂಲಕ ಪಾವತಿಸಿದ್ದಾರೆ. ನಂತರ ಆರೋಪಿಗಳು ಇನ್ನೂ 10 ಲಕ್ಷ ರೂ. ವರ್ಗಾಯಿಸಿದರೆ, 17 ಲಕ್ಷ ಸಿಗುವುದಾಗಿ ತಿಳಿಸಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹೀಗೆ ಹಂತ ಹಂತವಾಗಿ ಒಟ್ಟು 5,02,000 ರೂ. ಹಣ ಅರೋಪಿಗಳು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.