ಗೋರೇಬಾಳ: ಯಾವುದೇ ಕಾರಣಕ್ಕೂ ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗುವುದಿಲ್ಲ. ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಬೀಳಿಸುವುದು ಬಿಜೆಪಿಗೆ ಸಾಧ್ಯವಿಲ್ಲ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಿಂದ ಗೊರೇಬಾಳ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರ ಬೀಳಿಸುತ್ತದೆ ಎಂಬ ವರದಿಗಳ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಎಂದರು.
ಹಣದ ಕೊರತೆಯಿಲ್ಲ: ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ 49 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ರಾಜ್ಯದಲ್ಲಿ ಅತ್ಯಧಿಕವಾಗಿ ರಾಯಚೂರು ಜಿಲ್ಲೆಯ ಜನತೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲಿದ್ದಾರೆ. ಸಾಲ ಮನ್ನಾ ಹಾಗೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ವಿಪಕ್ಷಗಳು ಜನತೆಯನ್ನು ದಾರಿ ತಪ್ಪಿಸುವ ಕೆಲಕ್ಕೆ ಮುಂದಾಗಿವೆ ಎಂದು ಆರೋಪಿಸಿದರು.
ಮನೆ ನಿರ್ಮಾಣ: ಗೊರೇಬಾಳ ಗ್ರಾಮದಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿಗಳಿಗೆ ನೀಡಲಾಗಿರುವ ಜಾಗೆಯಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಗ್ರಾಮ ವಿಕಾಸ ಯೋಜನೆಯಡಿ 1 ಕೋಟಿ ಅನುದಾನ ನೀಡಿದ್ದೇನೆ. 2 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುವುದು. ಮುಂದಿನ ವರ್ಷದ ವೇಳೆಗೆ ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ಸಿಸಿ ನಿರ್ಮಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ಶಿವಕುಮಾರ, ತಾಪಂ ಸದಸ್ಯ ಕೆ.ಗುರುರಾಜ, ಜೆಡಿಎಸ್ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ಜೆಡಿಎಸ್ ಮುಖಂಡರಾದ ದೊಡ್ಡಮನಿ ಶರಣೇಗೌಡ, ಆರ್.ಫಾಲಾಕ್ಷಗೌಡ, ಬಿ.ಮಲ್ಲನಗೌಡ, ಎಂ ಮಲ್ಲನಗೌಡ, ವಿಜಯಲಕ್ಷ್ಮೀ ಇದ್ದರು.
ಅಧಿಕಾರಿಗಳ ಗೈರು: ಕಂದಾಯ ಇಲಾಖೆಯಿಂದ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಸಚಿವ ವೆಂಕಟರಾವ್ ನಾಡಗೌಡ ಭಾಗವಹಿಸಿದ್ದರು. ಆದರೆ ಕಂದಾಯ ಇಲಾಖೆಯ ಯಾವ ಅಧಿಕಾರಿಗಳು ಭಾಗವಹಿಸದಿರುವುದು ಮಾತ್ರ ಸೋಜಿಗದ ಸಂಗತಿ. ಜೊತೆಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬದಲಾಗಿ ಸಹಾಯಕ ನಿರ್ದೇಶಕ ಪವನಕುಮಾರ ಭಾಗವಹಿಸಿದ್ದರು.