ನವದೆಹಲಿ:ಮಹಾರಾಷ್ಟ್ರದಲ್ಲಿ ಶೇ.70ರಷ್ಟು ಜನರಿಗೆ ಲಸಿಕೆ ನೀಡದೆ ವಾಣಿಜ್ಯ ನಗರಿ ಮುಂಬಯಿಯಲ್ಲಿ ಲಾಕ್ ಡೌನ್ ಸಡಿಲಿಸಬಾರದು ಎಂದು ರಾಜ್ಯ ಕೋವಿಡ್ 19 ಟಾಸ್ಕ್ ಫೋರ್ಸ್ ಸಲಹೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮೂರನೇ ಅಲೆಯಿಂದ ತಪ್ಪಿಸಲಾಗದು, 6 ರಿಂದ 8 ವಾರದೊಳಗೆ ಅಪ್ಪಳಿಸುವ ಸಾಧ್ಯತೆ: ಏಮ್ಸ್ ಮುಖ್ಯಸ್ಥ
ರಾಜ್ಯದ ಕೋವಿಡ್ 19 ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಡಾ.ಶಶಾಂಕ್ ಜೋಶಿ ಇಂಡಿಯಾ ಟುಡೇ ಟಿವಿಗೆ ನೀಡಿದ ಸಂದರ್ಶನದಲ್ಲಿ, ರಾಜ್ಯದ ಶೇ.70 ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆ ಪಡೆಯದೇ ವಾಣಿಜ್ಯ ನಗರಿ ಮುಂಬಯಿಯಲ್ಲಿ ಲಾಕ್ ಡೌನ್ ತೆರವುಗೊಳಿಸಬಾರದು ಎಂದು ತಿಳಿಸಿದ್ದಾರೆ.
ಅಲ್ಲದೇ ಸ್ಥಳೀಯ ರೈಲು ಸಂಚಾರ ಯಾವಾಗ ಆರಂಭಿಸಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಜೋಶಿ ಅವರು, ಸ್ಥಳೀಯ ರೈಲುಗಳ ಸಂಚಾರದ ಬಗ್ಗೆ ನಾವು ಈಗ ಆಲೋಚಿಸಬಾರದು, ಯಾಕೆಂದರೆ ನಾವು ಇನ್ನೂ ಅಪಾಯದ ಪರಿಸ್ಥಿತಿಯಿಂದ ಹೊರಬಂದಿಲ್ಲ. ಈ ನಿಟ್ಟಿನಲ್ಲಿ ನಾವು ಮತ್ತೆ ಅದೇ ತಪ್ಪನ್ನು ಮಾಡಲು ಹೋಗಬಾರದು. ಈಗಾಗಲೇ ಒಂದು ಮತ್ತು ಎರಡನೇ ಕೋವಿಡ್ ಅಲೆಯ ಬಿಕ್ಕಟ್ಟಿನಲ್ಲಿದ್ದು, ಶೀಘ್ರವೇ ಮೂರನೇ ಅಲೆ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಒಂದು ವೇಳೆ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸದೇ ನಿರ್ಲಕ್ಷ್ಯ ತೋರಿದರೆ ರಾಜ್ಯದಲ್ಲಿ ಮೂರನೇ ಕೋವಿಡ್ ಅಲೆ ಎದುರಿಸಬೇಕಾದ ಸಾಧ್ಯತೆ ಇದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಎಚ್ಚರಿಸಿದ್ದಾರೆ ಎಂದು ವರದಿ ತಿಳಿಸಿದೆ.