Advertisement
ಇಂದಿನ ಆಧುನಿಕ ಯುಗದ ಮಹಿಳೆಯರು ಬಾಣಂತನ ಹೇಗೆ ಮಾಡುವುದೆಂಬ ಚಿಂತೆಯಲ್ಲಿರುತ್ತಾರೆ. ಈ ಘಟ್ಟದಲ್ಲಿ ಸರಿಯಾದ ಪಾಲನೆ ಹಾಗೂ ಪೋಷಣೆ ದೊರೆತಾಗ ಮಾತ್ರ ತಾಯಿ ಮತ್ತು ಮಗು ಆರೋಗ್ಯದಿಂದಿರಲು ಸಾಧ್ಯ. ಇಂದು ನಗರಗಳಲ್ಲಿಯೂ ಬಾಣಂತಿಯರ ಸೇವೆ ಹಾಗೂ ಪಾಲನೆ ಮಾಡಲು ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಇವುಗಳು ಸೂಲಗಿತ್ತಿ ಮಾಡುತ್ತಿದ್ದ ಸೇವೆಯನ್ನು ಮಾಡುತ್ತಿವೆ. ಅಂಥ ಸಂಸ್ಥೆಗಳಲ್ಲಿ ಪರಿಪಾಲನಾ ಸಂಸ್ಥೆಯೂ ಒಂದು. ಪರಿಪಾಲನಾ ಸಂಸ್ಥೆ ಹೆಸರೇ ಸೂಚಿಸುವಂತೆ ಬಾಣಂತಿಯ ಮನೆಗೆ ತೆರಳಿ ತಾಯಿ ಹಾಗೂ ಮಗುವಿನ ಪಾಲನೆ ಹಾಗೂ ಪೋಷಣೆಯ ಜವಾಬ್ದಾರಿ ಹೊರುತ್ತದೆ
ಈ ಪರಿಪಾಲನಾ ಸಂಸ್ಥೆಯ ರೂವಾರಿ ಸುಮಲತಾ. ಸುಮಾರು 12 ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸುಮಲತಾ ಅವರಿಗೆ ಜನನಿಯೇ ಮೊದಲ ಗುರು. ಈ ಸಂಸ್ಥೆಯ ರೂವಾರಿ ಸುಮಲತಾ ಅವರಿಗೆ ಅಮ್ಮ ಮಾಡುತ್ತಿದ್ದ ಬಾಣಂತನ ಸೇವೆಯೇ ಸ್ಪೂರ್ತಿಯಂತೆ. ಇದನ್ನೇ ಯಾಕೆ ಮುಂದುವರೆಸಬಾರದು ಎಂದೆನಿಸಿ ಹೆಚ್ಚಿನ ಚಿಕಿತ್ಸಾ ವಿಧಾನಗಳನ್ನು ಕೇರಳದ ಆಯುರ್ವೇದ ಸೆಂಟರ್‌ನಲ್ಲಿ ಅಭ್ಯಸಿಸಿದರು. ನಂತರ ಮನೆಮನೆಗಳಿಗೆ ತೆರಳಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡರು.ಈಗ 4 ಮಂದಿ ಅನುಭವಿ ಮಹಿಳೆಯರು ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಪಾಲನಾ ಸಂಸ್ಥೆಯು ಬಾಣಂತಿಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ಸೇವೆಯನ್ನು ನೀಡುತ್ತದೆ. ಬಾಣಂತಿಯರಿಗೆ ಬೇಕಾಗುವ ಆಯುರ್ವೇದ ತೈಲಗಳನ್ನು ತಯಾರಿಸಿ ಅವರಿಗೆ ಅಂಗಮರ್ಧನ ಮಾಡಲಾಗುವುದು.ತೂಕ ಕಡಿಮೆ ಮಾಡಿಕೊಳ್ಳಲು, ದೇಹದಲ್ಲಿ ಇರುವ ಬೇಡದ ಕೊಬ್ಬನ್ನು ಕರಗಿಸಲು ಹಾಗೂ ಬೆನ್ನು ನೋವಿನ ನಿವಾರಣೆಗೆ ಅಂಗಮರ್ಧನ ಮಾಡಲಾಗುವುದು. ವೈದ್ಯರ ಸಲಹೆ ಮೇರೆಗೆ ಈ ಚಿಕಿತ್ಸೆ ನೀಡಲಾಗುವುದು.ಆಹಾರ ತಜ್ಞರ ಸಲಹೆಯಂತೆ ಬಾಣಂತಿಯರು ತೆಗೆದುಕೊಳ್ಳಬೇಕಾದ ಪೌಷ್ಟಿಕ ಆಹಾರಗಳ ಬಗ್ಗೆ ತಿಳಿಸಿಕೊಡಲಾಗುವುದು. ಬಾಣಂತಿ ಬಯಸಿದರೆ ಮೂರು ತಿಂಗಳ ನಂತರ ಯೋಗ ತರಬೇತುದಾರರ ಸಲಹೆಯನ್ನು ಅನುಸರಿಸಿ ಯೋಗ ತರಬೇತಿಯನ್ನು ನೀಡಲಾಗುವುದು.
Related Articles
Advertisement
ಸೌಮ್ಯಶ್ರೀ ಎನ್.