Advertisement

ಆತಂಕ ಬೇಡ-ಟ್ಯಾಂಕರ್‌ ಮೂಲಕ ನೀರು ಪೂರೈಸುವ ಭರವಸೆ

04:34 PM May 26, 2023 | Team Udayavani |

ಉಡುಪಿ: ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಸಂಬಂಧಿಸಿ ಉದಯವಾಣಿ ಬುಧವಾರ ಆಯೋಜಿಸಿದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾಕಷ್ಟು ಕರೆಗಳು ನಗರ, ಗ್ರಾಮಾಂತರ ಭಾಗದಿಂದ ಬಂದಿದ್ದು, ನಾಗರಿಕರು ನೀರಿನ ಸಮಸ್ಯೆ ಅಹವಾಲು ಹೇಳಿಕೊಂಡರು. ನಗರಸಭೆ ಪೌರಾಯುಕ್ತ ಆರ್‌. ಪಿ. ನಾಯ್ಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಯಶವಂತ ಪ್ರಭು ಅವರು ಸಾರ್ವಜನಿಕ ಕರೆಗಳಿಗೆ ಉತ್ತರಿಸಿದರು.

Advertisement

ಮಣಿಪಾಲ, ಉಡುಪಿ ನಗರ ಪ್ರದೇಶ, ಅಂಬಲಪಾಡಿ ಗ್ರಾಮಾಂತರ, ಸಂತೆಕಟ್ಟೆ ಭಾಗದಿಂದ ಹೆಚ್ಚಿನ ಕರೆಗಳು ಬಂದಿದ್ದು, ಕೆಲವು ಕಡೆಗಳಲ್ಲಿ ನಾಲ್ಕೈದು ದಿನ ನೀರಿಲ್ಲ, ಕೆಲವೆಡೆ ಒಂದು ವಾರ, 10-15 ದಿನಗಳಿಂದ ನೀರಿಲ್ಲ ಎಂದು ಅಳಲು ತೋಡಿಕೊಂಡರು. ವಸತಿ ಸಮುಚ್ಚಯಗಳಿಂದ ಬಹುತೇಕ ಕರೆಗಳು ಬಂದಿದ್ದು, ಕುಡಿಯುವ ನೀರಿಲ್ಲದೆ ಹಲವು ದಿನಗಳಿಂದ ಸಂಕಷ್ಟ ಪಡುವಂತಾಗಿದೆ.

ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ನಾಗರಿಕರು ವಿನಂತಿಸಿದರು. ರೇಷನಿಂಗ್‌ ವ್ಯವಸ್ಥೆಯಡಿ ಮೂರು ದಿನಕ್ಕೊಮ್ಮೆ ಬಿಡುವ ನೀರು ಸರಿಯಾಗಿ ಬರುತ್ತಿಲ್ಲ. ಸ್ವಂತ ಮೂಲಗಳಲ್ಲಿ ನೀರು ಖಾಲಿಯಾಗಿದ್ದು, ನಗರಸಭೆ ನೀರು ವ್ಯವಸ್ಥಿತವಾಗಿ ಪೂರೈಕೆಯಾಗಬೇಕು ಎಂದು ಬೇಡಿಕೆ ಇಟ್ಟರು. ಕೆಲವು ವಸತಿ ಸಮುಚ್ಚಯಗಳಿಗೆ ಒಂದು ಬಾರಿ ಮಾತ್ರ ನೀರಿನ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲಾಗಿದ್ದು, ಅನಂತರ ನೀರಿನ ಪೂರೈಕೆಯಾಗಿಲ್ಲ ಎಂದು ದೂರಿದರು. ಆದ್ಯತೆ ಮೇರೆಗೆ ಮನೆಗಳಿಗೆ ಮೊದಲು ನೀರಿನ ವ್ಯವಸ್ಥೆ ಮಾಡಿಕೊಡುತ್ತಿದ್ದೇವೆ. ಯಾವ ಪ್ರದೇಶಗಳಲ್ಲಿ ನೀರು ಸಿಗುತ್ತಿಲ್ಲಎಂಬುದನ್ನು ತಿಳಿದು ಆ ಪ್ರದೇಶಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.

ಫೋನ್‌ ಇನ್‌ನಲ್ಲಿ ನೀರಿನ ಸಮಸ್ಯೆ ಬಗ್ಗೆ ಹೇಳಿಕೊಂಡ ಸಾರ್ವಜನಿಕರ ಮೊಬೈಲ್‌ ನಂಬರನ್ನು ಪಡೆದ ಪೌರಾಯುಕ್ತರು ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ನೀರಿನ ಸಮಸ್ಯೆ ಇದ್ದಲ್ಲಿ
ಸಂಪರ್ಕಿಸಿ
ನಗರದಲ್ಲಿ ನೀರಿನ ಸಮಸ್ಯೆ ಇದ್ದಲ್ಲಿ 0820-2520306, 0820-2529336ಗೆ ಮತ್ತು ಪೌರಾಯುಕ್ತರ ಮೊಬೈಲ್‌ 9448120430 ಅವರನ್ನು ಸಂಪರ್ಕಿಸಬಹುದು. ಕೂಡಲೇ ಆದ್ಯತೆ ಮೇರೆಗೆ ಟ್ಯಾಂಕರ್‌ ಮೂಲಕ ನೀರನ್ನು ಪೂರೈಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು. ಸರಕಾರದ ಮಾರ್ಗಸೂಚಿ ಪ್ರಕಾರ ಒಬ್ಬ ವ್ಯಕ್ತಿಗೆ ದಿನಕ್ಕೆ 135 ಲೀ. ಬಳಕೆ ಮಾತ್ರ. ನೀರು ಇದ್ದ ಸಮಯದಲ್ಲಿ ಸಾಕಷ್ಟು ನೀರು ಪೋಲು ಮಾಡಲಾಗಿದೆ. ಈ ಸಂದಿಗ್ಧ ಸ್ಥಿತಿಯಲ್ಲಿಯೂ ನೀರನ್ನು ಯಥೇತ್ಛವಾಗಿ ಬಳಸದೆ ಮಿತವಾಗಿ ಬಳಸುವಂತೆ ಪೌರಾಯುಕ್ತರು ಮನವಿ ಮಾಡಿದರು.

Advertisement

4.28 ಲಕ್ಷ ಲೀಟರ್‌ ನೀರು ಪೂರೈಕೆ
ಮೇ 18ರಿಂದ ಇಲ್ಲಿಯವರೆಗೆ 76 ಟ್ರಿಪ್‌ ನೀರನ್ನು ಟ್ಯಾಂಕರ್‌ ಮೂಲಕ ಕೊಡಲಾಗಿದ್ದು, ಒಟ್ಟು 4.28 ಲಕ್ಷ ಲೀ. ನೀರನ್ನು ವಿತರಿಸಲಾಗಿದೆ.

ಜಿಲ್ಲಾಸ್ಪತ್ರೆಗೆ ನೀರು ಪೂರೈಕೆ
ಜಿಲ್ಲಾಸ್ಪತ್ರೆಗೆ ನಿತ್ಯ ಒಂದು ಟ್ಯಾಂಕರ್‌ ನೀರಿನ ವ್ಯವಸ್ಥೆ ಮಾಡ ಲಾಗಿದ್ದು, ಇದೀಗ ಪರಿಹಾರವಾಗಿ ಡಿಸಿ ವಸತಿ ನಿಲಯ ಸಮೀಪದ ನಗರಸಭೆಯ ಹಳೆಯ ಬಾವಿಯನ್ನು ಸರಿಪಡಿಸಿ ಅಲ್ಲಿಂದ ನೇರವಾಗಿ ಆಸ್ಪತ್ರೆಗೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ನೀರಿನ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುತ್ತಿದೆ.

ಮುಂಜಾಗ್ರತೆಯಾಗಿ 4 ಹೊಸ ಬೋರ್‌ವೆಲ್‌
ನಗರಸಭೆ ಸ್ವಂತ ನೀರಿನ ಮೂಲವಾಗಿ 22 ಬಾವಿಗಳನ್ನು ಹೊಂದಿದ್ದು, 16 ಬೋರ್‌ವೆಲ್‌ಗ‌ಳಿವೆ. ಇದರಲ್ಲಿ ಕೆಲವು ಕಡೆಗಳಲ್ಲಿ ಮಾತ್ರ ನೀರಿನ ಪ್ರಮಾಣ ಲಭ್ಯವಿದೆ. ಪ್ರಸ್ತುತ ಹಿರಿಯಡಕ ಸ್ವರ್ಣ ನದಿ ಬಜೆ ಡ್ಯಾಂನಲ್ಲಿ 1 ಮೀ. ನೀರು ಮಾತ್ರ ಲಭ್ಯವಿದ್ದು, ಮುಂಜಾಗ್ರತ ಕ್ರಮವಾಗಿ 4 ಬೋರ್‌ವೆಲ್‌ಗ‌ಳನ್ನು ಹೊಸದಾಗಿ ರೂಪಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಆರಂಭದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಟೆಂಡರ್‌ ಆಹ್ವಾನ ಮಾಡಿದಲ್ಲಿ ಟ್ಯಾಂಕರ್‌ ಮಾಲಕರು ಆಸಕ್ತಿ ತೋರಿರಲಿಲ್ಲ. ಈಗಾಗಿ ಟ್ಯಾಂಕರ್‌ ಮೂಲಕ ನೀರು ವಿತರಿಸಲು ತೊಡಕಾಯಿತು. ಡಿಸಿ ಅವರು ಆದೇಶ ಮಾಡಿದ್ದು, ಆರ್‌ಟಿಒ ಮೂಲಕ ಟ್ಯಾಂಕರ್‌ ಮಾಲಕರಿಗೆ ನೊಟೀಸ್‌ ನೀಡಿ ನಗರಸಭೆ ವ್ಯಾಪ್ತಿ ನೀರು ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ 8 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚುವರಿ ಟ್ಯಾಂಕರ್‌ಗಳು ಲಭ್ಯವಾಗಲಿದೆ.

ಕರೆ ಮಾಡಿದವರು
ಮಣಿಪಾಲದಿಂದ ಚಿತ್ರಾ, ಉಮೇಶ್‌, ಬಾಲರಾಜ್‌, ಉಷಾ ರಾವ್‌, ರಮೇಶ್‌ ಆಚಾರ್ಯ ಉಡುಪಿ, ಲ್ಯಾನ್ಸಿ ಡಿ’ಸೋಜಾ ಅಂಬಲಪಾಡಿ, ಪ್ರತಾಪ್‌ ಕೋರ್ಟ್‌ ರಸ್ತೆ, ಜಾನ್‌ ಸಂತೆಕಟ್ಟೆ, ರವೀಂದ್ರ ಹೆರ್ಗಾ, ಪ್ರಕಾಶ್‌ ಪೈ ಅಂಬಾಗಿಲು, ಸರ್ವೋತ್ತಮ ಹೊಳ್ಳ ಬನ್ನಂಜೆ, ಭೋಜ ನಾಯ್ಕ ನಿಟ್ಟೂರು, ನಿರಂಜನ್‌ ನಿಟ್ಟೂರು, ಅರವಿಂದ್‌ ಶಿರಿಬೀಡು, ಶಹನಾಝ್ ಅಂಬಾಗಿಲು, ಜ್ಯೋತಿ ಅಂಬಲಪಾಡಿ, ಅನಂತ ಕಾಮತ್‌ ಈಶ್ವರ ನಗರ, ಬಾಲಕೃಷ್ಣ ಮೂಡುಬೆಟ್ಟು, ವಾಸುದೇವ ರಾವ್‌ ವಿದ್ಯಾರತ್ನ ನಗರ, ರಾಮಚಂದ್ರ ಆಚಾರ್ಯ ಉಡುಪಿ, ಶ್ರದ್ಧಾ ಭಟ್‌ ಅಂಬಲಪಾಡಿ, ಯಶೋಧಾ ಅಜ್ಜರಕಾಡು, ಪಲ್ಲವಿ ದೊಡ್ಡಣಗುಡ್ಡೆ, ಅಶೋಕ್‌ ಪೈ ಉಡುಪಿ, ಜಗನ್ನಾಥ್‌ ಶೇರಿಗಾರ್‌ ವಿ. ಪಿ. ನಗರ ಸಹಿತ ಹಲವಾರು ಮಂದಿ ಕರೆ ಮಾಡಿ ನೀರಿನ ಸಮಸ್ಯೆ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next