Advertisement

ಅವಕಾಶ ವಂಚಿತ ದೋಟಿಹಾಳ ಆರೋಗ್ಯ ಕೇಂದ್ರ

05:12 PM Jun 29, 2022 | Team Udayavani |

ದೋಟಿಹಾಳ: ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಮುದಾಯ ಆರೋಗ್ಯ ಕೇಂದ್ರವಾಗುವ ಅವಕಾಶ ಕೈತಪ್ಪಿದ್ದು ಗ್ರಾಮಸ್ಥರ ಮತ್ತು ಸಂಘ, ಸಂಸ್ಥೆಯವರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ 2016-17ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಕಾಯಕಲ್ಪ ಪ್ರಶಸ್ತಿ (ಸಮಾಧಾನಕರ) ಪಡೆದು, 2017-18ನೇ ಸಾಲಿನಲ್ಲಿ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿತ್ತು. 2020-21ರಲ್ಲಿ ರಾಷ್ಟ್ರೀಯ ಗುಣಮಟ್ಟದ ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡು. ಈಗ 2021-22ನೇ ಸಾಲಿನಲ್ಲಿ ಕೇಂದ್ರದ ಎನ್‌ ಕ್ಯೂಎಎಸ್‌ಗೆ (ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು) ಆಯ್ಕೆಯಾದ ತಾಲೂಕಿನ ಏಕೈಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ಪ್ರಸ್ತಾವನೆಯಿಂದ ಕೈಬಿಟ್ಟಿದ್ದು ಯಾವ ಕಾರಣಕ್ಕೆ ಎಂದು ಗ್ರಾಮಸ್ಥರು ಆರೋಗ್ಯ ಅಧಿಕಾರಿಗಳನ್ನು ಮತ್ತು ಜನಪ್ರತಿನಿ ಧಿಗಳನ್ನು ಪ್ರಶ್ನೆ ಮಾಡುವಂತಾಗಿದೆ.

ದೋಟಿಗಾಳ ಪ್ರಾಥಮಿಕ ಆರೋಗ್ಯ ಕೇಂದ್ರವು ಸಮುದಾಯ ಆರೋಗ್ಯ ಕೇಂದ್ರವಾಗುವ ಎಲ್ಲ ಅರ್ಹತೆ ಹೊಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು ನಾಲ್ಕು ಎಕರೆ ವಿಶಾಲವಾದ ಜಾಗೆಯಲ್ಲಿದೆ. ಕೇಂದ್ರದ ಆವರಣದಲ್ಲಿ ಗಿಡಮೂಲಿಕೆ ಸಸಿಗಳನ್ನು ಬೆಳೆಸಲಾಗಿದೆ. ಈ ಕೇಂದ್ರದ ವ್ಯಾಪ್ತಿಯಲ್ಲಿ 24 ಹಳ್ಳಿ ಮತ್ತು 4 ತಾಂಡಾಗಳು ಸೇರಿ ಸುಮಾರು 37,970 ಜನಸಂಖ್ಯೆ ಇದೆ. ಐದು ಉಪಕೇಂದ್ರಗಳನ್ನು ಹೊಂದಿದೆ.

ಇಷ್ಟೆಲ್ಲ ಸಮುದಾಯ ಆರೋಗ್ಯ ಕೇಂದ್ರವಾಗುವ ಅರ್ಹತೆ ಇದ್ದರೂ ಪಟ್ಟಿಯಿಂದ ಕೈಬಿಟ್ಟಿದ್ದು ಯಾಕೆ ಎಂದು ಸಾರ್ವಜನಿಕರು ಜನಪ್ರತಿನಿಧಿಗಳನ್ನು ಮತ್ತು ಆರೋಗ್ಯ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.

ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಡ್ತಿ ನೀಡಲು ಸಂಸದ ಸಂಗಣ್ಣ ಕರಡಿ ಅವರು ಅಂದಿನ ಡಿಎಚ್‌ಒ ಅವರಿಗೆ ಮಾಹಿತಿ ನೀಡಿದರೂ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ. ಹೀಗಾಗಿ ಕೂಡಲೇ ಜನಪ್ರತಿನಿಧಿಗಳು ಮತ್ತು ಆರೋಗ್ಯ ಅಧಿಕಾರಿಗಳು ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Advertisement

ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರದ ಪಟ್ಟಿಯಿಂದ ಕೈಬಿಟ್ಟಿರುವುದು ತಪ್ಪು. ಸಮುದಾಯ ಆರೋಗ್ಯ ಕೇಂದ್ರವಾಗುವ ಎಲ್ಲ ಅರ್ಹತೆ ಇದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಧಿಕಾರದಲ್ಲಿ ಇದೆ. ನಮ್ಮ ಸರಕಾರ ಇಲ್ಲ. –ಹಸನಸಾಬ್‌ ದೋಟಿಹಾಳ, ಮಾಜಿ ಶಾಸಕ

ಕುಷ್ಟಗಿ ತಾಲೂಕಿನಿಂದ ಹನುಮನಾಳ, ಹುಲಗೇರಿ ಮತ್ತು ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿತ್ತು. -ಅಮರೇಗೌಡ ಪಾಟೀಲ್‌ ಬಯ್ನಾಪುರ, ಶಾಸಕ

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವ ವೇಳೆ ಶಾಸಕರ ಒಪ್ಪಿಗೆ ಪಡೆದುಕೊಂಡು ಜಿಲ್ಲಾಮಟ್ಟದಿಂದ ಚರ್ಚೆ ಮಾಡಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಮೇಲೆ ಆಯ್ಕೆಯಾಗುತ್ತದೆ. –ಡಾ| ಅಲಕಾನಂದ ಮಾಳಗಿ, ಡಿಎಚ್‌ಒ ಕೊಪ್ಪಳ

-ಮಲ್ಲಿಕಾರ್ಜುನ ಮೆದಿಕೇರಿ

Advertisement

Udayavani is now on Telegram. Click here to join our channel and stay updated with the latest news.

Next