Advertisement

ಹತ್ತಿಕುಣಿ ಡ್ಯಾಂ ನೀರು ಪೋಲು ಮಾಡಬೇಡಿ

05:37 PM Aug 24, 2022 | Team Udayavani |

ಯಾದಗಿರಿ: ಹತ್ತಿಕುಣಿ ಹಾಗೂ ಸೌದಾಗರ್‌ ಜಲಾಶಯಗಳು ಭರ್ತಿಯಾಗಿದ್ದು, ರೈತರು ವಾಸ್ತವ ಪರಿಸ್ಥಿತಿ ಅರಿತು, ಜಲಾಶಯಗಳ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ ತಮ್ಮ ಬೆಳೆಗಳಿಗೆ ಉಪಯೋಗಿಸಿಕೊಳ್ಳಬೇಕು ಎಂದು ಗುರುಮಿಠಕಲ್‌ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ತಾಲೂಕಿನ ಹತ್ತಿಕುಣಿ ಜಲಾಶಯ ಆವರಣದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲ್ಲಿನ ಸಿಬ್ಬಂದಿ ಕೊರತೆ ಜೊತೆಗೆ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಕಾಲುವೆಗಳ ಅಭಿವೃದ್ಧಿಗಾಗಿ ಸೂಕ್ತ ಅನುದಾನ ಸಿಗುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಚೇತನ ಕಲಾಸ್ಕರ್‌ ಮಾತನಾಡಿ, ಜಲಾಶಯ ವ್ಯಾಪ್ತಿಯ ಮುಖ್ಯಕಾಲುವೆ 7ರವರೆಗೆ ಸುಮಾರು 500 ಎಕರೆ ಮುಂಗಾರು ಭತ್ತದ ಬೆಳೆಗೆ ನೀರು ಹರಿಸಲು ಸಾಧ್ಯ ಎಂದು ತಿಳಿಸಿದರು.

ಶಾಸಕ ಕಂದಕೂರ ಜಲಾಶಯಗಳ ಕಾಲುವೆಯಲ್ಲಿ ತುಂಬಿದ ಹೂಳು ತೆಗೆಯಲು ಇಲಾಖೆಯಲ್ಲಿ ಸೂಕ್ತ ಅನುದಾನ ಕೊರತೆ ಇದೆ. ಕಾರಣ ಈಗಾಗಲೇ ಹತ್ತಿಕುಣಿ ಗ್ರಾಪಂ ಆಡಳಿತ ಮಂಡಳಿಯವರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕಾಲುವೆ ಹೂಳು ತೆಗೆದಿದ್ದಾರೆ. ಅವರಂತೆ ನೀವೂ ಹೊನೆಗೇರಾ ಗ್ರಾಪಂನವರು ಸಭೆ ಕರೆದು ಕಾಲುವೆ 7ರಿಂದ 10ರವರೆಗೆ ಹೂಳು ತೆಗೆದು ಸ್ವಚ್ಛತೆ ಮಾಡಬೇಕು. ಅಂದಾಗ ಮಾತ್ರ ನಿಮ್ಮ ಭತ್ತದ ಬೆಳೆಗೆ ನೀರು ತಲುಪಲು ಸಾಧ್ಯ ಎಂದರು.

ಹತ್ತಿಕುಣಿ ನೀರು ಬಳಕೆದಾರ ಸಹಕಾರ ಸಂಘದ ಅಧ್ಯಕ್ಷ ಶರಣಪ್ಪಗೌಡ ಮಾಲಿಪಾಟೀಲ್‌ ಮಾತನಾಡಿ, ನಮಗೆ ಮುಖ್ಯವಾಗಿ ನೀರು ನಿರ್ವಹಣೆ ಮಾಡುವ ಸಿಬ್ಬಂದಿ ಕೊರತೆ ಇದೆ. ಕಾರಣ ಇಲಾಖೆಯವರು ಕೆಲ ತಿಂಗಳ ಕಾಲ ಹೊರಗುತ್ತಿಗೆ ಆಧಾರದ ಮೇಲೆ 5-6 ನೌಕರರನ್ನು ನೇಮಕ ಮಾಡಿಕೊಂಡು ಕೆಲಸ ಮಾಡಿದರೆ ಮಾತ್ರ ಎಲ್ಲಾ ರೈತರಿಗೆ ನೀರು ತಲುಪಬಹುದು ಎಂದು ಹೇಳಿದರು.

Advertisement

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಮಾತನಾಡಿ, ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಮುಂದಿನ ಕಂತನ್ನು ಪಡೆಯಲು ಆ. 31ರೊಳಗಾಗಿ ಇ.ಕೆ.ವೈ.ಸಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು. ಸಭೆಯಲ್ಲಿ ಕೊನೆಗೆ ರೈತರೊಂದಿಗೆ ಅಧಿಕಾರಿಗಳು, ಶಾಸಕರು ಸುದೀರ್ಘ‌ ಚರ್ಚೆ ನಡೆಸಿ ಜಲಾಶಯ ಮುಖ್ಯಕಾಲುವೆ 1ರಿಂದ 10ರವರೆಗೆ ಭತ್ತದ ಬೆಳೆಗೆ ಸೆ. 1ರಿಂದ ನೀರು ಕಾಲುವೆಗೆ ಬಿಡಲು ನಿರ್ಧಾರ ಕೈಗೊಳ್ಳಲಾಯಿತು.

ಅಮೀನರೆಡ್ಡಿ ಬಿಳ್ಳಾರ, ಸುಭಾಶ್ಚಂದ್ರ ಕಟಕಟಿ ಹೊನಗೇರಾ, ಹನುಮಂತ ಬಂದಳ್ಳಿ, ರವಿ ಪಾಟೀಲ, ಶರಣಪ್ಪ ದುಗ್ಗಾಣಿ, ಭೋಜಣ್ಣಗೌಡ ಯಡ್ಡಳ್ಳಿ, ಸಿದ್ಧಪ್ಪ ಹೊರುಂಚಾ, ಸೋಮನಗೌಡ ಬೆಳಗೇರಾ, ದೇವಿಂದ್ರಪ್ಪ ಯಡ್ಡಳ್ಳಿ, ಗ್ರಾಮೀಣ ಪೊಲೀಸ್‌ ಠಾಣೆ ಪಿಎಸ್‌ಐ ರಾಜಕುಮಾರ ಜಾಮಗೊಂಡ, ಮಧ್ಯಮ ಮತ್ತು ಭಾರಿ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೇತನ ಕಲಾಸ್ಕರ್‌, ಎಂಜಿನಿಯರ್‌ಗಳಾದ ಪ್ರಭಾಕರ್‌, ಕಾವೇರಿ ಇತರರಿದ್ದರು.

ಈ ವರ್ಷ ಜಲಾಶಯ ಬೇಗನೆ ತುಂಬಿದೆ. ಇನ್ನೂ ಮಳೆಗಾಲವಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರಲಿದೆ. ಅಧಿಕಾರಿಗಳೇ ನೀವು ಜಲಾಶಯ ತುಂಬಿದಾಗ ಮಾತ್ರ ಇಲ್ಲಿಗೆ ಬರುತ್ತೀರಿ ಎಂದು ಪ್ರಶ್ನಿಸಿ, ಅತಿವೃಷ್ಟಿಯಿಂದ ರೈತರ ಹೆಸರು, ಹತ್ತಿ, ಇನ್ನಿತರ ಬೆಳೆಗಳು ನಾಶವಾಗಿವೆ. ಕೊನೆಗೆ ನೀವು ಮುಖ್ಯಕಾಲುವೆ 1ರಿಂದ 10ರವರೆಗೆ ನೀರು ಬಿಡಬೇಕು. ಹಾಗಾದ್ರೆ ರೈತರು ಭತ್ತವನ್ನು ಬೆಳೆಬಹುದು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹತ್ತಿಕುಣಿ ಮತ್ತು ಸೌದಾಗರ್‌ ಡ್ಯಾಂನಿಂದ ನೀರು ಹರಿಸಲು ಕ್ರಮಕೈಗೊಳ್ಳಬೇಕು. ಸಿಬ್ಬಂದಿ ಕೊರತೆ ನೀಗಿಸಲು ಕೆಲ ತಿಂಗಳುಗಳ ಕಾಲ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಿಸಿಕೊಳ್ಳಿ. ಸರ್ಕಾರದಿಂದ ಅನುಮತಿ ಸಿಗದಿದ್ದರೆ ಅವಶ್ಯಕತೆ ಬಿದ್ದರೆ ನಾನು ಆ ನೌಕರಿಗೆ ನೀಡುವ ಸಂಬಳ ನೀಡುತ್ತೇನೆ.
ನಾಗನಗೌಡ ಕಂದಕೂರು,
ಗುರಮಠಕಲ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next