Advertisement
ಈಗಾಗಲೇ ಪಕ್ಷದ ಹೈಕಮಾಂಡ್ ವಿದ್ಯಾರ್ಥಿಗಳ ಸಾಲಮನ್ನಾ, ಪ್ರತಿ ಬಡ ಕುಟುಂಬದ ಓರ್ವ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ನೀಡುವ “ಮಹಾಲಕ್ಷ್ಮೀ’ ಯೋಜನೆ ಸಹಿತ ಹಲವು ಗ್ಯಾರಂಟಿಗಳನ್ನು ಘೋಷಿಸಿದ್ದು, ಈ ಗ್ಯಾರಂಟಿ ಕಾರ್ಡ್‌ಗಳನ್ನು ಮನೆಮನೆಗೆ ತಲುಪಿಸಲಾಗುವುದು. ಇದಕ್ಕಾಗಿ ಕಾರ್ಯಕರ್ತರ ತಂಡಗಳನ್ನು ರಚಿಸಿ, ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಕಾಂಗ್ರೆಸ್ ಚುನಾವಣ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರಕಾರದ ಗ್ಯಾರಂಟಿಗಳು ಜನರಿಗೆ ತಲುಪಿಯೇ ಇಲ್ಲ ಎಂದು ಆರೋಪಿಸುವ ಬಿಜೆಪಿ ಸ್ವತಃ ಆಯೋಜಿಸುವ ಮಹಿಳಾ ಸಮಾವೇಶದಲ್ಲೇ ಗ್ಯಾರಂಟಿ ಯೋಜನೆಗಳು ಯಾರಿಗೆ ತಲುಪಿಲ್ಲ ಎಂಬುದನ್ನು ಲೆಕ್ಕಹಾಕಲಿ ಎಂದು ಸೊರಕೆ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಸರಕಾರ ನುಡಿದಂತೆ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಆದರೂ ಬಿಜೆಪಿಯು ಈ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪಿಯೇ ಇಲ್ಲ ಎಂದು ಆರೋಪಿಸುತ್ತಿದೆ. ಈಗ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಯೋಜಿಸುವ ಮಹಿಳಾ ಸಮಾವೇಶಗಳಲ್ಲೇ ಇದರ ಪರೀಕ್ಷೆ ನಡೆಯಲಿ. ಎಷ್ಟು ಜನರಿಗೆ ಗ್ಯಾರಂಟಿ ಯೋಜನೆಗಳು ಬಂದಿಲ್ಲ ಎಂಬುದರ ಬಗ್ಗೆ ಲೆಕ್ಕಹಾಕಲಿ ಎಂದು ಕಾಂಗ್ರೆಸ್ ಚುನಾವಣ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು. ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಮತ್ತಿತರರಿದ್ದರು.