Advertisement

ಮನೆ, ಮನೆಗೆ ತೆರಳಿ ಮತಯಾಚಿಸಿದ ಜನಪ್ರತಿನಿಧಿಗಳು

06:06 PM Apr 15, 2021 | Team Udayavani |

ಬಸವಕಲ್ಯಾಣ: ವಿಧಾನಸಭೆ ಉಪ ಚುನಾವಣೆಯಲ್ಲಿ ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವಾಣ ನಗರದ ವಿವಿಧ ಕಾಲೋನಿಗಳಲ್ಲಿ ಮನೆ-ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಪರವಾಗಿ ಮತಯಾಚಿಸಿದರು. ಬಸವಾದಿ ಶರಣರು ನಡೆದಾಡಿದ ಈ ನಾಡು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಪಡಿಸಬೇಕಿದೆ. ಇದಕ್ಕೆ ದೂರದೃಷ್ಟಿವುಳ್ಳ ಮತ್ತು ಅಭಿವೃದ್ಧಿ ಪರ ಚಿಂತನೆಯುಳ್ಳ ನಾಯಕನ ಅಗತ್ಯವಿದೆ.

Advertisement

ಆದ್ದರಿಂದ ಶರಣು ಸಲಗರ್‌ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಲಬುರಗಿ ಸಂಸದ ಉಮೇಶ ಜಾಧವ, ಬಸವರಾಜ ಪವಾರ, ದೀಲಿಪ ಕಲಬುರಗಿ, ಡಾ| ಕಿಶೋರ ರಾಠೊಡ,ಅಮರ ಬಡದಾಳೆ ಇದ್ದರು. ನಂತರ ಸಚಿವ ಪ್ರಭು ಚೌವಾಣ, ಪಡಿತರ ವಿತರಕರ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿ, ಲಾಕ್‌ಡೌನ್ ಸಂದರ್ಭದಲ್ಲಿ ಪಡಿತರ ವಿತರಕರು ಸಮಯಕ್ಕೆ ಸರಿಯಾಗಿ ಜನತೆಗೆ ಆಹಾರ ಸಿಗುವಂತೆ ಮಾಡಿರುವುದು ಎಂದಿಗೂ ಮರೆಯುವಂತಿಲ್ಲ ಎಂದರು.ನಂತರ ವಸತಿ ಸಚಿವ ವಿ. ಸೋಮಣ್ಣ ಮಾತನಾಡಿದರು. ಪಡಿತರ ವಿತರಕ ಸಂಘದ ಅಧ್ಯಕ್ಷ ಪ್ರಕಾಶ ಮೆಂಡೋಳೆ, ಆನಂದ ಪಾಟೀಲ, ಸಂಗಪ್ಪ ಚಂದನಕೇರೆ ಸೇರಿದಂತೆ ಮತ್ತಿತರರು ಇದ್ದರು.

ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ: ಮಂಠಾಳಕರ್ ಬಸವಕಲ್ಯಾಣ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನೋಪಯೋಗಿ ಹಾಗೂ ಅಭಿವೃದ್ಧಿ ಯೋಜನೆಗಳು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್‌ ಅವರ ಗೆಲ್ಲಲು ಪ್ರಮುಖ ಕಾರಣಗಳು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್‌ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯುರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಉಸ್ತುವಾರಿಗಳಾದ ಅರುಣಸಿಂಗ್‌, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಯ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ ಪ್ರಚಾರ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ದಾರೆ ಎಂದರು. ಜನಪರ ಮತ್ತು ಕಲ್ಯಾಣ ಕಾರ್ಯಕ್ರಮಗಳು ಅಭಿವೃದ್ಧಿ ಯೋಜನೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮತ ಕೇಳುತ್ತಿದ್ದು, ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಇಡೀ ಕ್ಷೇತ್ರದಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದ್ದು, ಅಭ್ಯರ್ಥಿ ಶರಣು ಸಲಗರ್‌ ಅವರ ಗೆಲುವು ನಿಶ್ಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next