ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಸವರಿಗೂ ಬಸವನಾಡು ವಿಜಯಪುರಕ್ಕೂ ಅವಿನಾಭಾವ ನಂಟಿತ್ತು. ದಶಕದ ಹಿಂದೆ ಜಿಲ್ಲೆಗೆ ಆಗಮಿಸಿ ನೀರಾವರಿಗಾಗಿ ನಡೆದ ಜನಪರ ಹೋರಾಟ ಬೆಂಬಲಿಸಿದ್ದನ್ನು ಜಿಲ್ಲೆಯ ಜನ ಸ್ಮರಿಸುತ್ತಿದ್ದಾರೆ.
2010 ರಲ್ಲಿ ಅಂದು ರಾಜ್ಯವಷ್ಟೇ ಅಲ್ಲ ದೇಶಾದ್ಯಂತ ಹೋರಾಟದ ಮೂಲಕ ಸದ್ದು ಮಾಡಿದ್ದ ಭೀಮಾ ನದಿ ನೀರು ರೈತವರ್ಗ ಸಮಿತಿ ದಶಮಾನೋತ್ಸವ ಕಾರ್ಯಕ್ರಮಕ್ಕೆ ಎಸ್. ದೊರೆಸ್ವಾಮಿ ವಿಜಯಪುರ ಜಿಲ್ಲೆಗೆ ಆಗಮಿಸಿದ್ದರು.
ಮಹಾರಾಷ್ಟ್ರ ಕರ್ನಾಟಕದ ಪಾಲಿನ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಭೀಮಾ ನದಿ ನೀರು ರೈತವರ್ಗ ಸಮಿತಿ ಸುಪ್ರಿಂ ಕೋರ್ಟ್ ಮೊರೆ ಹೋಗಿತ್ತು. 2000 ದಲ್ಲಿ ರಚನೆಯಾಗಿದ್ದ ಈ ಸಮಿತಿ ತನ್ನ ಹೋರಾಟದ ಮೂಲಕ ಅಂದು ಬೇಸಿಗೆಯಲ್ಲಿ ಪ್ರತಿದಿನ 400 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರಕ್ಕೆ ಮಧ್ಯಂತರ ಆದೇಶ ನೀಡಿತ್ತು.
ಈ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮರಗೂರು ಗ್ರಾಮದ ಬಳಿ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಹತ್ತಿರ ಜನೇವರಿ 8 ರಿಂದ 10ರ ವರೆಗೆ ಮೂರು ದಿನ ನಡೆದಿತ್ತು. ಸಮಿತಿ ಅಧ್ಯಕ್ಷ ಮತ್ತು ಭೀಮಾ ಹೋರಾಟಗಾರ ಪಂಚಪ್ಪ ಕಲಬುರಗಿ ಈ ಕಾರ್ಯಕ್ರಮ ಆಯೋಜಿಸಿದ್ದರು.
ಸದರಿ ಐತಿಹಾಸಿಕ ಹೋರಾಟಕ್ಕೆ ಚಾಲನೇ ನೀಡಿದ್ದ ಎಚ್.ಎಸ್. ದೊರೆಸ್ವಾಮಿ. ಕಾರ್ಯಕ್ರಮದ ಅಚ್ಚುಕಟ್ಟಾಗಿ ನಡೆದುದಕ್ಕೆ ಪ್ರಭಾವಿತರಾಗಿ ಮೂರೂ ದಿನಗಳ ಕಾರ್ಯಕ್ರಮ ಮುಗಿಯುವ ವರೆಗೆ ಅಲ್ಲೇ ಇದ್ದು ಹೋರಾಟಗಾರರನ್ನು ಹುರುದುಂಬಿಸಿದ್ದರು.