ಮೈಸೂರು: ಡೋಂಗಿ ಪ್ರಗತಿಪರರು, ಬ್ಲಾಕ್‌ಮೇಲ್ ದಸಂಸ ಮುಖಂಡರನ್ನು ಜೊತೆಗಿಟ್ಟುಕೊಂಡು ಗೊಂದಲ ಸೃಷ್ಟಿಸುತ್ತಿರುವ, ದಲಿತ ವಿರೋಧಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಮನೆಗೆ ಕಳುಹಿಸುವುದೇ ನಮ್ಮ ಗುರಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಡಿಯಷ್ಟು ಡೋಂಗಿ ಸಮಾಜವಾದಿ, ಪ್ರಗತಿಪರರು ಸಿದ್ದರಾಮಯ್ಯನ ಚೇಲಾಗಳಾಗಿ ಬಿಜೆಪಿ ಸಂವಿಧಾನ ಬದಲಾಯಿಸಲು ಹೊರಟಿದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ತನ್ನ ಇಲಾಖೆ ಬಗ್ಗೆ ಗೊತ್ತಿಲ್ಲದೆ, ಸಂವಿಧಾನದ ಬಗ್ಗೆ ಬಾಲಿಶ ಹೇಳಿಕೆ ನೀಡಿ ಸಂಸತ್‌ನಲ್ಲಿ ಕ್ಷಮಾಪಣೆ ಕೇಳಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಬಿಜೆಪಿಯ ನಾಯಕರ್ಯಾರು ಹೇಳಿಲ್ಲ.
ಪ್ರಧಾನಿ ಮೋದಿ ಅವರೇ ಸಂವಿಧಾನವೇ ಶ್ರೇಷ್ಠ ಗ್ರಂಥ ಎಂದ ಮೇಲೆ ಅಲ್ಲಿಗೆ ಅದು ಮುಗಿದ ಅಧ್ಯಾಯ. ನ್ಯಾ.ವೆಂಕಟಾಚಲಯ್ಯ ನೇತೃತ್ವದ ಸಮಿತಿಯೇ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಹೇಳಿರುವಾಗ, ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಪದೇಪದೆ ಸಂವಿಧಾನ ಬದಲಿಸಲು ಬಿಡಲ್ಲ ಎಂದು ಹೇಳಿ ಗೊಂದಲ ಮೂಡಿಸುತ್ತಿರುವುದಲ್ಲದೆ, ಹಿಡಿಯಷ್ಟು ಡೋಂಗಿ ಪ್ರಗತಿಪರರನ್ನೂ ಬಳಸಿಕೊಂಡು ಅಪಪ್ರಚಾರ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯ ಪ್ರಭಾವವಿಲ್ಲ: ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿರುವ ದಸಂಸ ಬಣಗಳೆಷ್ಟು ಎಂದು ಲೇವಡಿ ಮಾಡಿದ ಅವರು, ದಸಂಸ ಮುಖಂಡರಿಗೆ ರಾಜಕೀಯವಾಗಿ ಯಾವುದೇ ಪ್ರಭಾವವಿಲ್ಲ. ಇವರೆಲ್ಲ ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್, ಬ್ಲಾಕ್‌ಮೇಲ್ ಮುಖಂಡರು, ನಂಜನಗೂಡು ಉಪ ಚುನಾವಣೆಯಲ್ಲಿ ಇವರೆಲ್ಲ ಏನು ಮಾಡಿದರು ಎಂಬುದು ಗೊತ್ತಿದೆ ಎಂದು ಕಿಡಿಕಾರಿದ ಪ್ರಸಾದ್, ರಾಷ್ಟ್ರೀಯ ಪಕ್ಷವಾಗಿ ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಹೇಳುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಕಣದಲ್ಲಿದ್ದಾರೆ. ತ್ರಿಕೋನ ಸ್ಪರ್ಧೆ ಇದ್ದು, ಸಿದ್ದರಾಮಯ್ಯ ಸೋಲಿಸುವುದೇ ನಮ್ಮ ಗುರಿ ಎಂದರು.
ನಾಟಿ ಕೋಳಿ ಬಿಟ್ಟು ಹೋದ್ರು: ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ, ಪುನರ್ ಜನ್ಮ ಕೊಟ್ಟ ಕ್ಷೇತ್ರ ಅನ್ನುತ್ತಿದ್ದವರು, ಹೈಕಮಾಂಡ್ ಕೊಡುವುದಿಲ್ಲ ಎಂದರೂ ಅತ್ತು ಕರೆದು ಟಿಕೆಟ್ ಪಡೆದು ಬಾದಾಮಿ ಕ್ಷೇತ್ರಕ್ಕೆ ಓಡಿ ಹೋಗಿದ್ದೇಕೆ? ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹೆಚ್ಚು ಪ್ರಚಾರಕ್ಕೆ ಬರುವುದಿಲ್ಲ ಎನ್ನುತ್ತಿದ್ದವರು ಎಷ್ಟು ಬಾರಿ ಬಂದಿದ್ದೀರಿ? ನೀವು ರೋಡ್ ಶೋ ಗೆ ಹೋದಲ್ಲೆಲ್ಲಾ ಜನ ಟಾಟಾ ಮಾಡುತ್ತಿದ್ದಾರೆ.
ಇದರಿಂದ ಹತಾಶರಾಗಿದ್ದೀರಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರಾಗಿ ಮುದ್ದೆ-ನಾಟಿ ಕೋಳಿ ತಿಂದು ಸಾಕಾಗಿ, ಡ್ರೆçಫೂ›ಟ್ಸ್ ತಿನ್ನಲು ಬಾದಾಮಿ ಕ್ಷೇತ್ರಕ್ಕೆ ಹೋಗಿದ್ದೀರಾ ಎಂದು ಲೇವಡಿ ಮಾಡಿದರು. ಸೋನಿಯಾಗಾಂಧಿ ಎಐಸಿಸಿ ಅಧ್ಯಕ್ಷೆಯಾಗಿದ್ದ 19 ವರ್ಷಗಳಲ್ಲಿ ಕಾಂಗ್ರೆಸ್ 20 ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದೆ. ಈಗ ಅವರ ಮಗ ರಾಹುಲ್ ಗಾಂಧಿ ಅವಧಿಯಲ್ಲಿ ಕರ್ನಾಟಕವನ್ನೂ ಕಳೆದುಕೊಳ್ಳಲಿದ್ದಾರೆ.
ಉತ್ತರಪ್ರದೇಶದಲ್ಲೇ ರಾಹುಲ್ ಗಾಂಧಿ ಭಾಷಣಕ್ಕೆ 200-300 ಜನ ಸೇರವುದಿಲ್ಲ. ಅಂಥವರನ್ನು ಇಲ್ಲಿ ಕರೆತಂದು ಭಾಷಣ ಮಾಡಿಸುತ್ತಿರುವುದು ನೋಡಿದರೆ, 130 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ದುಸ್ಥಿತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಉಸಿರಾಡಲು ಸಿದ್ದರಾಮಯ್ಯರನ್ನು ಮುಂದೆ ಬಿಟ್ಟು ಆಟ ಆಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ವಿರೋಧಿ ಅಲೆ ಇದ್ದು, ಇವರ ಆಟ ಇಲ್ಲಿ ನಡೆಯಲ್ಲ ಎಂದರು.