ನಮ್ಮೊಳಗಿನ ಅಹಂ, ಮೋಸ, ಪರರ ಬಗೆಗಿನ ಕೆಟ್ಟ ಯೋಚನೆ ನಮ್ಮನ್ನೇ ಸುಡುತ್ತದೆ… ಪರರ ವಸ್ತು ಪಾಶಣವಿದ್ದಂತೆ.. ಇಂತಹ ಒಂದು ಸೂಕ್ಷ್ಮ ಸಂದೇಶವನ್ನು ಹೊತ್ತುಕೊಂಡು ತೆರೆಗೆ ಬಂದಿರುವ ಚಿತ್ರ “ದೂರದರ್ಶನ’.
ದೂರದರ್ಶನ ಒಂದು ಗಟ್ಟಿ ಕಂಟೆಂಟ್ ಇರುವ ಸಿನಿಮಾ. ಇದು ಕೂಡಾ ಕರಾವಳಿ ಭಾಗದ ಊರೊಂದರಲ್ಲಿ ನಡೆಯುವ ಕಥೆ. ನಮ್ಮ ಸುತ್ತ, ನಾವು ನೋಡಿರುವಂತಹ ಒಂದಷ್ಟು ಪಾತ್ರಗಳನ್ನು ಇಟ್ಟುಕೊಂಡು ನಿರ್ದೇಶಕ ಸುಕೇಶ್ ಶೆಟ್ಟಿ ಅದಕ್ಕೆ ಸಿನಿಮಾ ರೂಪ ಕೊಟ್ಟಿದ್ದಾರೆ.
ಸಿನಿಮಾ ಮೂಲಕಥೆ ತೆರೆದುಕೊಳ್ಳುವುದು ಮನೆಗೆ ಬರುವ ಟಿವಿಯೊಂದರ ಮೂಲಕ. ಟಿವಿ ಇಲ್ಲಿ ಕಥೆಯ ಒಂದು ಬಿಂದುವಷ್ಟೇ. ಆದರೆ, ಇದರ ಸುತ್ತ ಅನೇಕ ಉಪಕಥೆ ಗಳ ಮೂಲಕ ಒಬ್ಬ ಮನುಷ್ಯನ ವರ್ತನೆಯಿಂದ ಏನೆಲ್ಲಾ ಸಮಸ್ಯೆಗಳಾಗುತ್ತದೆ, ಆತನ ಕುಟುಂಬ ಯಾವ ರೀತಿ ವ್ಯಥೆ ಪಡಬೇಕಾಗುತ್ತದೆ ಅಂಶಗಳನ್ನು ಹೇಳಲಾಗಿದೆ. ಮನು ಮತ್ತು ಕಿಟ್ಟಿ ಸ್ನೇಹ, ಜಿದ್ದು, ಪ್ರೇಮ… ಹೀಗೆ ಬೇರೆ ಬೇರೆ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ. ಇಲ್ಲಿ ಸಾಕಷ್ಟು ಕಲಾವಿದರಿದ್ದಾರೆ. ಆದರೆ, ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಇಡೀ ಸಿನಿಮಾ ಎಂಟರ್‌ಟೈನಿಂಗ್ ಆಗಿ ಸಾಗುತ್ತದೆ.
ಚಿತ್ರದ ಒಂದಷ್ಟು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿದ್ದರೆ ಚಿತ್ರದ ವೇಗ ಮತ್ತಷ್ಟು ಹೆಚ್ಚುತ್ತಿತ್ತು. ಅದರಾಚೆ ಒಂದು ನೆಟಿವಿಟಿ ಸಿನಿಮಾವಾಗಿ “ದೂರದರ್ಶನ’ ಇಷ್ಟವಾಗುತ್ತದೆ. ಪೃಥ್ವಿ ಅಂಬಾರ್, ಅಯಾನ ನಾಯಕ-ನಾಯಕಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಉಗ್ರಂ ಮಂಜು, ಸುಂದರ್, ಹರಿಣಿ, ದೀಪಕ್ ರೈ ನಟಿಸಿದ್ದಾರೆ.
ರವಿಪ್ರಕಾಶ್ ರೈ