Advertisement

ಉದ್ಯೋಗಕ್ಕೆ ಕಾಯಬೇಡಿ, ಉದ್ಯೋಗದಾತರಾಗಿ

08:47 PM Jan 12, 2020 | Lakshmi GovindaRaj |

ಹಾಸನ: ಯುವ ಜನರು ಶಿಕ್ಷಣ ಪಡೆದು ಕೆಲಸ ಹುಡುಕುವುದಕ್ಕೆ ಸೀಮಿತವಾಗದೇ ಸ್ವಯಂ ಉದ್ಯಮಿಗಳಾಗಿ ಸಾವಿರಾರು ಮಂದಿಗೆ ಕೆಲಸ ನೀಡುವ ಉದ್ಯೋಗದಾತರಾಗಬೇಕು ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸ್ವಾಮಿವೇಕಾನಂದರ ಜಯಂತಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ಹಾಗೂ ಯುವ ಸಬಲೀಕಂದ್ರ ಉದ್ಘಾಟಿಸಿ ಮಾತನಾಡಿದರು. ಯುವಜನರು ಸ್ವ ಉದ್ಯೋಗಿಗಳಾಗಬೇಕು ಎಂಬ ಮಹದುದ್ದೇಶದಿಂದಲೇ ಇಂದು ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ಕೇಂದ್ರ ಸ್ಥಾಪನೆಯಾಗುತ್ತಿದ್ದು, ಅದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ: ಪ್ರತಿಯೊಬ್ಬರೂ ಜೀವ ಸಂಕಲುವನ್ನು ಪ್ರೀತಿಸಬೇಕು ಮತ್ತು ಗೌರವಿಸಬೇಕು. ವ್ಯಕ್ತಿ ತನಗಿರುವ ಅವಕಾಶ ಮತ್ತು ಮಿತಿಗಳ ಒಳಗೆ ತನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಅದೇ ದೇಶಕ್ಕೆ ಸಲ್ಲಿಸುವ ನಿಜವಾದ ಸೇವೆ ಎಂದ ಅವರು ವಿವೇಕಾನಂದರ ಜೀವನ ಸಂದೇಶವೆಲ್ಲಾ ರಾಷ್ಟ್ರ ಪ್ರೇಮ, ಹಸಿದವನಿಗೆ ಅನ್ನಗಳಿಸುವ ದಾರಿ ತೋರಿಸುವುದು, ಗುರಿ ಮುಟ್ಟುವವರೆಗೆ ಛಲಬಿಡದೇಪ್ರಯತ್ನಿಸುವುದು, ಯುವ ಜನತೆ ರಾಷ್ಟ್ರೋದ್ಧಾರದ ಸಂಕೇತ ಎಂಬ ಉದ್ಧಾತ್ತ ಚಿಂತನೆಗಳನ್ನು ವಿವೇಕಾನಂದರು ಕೊಟ್ಟಿದ್ದಾರೆ. ಅವರ ಮಾರ್ಗದರ್ಶನವನ್ನು ಯುವ ಜನರು ಪಾಲಿಸಬೇಕು ಎಂದರು.

ಆತ್ಮವಿಶ್ವಾಸ ಅಗತ್ಯ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್‌ ಮಾತನಾಡಿ, ಯಾವುದೇ ವಿಚಾರವಿರಲಿ, ಕೆಲಸವಿರಲಿ ಆತ್ಮಶ್ವಾಸದಲ್ಲಿ ಮುಂದೆ ಸಾಗಿದರೇ ಯಶಸ್ಸು ಖಂಡಿತ ಸಿಗುತ್ತದೆ. ಜೀವನದಲ್ಲಿ ಸ್ವಾಭಿಮಾನಿಗಳಾಗಿ ಬದುಕುಬೇಕು ಎಂದರೇ ಯಾವ ವಿಚಾರದಲ್ಲೂ ನಕಾರಾತ್ಮಾಕವಾಗಿ ಯೋಚನೆ ಮಾಡಬಾರದು. ಸಕಾರಾತ್ಮಕವಾಗಿ ಮುಂದೆ ಸಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಬರುವ ಎಲ್ಲ ಕಷ್ಟವನ್ನು ಧೈರ್ಯವಾಗಿ ನಿಭಾಯಿಸಬೇಕು ಎಂದು ಯುವ ಜನರಿಗೆ ಕಿವಿಮಾತು ಹೇಳಿದರು.

ಸ್ವಾಮಿ ವಿವೇಕಾನಂದರ ಜೀವನದ ಒಂದೊಂದು ಘಟನೆಗಳೂ ಯುವ ಜನರಿಗೆ ಮಾರ್ಗದರ್ಶಕವಾಗಿವೆ. ಆವುಗಳನ್ನು ಜೀವನದ ಆದರ್ಶವಾಗಿ ಸ್ವೀಕರಿಸಬೇಕು. ಚಿಂತಿಸುತ್ತಾ ಖನ್ನರಾಗದೇ ಸತತ ಪರಿಶ್ರಮದಿಂದ ಮುನ್ನುಗ್ಗಿ ಯಶಸ್ಸಿನ ಬೆನ್ನೇರಬೇಕೆಂದು ಎಂದು ಸಲಹೆ ನೀಡಿದರು. ಸ್ವಾಮಿ ವೇಕಾನಂದರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕಾಲೇಜಿನ ಉಪನ್ಯಾಸಕಿ ಶ್ರೀವಿದ್ಯಾ, ಯುವಕರು ಎಚ್ಚೆತ್ತುಕೊಂಡು ದೈಹಿಕವಾಗಿ, ಮಾನಸಿಕವಾಗಿ, ಶೈಕ್ಷಣಿಕವಾಗಿ, ನೈತಿಕವಾಗಿ ಆರೋಗ್ಯವಂತರಾಗಬೇಕು ಜೊತೆಗೆ ಗುರಿ ತಲುಪುವ ಹಂಬಲ ಸದಾಶಯಯೊಂದಿಗೆ ಕರ್ತವ್ಯನಿರತರಾಗಬೇಕಿದೆ ಎಂದು ಆಶಿಸಿದರು.

ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಮತ್ತು ಕಾರ್ಯಕ್ರಮದಲ್ಲಿ ಹಾಜರಿದ್ದ ಗಣ್ಯರು ಲ್ಯಾಪ್‌ಟಾಪ್‌ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಸಿ.ರಾಜಪ್ಪ, ತಹಶಿಲ್ದಾರ್‌ ಶಿವಶಂಕರಪ್ಪ, ಡಿವೈಎಸ್ಪಿ ಪುಟ್ಟಸ್ವಾಮಿಗೌಡ, ನೆಹರು ಯುವ ಕೇಂದ್ರದ ಅಧಿಕಾರಿ ಅನಂತಪ್ಪ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್‌.ಎಂ. ಶಿವಣ್ಣ, ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

ಯುವಕರೇ ದೇಶದ ಸಂಪತ್ತು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್‌ ಮಾತನಾಡಿ, ಭಾರತದಲ್ಲಿರುವ ಒಟ್ಟು ಜನ ಸಂಖ್ಯೆಯಲ್ಲಿ ಶೇ. 65ರಷ್ಟು ಯುವ ಜನರಿದ್ದಾರೆ. 35 ವರ್ಷದೊಳಗಿನ ಯುವ ಜನರು ದೇಶದ ಸಂಪತ್ತು. ಸ್ವಾಮಿ ವಿವೇಕಾನಂದರು ದೇಶದ ಭವಿಷ್ಯ ಯುವ ಜನರ ಕೈಯಲ್ಲಿದೆ ಎಂದು ನಂಬಿಕೆ ಇಟ್ಟಿದ್ದರು. ಯುವ ಜನರು ಅವಕಾಶಗಳಿಗೆ ಕಾಯ್ದು ಸಮಯ ವ್ಯರ್ಥ ಮಾಡದೇ ಅವಕಾಶ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬೌದ್ಧಿಕ ಸಂಪನ್ಮೂಲ ರೂಢಿಸಿಕೊಳ್ಳಬೇಕು ಎಂದರು.

ಸೋಮಾರಿತನ, ಅಹಂಕಾರ ಬಿಡಿ: ಸ್ವಾಮಿ ವೇಕಾನಂದರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕಾಲೇಜಿನ ಉಪನ್ಯಾಸಕಿ ಶ್ರೀವಿದ್ಯಾ ಅವರು, ಯುವ ಜನತೆ ಸೋಮಾರಿತನ, ಅಹಂಕಾರವನ್ನು ತೊಲಗಿಸಿ ದೇಶ ನನ್ನದು, ದೇಶದಲ್ಲಿರುವವರೆಲ್ಲ ನನ್ನವರೆಂಬ ಭಾವದಲ್ಲಿ ಬದುಕಬೇಕು. ಅದು ಸುಸಂಸ್ಕೃತವಾದ ಶಿಕ್ಷಣದಿಂದ ಮಾತ್ರವೇ ಸಾಧ್ಯವೆಂದು ವಿವೇಕಾನಂದರು ನಂಬಿಕೆ ಇರಿಸಿದ್ದರು. ಆದರೆ ಇಂದಿನ ಯುವ ಜನರು ಮೊಬೈಲ್‌ ಗೀಳಿಗೆ ಬಿದ್ದು ಮಾನಸಿಕವಾಗಿ, ದೈಹಿಕವಾಗಿ ಅನಾರೋಗ್ಯಕ್ಕಿಡಾಗುತ್ತಿದ್ದಾರೆ. ಡಬ್ಲೂಚ್‌ಒ ವರದಿಯಂತೆ ಮುಂದಿನ 5 ವರ್ಷಗಳಲ್ಲಿ ಭಾರತದ ಶೇ.37ರಷ್ಟು ಯುವಜನರು ಕಣ್ಣಿನ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next