ಹೊಸದೆಲ್ಲಿ : ‘ಬಿಟ್ ಕಾಯಿನ್ ಹಗರಣದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಿ ಅವರು ಬಿಟ್ ಕಾಯಿನ್ ಬಗ್ಗೆ ಪ್ರಸ್ತಾವವನ್ನೇ ಮಾಡಲಿಲ್ಲ, ನಾನೇ ಏನಾದರೂ ಹೇಳಲು ಹೋದಾಗ, ಆ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ ಎಂದು ಸಲಹೆ ನೀಡಿದರು ಎಂದು ತಿಳಿಸಿದರು.
‘ನಮ್ಮ ಭೇಟಿ ಒಳ್ಳೆಯ ರೀತಿಯಲ್ಲಿ ಸೌಹಾರ್ದತೆಯಿಂದ ನಡೆಯಿತು. ಆಡಳಿತ ಕುರಿತು ಆಸಕ್ತಿಯಿಂದ ಚರ್ಚೆ ನಡೆಸಿದ್ದೇವೆ. ನಮ್ಮ ಸರಕಾರದ ನೂರು ದಿನದ ತೀರ್ಮಾನ, ಸುಧಾರಣೆಗೆ ಪ್ರಶಂಸೆ ವ್ಯಕ್ತಪಡಿಸಿದರು. ವಿಶೇಷವಾಗಿ ರೈತರ ಮಕ್ಕಳಿಗೆ ವಿದ್ಯಾದಾನ ಕಾರ್ಯಕ್ರಮ ಯಶಸ್ವಿ ಯಾಗಬೇಕು ಬೇರೆ ರಾಜ್ಯಗಳಲ್ಲೂ ಈ ಯೋಜನೆ ಜಾರಿ ಮಾಡಬೇಕು. ಇದೊಂದು ಕ್ರಾಂತಿಕಾರಿ ಹೆಜ್ಜೆ’ ಎಂದು ಪ್ರಧಾನಿ ಹೇಳಿದರು ಎಂದು ತಿಳಿಸಿದರು.
‘ಡಿಸೆಂಬರ್ ತಿಂಗಳಲ್ಲಿ ರಾಜ್ಯದಲ್ಲಿ ನಡೆಯುವ ಎರಡು ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ನಾನು ನಾಲ್ಕು ಕಾರ್ಯಕ್ರಮಕ್ಕೆ ಕರೆದಿದ್ದೆ, ಅವರು ಎರಡು ದಿನ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ’ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜೊತೆ ಚುನಾವಣೆ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು. ವಿಶೇಷವಾಗಿ ಮುಂಬರಲಿರುವ ವಿಧಾನ ಪರಿಷತ್ ಚುನಾವಣೆಯ ಕುರಿತು ಚರ್ಚೆ ನಡೆಸಿದೆವು. ಒತ್ತಡದ ನಡುವೆಯೂ ರಾಜ್ಯಕ್ಕೆ ಭೇಟಿ ನೀಡಲು ಸಮಯ ಮೀಸಲಿಡುವುದಾಗಿ ನಡ್ಡಾ ಅವರು ಹೇಳಿರುವುದಾಗಿ ಸಿಎಂ ತಿಳಿಸಿದರು.
‘ಅಮಿತ್ ಶಾ ಭೇಟಿಯಾಗಿ ಕೆಲ ಹೊತ್ತು ಮಾತುಕತೆ ನಡೆಸಿದೆ, ಬಿಟ್ ಕಾಯಿನ್ ವಿಚಾರದಲ್ಲಿ ಅವರಿಗೆ ಎಲ್ಲಾ ಮಾಹಿತಿ ಇದೆ, ಕೇಂದ್ರ ತನಿಖಾ ಸಂಸ್ಥೆಗಳು ಅವರ ವ್ಯಾಪ್ತಿಯಲ್ಲಿ ಬರುವುದರಿಂದ ನಮಗಿಂತ ಹೆಚ್ಚಿನ ಮಾಹಿತಿ ಅವರಿಗಿದೆ’ ಎಂದು ಸಿಎಂ ಹೇಳಿದರು.