ಉದಯವಾಣಿ ಸಮಾಚಾರ
ದೋಟಿಹಾಳ: ಕುಷ್ಟಗಿ ತಾಲೂಕಿನ ಮೇಗೂರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ದಿನವೇ ಮಕ್ಕಳು ಶಾಲೆಗೆ ಬರಲಿಲ್ಲ. ಸುತ್ತಲಿನ ಶಾಲೆಗಳಲ್ಲಿ ಶಾಲಾ ಆರಂಭೋತ್ಸವ ನಡೆದರೆ, ಇಲ್ಲಿನ ಗ್ರಾಮಸ್ಥರು ಗ್ರಾಮದ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ ಎಂದು ಆಕ್ರೋಶಗೊಂಡು ಮಕ್ಕಳನ್ನು ಶಾಲೆಗೆ ಕಳುಹಿಸಿರಲಿಲ್ಲ.
ಶಿಥಿಲ ಕಟ್ಟಡದಲ್ಲಿ 2-3 ವರ್ಷಗಳಿಂದ ಶಿಕ್ಷಣ ನೀಡುತ್ತಿದ್ದಾರೆ. ಹೊಸ ಕೊಠಡಿಗಳ ಕಾಮಗಾರಿ ಆರಂಭವಾದರೆ ಮಾತ್ರ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಎಂದು ಒತ್ತಿ ಹೇಳಿದರು. ಹೀಗಾಗಿ ಶುಕ್ರವಾರ ಶಾಲಾ ಪ್ರಾರಂಭೋತ್ಸವಕ್ಕಾಗಿ ಶಿಕ್ಷಕರು ಸಿಂಗರಿಸಿದ್ದ ಶಾಲೆಯು ಮಕ್ಕಳು ಇಲ್ಲದೇ ಬಿಕೋ ಎನ್ನುತ್ತಿತ್ತು. ಶಾಲೆಯನ್ನು ಸಿಂಗಾರ ಮಾಡಿ, ಚಿಣ್ಣರಿಗೆ ಹೂ, ಪುಷ್ಪ ಹಾಗೂ ಸಮವಸ್ತ್ರ ನೀಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು.
ಅದರೆ ಶಾಲಾ ಮಕ್ಕಳು ಮಾತ್ರ ಶಾಲೆಯ ಹತ್ರ ಸುಳಿಯಲಿಲ್ಲ. ಶಿಕ್ಷಕರು ಗ್ರಾಮದಲ್ಲಿ ಸಂಚರಿಸಿ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಪಾಲಕರಿಗೆ ಮನವಿ ಮಾಡಿದ್ದರು ಆದರೆ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸಲಿಲ್ಲ. ಹೀಗಾಗಿ ಶಾಲಾ ಆರಂಭದ ದಿನವೇ ಶಾಲೆ ಮಕ್ಕಳಿಲ್ಲದೆ ಬಿಕೋ ಎನ್ನುತ್ತಿತ್ತು.
ಶಾಲೆಗೆ ಭೇಟಿ ನೀಡಿದ ಸಿಆರ್‌ಪಿಸಿ ಸೋಮಲಿಂಗಪ್ಪ ಗುರಿಕಾರ್ ಅವರು ಗ್ರಾಮಸ್ಥರ ಜೊತೆ ಮಾತನಾಡಿ ಈ ಶಾಲೆಗೆ ಎರಡು ಕೊಠಡಿಗಳು ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾಪನೆ ಸಲ್ಲಿಸಲಾಗಿತ್ತು. ಆದರೆ ಈ ಶಾಲೆ ಸೇರಿ ತಾಲೂಕಿನ ಇನ್ನೂ ಉಳಿದ ಐದು ಶಾಲೆಗಳ 9 ಕೊಠಡಿಗಳ ನಿರ್ಮಾಣಕ್ಕೆ ಸಲಿಸಿದ ಪ್ರಸ್ತಾಪ ಕೈಬಿಟ್ಟು ಆಯ್ದ ಶಾಲೆಗಳಿಗೆ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಪ್ರಿಂಟರ್ ಖರೀದಿಗೆ ಒಪ್ಪಿಗೆ ಸಿಕ್ಕಿದೆ. ಹೀಗಾಗಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ತಡವಾಗಿದೆ.
ಮುಂದಿನ ದಿನಗಳಲ್ಲಿ ನಿಮ್ಮ ಗ್ರಾಮಕ್ಕೆ ಹೊಸ ಕೊಠಡಿಗಳ ನಿರ್ಮಾಣ ಮಾಡಿಕೊಡುತ್ತಾರೆ. ಸದ್ಯ ಶಾಲಾ ಮಕ್ಕಳನ್ನು ಶಾಲೆಗೆ ಕಳಿಸಿ ಎಂದು ಗ್ರಾಮಸ್ಥರಿಗೆ, ಪಾಲಕರಿಗೆ ಮನವಿ ಮಾಡಿದರು. ಆದರೆ ಪಾಲಕರು ಮಾತ್ರ ನೂತನ ಕೊಠಡಿಗಳ ನಿರ್ಮಾಣದ ಕಾಮಗಾರಿ ಆರಂಭವಾಗಬೇಕು. ಅಲ್ಲಿಯವರೆಗೂ ಮಕ್ಕಳನ್ನು ಶಾಲೆಗೆ ಕಳಿಸುವದಿಲ್ಲ. ಅಗತ್ಯ ಬಿದ್ದರೆ ನಮ್ಮ ಮಕ್ಕಳ ವರ್ಗಾವಣೆ ಪ್ರಮಾಣ ನೀಡಿ, ಬೇರೆ ಗ್ರಾಮದ ಶಾಲೆಗೆ ಕಳಿಸುತ್ತೇವೆ ಎಂದು ಹೇಳಿದರು.