ದೋಟಿಹಾಳ: ಕಿಲ್ಲಾರಹಟ್ಟಿ ಗ್ರಾಪಂ ವ್ಯಾಪ್ತಿಯ ರಾಮ್‌ಜೀ ನಾಯಕ್ ತಾಂಡಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಒಂದು ತಿಂಗಳ ಕಳೆದರೂ ಇದುವರೆಗೂ ಅಲ್ಲಿನ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ.
2002ರಲ್ಲಿ ಆಸ್ತಿಕರಣ ಹಕ್ಕನ್ನು ತೆಗೆದು ಮಕ್ಕಳ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಆರ್ಟಿಕಲ್ 51-ಎ ಅಡಿಯಲ್ಲಿ ನೀಡಲಾಗಿದೆ. ಆದರೂ ಇಲ್ಲಿ 3-6 ವರ್ಷದ ಒಳಗಿನ ಈ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಸಿಗುತ್ತಿಲ್ಲ ಯಾಕೆ? ಇಲ್ಲಿಯ ಶಿಕ್ಷಣದಿಂದ ವಂಚಿತವಾಗುತ್ತಿರುವ ಇಂತಹ ಮಕ್ಕಳ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಯಾಕೆ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಲ್ಲಿ ಮೂಡಿ ಬರುತ್ತಿದೆ.
ಹಿನ್ನೆಲೆ: ರಾಮಜೀ ನಾಯಕ್ ತಾಂಡದಲ್ಲಿ 3-6 ವರ್ಷದೊಳಗಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಲ್ಲಿ ಕಡ್ಡಾಯ ಶಿಕ್ಷಣ ಮಾಯವಾಗುತ್ತಿದೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ಸರಿಯಾದ ಪೌಷ್ಠಿಕ ಆಹಾರ ಸಿಗುತ್ತಿಲ್ಲ ಎಂಬ ಸುದ್ದಿಯನ್ನು ಜ.2 ರಂದು ಉದಯವಾಣಿ ಆನ್ಲೈನ್ ಹಾಗೂ ಜ.3 ರಂದು ಉದಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಜ. 8 ರಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ. ರಾಮತ್ನಾಳ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರೋಹಿಣಿ, ತಾಲೂಕು ವಿವಿಧ ಇಲಾಖೆಯ ಅಧಿಕಾರಗಳು ಅಂದು ತಾಂಡಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಶಿಕ್ಷಣ ಬಗ್ಗೆ ಸಾರ್ವಜನಿಕ ರಿಂದ ಮಾಹಿತಿ ಪಡಕೊಂಡು.
ನಂತರ ತಾಲೂಕು ಪಂಚಾಯತಿಯಲ್ಲಿ ಸಭೆ ನಡೆಸಿ ತಾಲೂಕು ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜೆ. ರಾಮತ್ನಾಳ ಅವರು, ಯಾವುದೇ ಕಾರಣಕ್ಕೂ ಮಕ್ಕಳ ಹಕ್ಕು ಉಲ್ಲಂಘನೆಯಾಗಲು ಆಯೋಗದ ಬಿಡುವುದಿಲ್ಲ. ಕೂಡಲೇ ರಾಮಜೀ ನಾಯಕ್ ತಾಂಡದ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿ ಹಾಗೂ ತ್ವರಿತಗತಿಯಲ್ಲಿ ಸರಕಾರಕ್ಕೆ ಒಂದು ಅಂಗನವಾಡಿ ಕೇಂದ್ರ ಆರಂಭಿಸಲು ಪ್ರಸ್ತಾಪನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಿ ಅಲ್ಲಿಯವರಗೆ ತಾತ್ಕಾಲಿಕವಾಗಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿ ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷಣ, ಆಹಾರ ನೀಡಲು ಮುಂದಾದ ಮಹಿಳೆ: ಆದರೂ ಇದುವರೆಗೂ ರಾಮಜೀ ನಾಯಕ್ ತಾಂಡದ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಫೆ.7 ರಂದು ತಾಂಡಕ್ಕೆ ಭೇಟಿ ನೀಡಿದ ವೇಳೆ ತಾಂಡದ 3-6 ವರ್ಷದೊಳಗಿನ ಮಕ್ಕಳಿಗೆ ತಾಂಡದ ಮಹಿಳೆ ಶಿಲ್ಪಾ ಚವ್ಹಾಣ ಅವರು ತಾಂಡದ ಸ್ವಯಂ ಪ್ರೇರಿತವಾಗಿ ಒಂದು ಕೊಠಡಿಯಲ್ಲಿ ಶಿಕ್ಷಣ ಹಾಗೂ ಅನ್ನ ನೀಡುತ್ತಿರುವುದು ಕಂಡು ಬಂತು.
ಇದರ ಬಗ್ಗೆ ಅವರನ್ನು ವಿಚಾರಿಸಿದಾಗ, ಕಳೆದ ತಿಂಗಳು ನಮ್ಮ ತಾಂಡಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿ ನೀಡಿದ ವೇಳೆ ತಾತ್ಕಾಲಿಕ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು. ಅದರಂತೆ ಅಂಗನಾಡಿ ಕೇಂದ್ರದ ಅಂಗನವಾಡಿ ಮೇಲ್ವಿಚಾರಕಿ ಶಾರದ ಅವರು ಕಿಲ್ಲಾರಹಟ್ಟಿ ಕೇಂದ್ರದಿಂದ 15 ದಿನಗಳ ಆಹಾರ ನೀಡಿ, ಮಕ್ಕಳಿಗೆ ಶಿಕ್ಷಣ ನೀಡಲು ತಿಳಿಸಿದರು. ನಂತರ 2 ದಿನ ಕಳೆದ ಮೇಲೆ ಮುಚ್ಚಲು ತಿಳಿಸಿದರು. ಆದರೆ ನಾನು ಮುಚ್ಚಿಲ್ಲ. ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇನೆ. ಮಕ್ಕಳಿಗೆ ನೀಡಿದ ಆಹಾರ ಪದಾರ್ಥಗಳು ಮುಗಿದು ಹೋಗಿದೆ. ಮನೆಯಿಂದ ಆಹಾರ ಪದಾರ್ಥಗಳನ್ನು ತಂದು ಮಕ್ಕಳಿಗೆ ಆಹಾರ ಮತ್ತು ಶಿಕ್ಷಣ ನೀಡುತ್ತಿದ್ದೇನೆ.
ತಾಲೂಕು ಅಧಿಕಾರಿಗಳನ್ನು ಇದರ ಬಗ್ಗೆ ವಿಚಾರಿಸಿದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಬಂದು ಹೋಗಿ ತಿಂಗಳು ಕಳೆದರೂ ಇದುವರೆಗೂ ತಾಲೂಕು ಆಡಳಿತದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ರಾಮಜೀ ನಾಯಕ್ ತಾಂಡದಲ್ಲಿ ಕೂಡಲೇ ತಾತ್ಕಾಲಿಕ ಕೇಂದ್ರ ಆರಂಭಿಸಲು ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ಪಕ್ಕದ ಅಂಗನವಾಡಿ ಕೇಂದ್ರದ ಸಿಬ್ಬಂದಿಯನ್ನು ಮೂರು ದಿನಗಳ ಕಾಲ ಹಾಗೂ ಇನ್ನೊಂದು ಕೇಂದ್ರ ಸಿಬ್ಬಂದಿಯನ್ನು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಲು ಸೂಚನೆ ನೀಡುತ್ತೇನೆ. –
ತಿಪ್ಪಣ್ಣ ಸಿರಸಂಗಿ, ಡಿಡಿ ಕೊಪ್ಪಳ
ರಾಮಜೀ ನಾಯಕ್ ತಾಂಡದಲ್ಲಿ ಮಕ್ಕಳು ಹಕ್ಕುಗಳ ಉಲ್ಲಂಘನೆಯ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಾಲೂಕಿನ ಹಿರಿಯ ಅಧಿಕಾರಿಗಳಿಗೆ ಆಯೋಗದಿಂದ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಅಧಿಕಾರಿಗಳಿಗೆ ಕೂಡಲೇ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಗೆ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. –
ಶೇಖರಗೌಡ ಜೆ. ರಾಮತ್ನಾಳ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ