Advertisement

ಯಾರನ್ನೂ ಬದಲಾಯಿಸಲು ಪ್ರಯತ್ನಿಸಬೇಡಿ

11:42 PM Mar 15, 2021 | Team Udayavani |

ನಮಗೆ ಶತ್ರುಗಳು ಹೆಚ್ಚಾಗ ಬೇಕೆ? ಹಾಗಾದರೆ ಈ ಒಂದು ಸಣ್ಣ ಕೆಲಸವನ್ನು ಮಾಡಿಬಿಡಿ. ಅವರು ಮಾಡುತ್ತಿರುವ ತಪ್ಪುಗಳನ್ನು ಅವರಿಗೆ ತೋರಿಸಿ ಸಾಕು. ಓರ್ವ ವ್ಯಕ್ತಿ ಯನ್ನು ನೀವು ಕರೆದು ಆತನ ತಪ್ಪುಗಳನ್ನು ಸ್ವಲ್ಪ ಖಾರವಾಗಿ ಹೇಳಿ. ತತ್‌ಕ್ಷಣವೇ ಆ ವ್ಯಕ್ತಿಗೆ ನೀವು ಶತ್ರುವಿನಂತೆ ಕಾಣಿಸುತ್ತೀರಿ. ಇದುವೇ ಇಂದಿನ ಹೆಚ್ಚಿನ ಜನರ ಮನಃಸ್ಥಿತಿ, ಸಮಾಜದ ದುಸ್ಥಿತಿ.

Advertisement

ಇದು ಮಾನವ ಸಹಜ ಗುಣ ಎಂದು ಇದನ್ನು ಅಲ್ಲಿಗೆ ಮರೆತುಬಿಡುವುದು ನಿಮ್ಮ ಹಿತದೃಷ್ಟಿಯಿಂದ ಒಳ್ಳೆಯದು. ಆತ ನೀವೂ ಆತನನ್ನು ದ್ವೇಷಿಸಲಾರಂಭಿಸಿದಿರಿ ಎಂದರೆ ಅದು ನಿಮ್ಮ ಮೇಲೂ ನಕಾರಾತ್ಮಕ ಪರಿಣಾಮ ಬೀರಬಲ್ಲುದು. ಇಂತಹ ವಿಚಾರಗಳಲ್ಲಿ ಇತ್ತಂಡಗಳೂ ಜಾಣ ನಡೆ ಅನುಸರಿಸುವುದೇ ಲೇಸು.

ನೆನಪಿಡಿ, ದುಡಿಮೆ ಯಾವ ವ್ಯಕ್ತಿ ಯನ್ನು ಮೋಸಗೊಳಿಸುವುದಿಲ್ಲ. ಆದರೆ ವ್ಯಕ್ತಿಯೇ ದುಡಿಮೆಗೆ ಮೋಸ ಮಾಡು ತ್ತಾನೆ. ಸಮಾಜದಲ್ಲಿ ನಾನು ಎಲ್ಲವನ್ನು ಸರಿ ಮಾಡುತ್ತೇನೆ, ಎಲ್ಲರನ್ನು ಸರಿದಾರಿಯಲ್ಲಿ ನಡೆಸುತ್ತೇನೆ ಎಂದು ಶಪಥ ಮಾಡುವುದು ಮೂರ್ಖತನವೇ ಸರಿ.

ಅಡ್ಡದಾರಿಯಲ್ಲಿರುವ ಅಥವಾ ತಪ್ಪು ಮಾಡುತ್ತಿರುವ ವ್ಯಕ್ತಿಗೆ ಒಂದು ಅಥವಾ ಎರಡು ಹೆಚ್ಚೆಂದರೆ ಮೂರು ಬಾರಿ ತಿಳಿ ಹೇಳಲು ಪ್ರಯತ್ನಿಸಬೇಕು. ಇಷ್ಟಾದ ಮೇಲೂ ಆತ ಬದಲಾಗಲಿಲ್ಲವೇ, ಆತ ನನ್ನು ಹಾಗೆಯೇ ಬಿಟ್ಟು ಬಿಡಬೇಕು. ಜೀವ ನವೇ ಅಂಥವರಿಗೆ ಸೂಕ್ತ ಸಮಯ ದಲ್ಲಿ ಮರೆಯಲಾಗದ ಪಾಠವೊಂದನ್ನು ಕಲಿಸುತ್ತದೆ. ಏಕೆಂದರೆ ಮನುಷ್ಯ ನಿಗೆ ಜೀವನ, ಸಮಯ ಶ್ರೇಷ್ಠ ಗುರುಗಳು. ಇದರ ಮುಂದೆ ಉಳಿದೆಲ್ಲವೂ ಗೌಣ.

ಎಷ್ಟೋ ಜನರು ತಮಗೆ ಸೂಕ್ತ ಮಾರ್ಗ ದರ್ಶನ ಮಾಡುವವರು, ತಪ್ಪು ಮಾಡಿ ದಾಗ ತಿದ್ದಲು ಯಾರೂ ಇಲ್ಲವೆಂದು ಕೊರಗುತ್ತಿರುತ್ತಾರೆ. ಅಂಥದ್ದರಲ್ಲಿ ಇದ್ದ ದ್ದನ್ನು ಇದ್ದ ಹಾಗೆ ಹೇಳಿದರೆ ಆಜನ್ಮ ಶತ್ರುವಿನಂತೆ ಕಾಣುವುದೇಕೆ? ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ಅದ ಕ್ಕಾಗಿ ನೀವು ಪಶ್ಚಾತ್ತಾಪ ಪಡುವ ಅಗತ್ಯ ವಿಲ್ಲ. ಹಾಗೆಂದು ಇದನ್ನು ದೊಡ್ಡ ವಿಷ ಯವಾಗಿಸಿ ಆತನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರವೂ ಸಲ್ಲದು.

Advertisement

ಬೇರೆಯವರನ್ನು ಬದಲಾಯಿಸಲು ಹೊರಟರೆ ನಮ್ಮ ಮನಸ್ಸಿನ ನೆಮ್ಮದಿ, ಶಾಂತಿ, ಆರೋಗ್ಯ ಹಾಳಾಗುತ್ತದೆ. ಒಮ್ಮೆ ಹೇಳಿದರೆ ಅರ್ಥಮಾಡಿಕೊಂಡು ಅನು ಸರಿಸುವವರನ್ನು ಕಂಡರೆ ನಮಗೆ ತಿಳಿ ಹೇಳುವುದಕ್ಕೂ ಸಂತೋಷವಾಗುತ್ತದೆ, ಹೇಳಿದ ಮಾತಿಗೂ ತೂಕವಿರುತ್ತದೆ. ಆದರೆ ನಾವು ಅವರ ತಪ್ಪನ್ನು ಹೇಳಿದ ತತ್‌ಕ್ಷಣ ಹಿಂದು ಮುಂದು ಯೋಚಿಸದೆ ತತ್‌ಕ್ಷಣವೇ ಮರು ಉತ್ತರ ನೀಡುವುದು, ಅಗೌರವ ಸಲ್ಲಿಸುವುದು, ಉಡಾಫೆತನ ಪ್ರದರ್ಶಿಸುವುದು, ನನಗೆ ಎಲ್ಲ ಗೊತ್ತಿದೆ, ಇವನು ಏನು ಹೇಳುವುದು? ಎನ್ನುವ ವರನ್ನು ನಮ್ಮಿಂದ ಆದಷ್ಟು ದೂರದಲ್ಲಿ ಇಟ್ಟರೆ ನಮಗೆ ಒಳ್ಳೆಯದು. ಗಂಧದ ಜತೆ ಗುದ್ದಾಡಿದರೆ ಸುವಾಸನೆ ಬರುತ್ತದೆ.

ಆದರೆ ಹೊಲಸಿನ ಜತೆ ಗುದ್ದಾಡಿದರೆ ದುರ್ವಾಸನೆ ಬರುತ್ತದೆ ಅಲ್ಲವೇ?
ನಮ್ಮ ಮಾನಸಿಕ ನೆಮ್ಮದಿ, ಭವಿಷ್ಯ, ಉತ್ತಮ ಆರೋಗ್ಯದ ದೃಷ್ಟಿಯಿಂದ ಬೇರೆಯವರನ್ನು ಬದಲಾಯಿಸಲು ಪ್ರಯತ್ನಿಸದಿರುವುದೇ ತುಂಬಾ ಒಳ್ಳೆ ಯದು. ಅದರಲ್ಲೂ ನಾನೇ ಸರ್ವೋ ತ್ತಮ, ನಾನು ಮಾಡುತ್ತಿರುವುದೆಲ್ಲವೂ ಸರಿ ಎಂಬ ಪಿತ್ತ ನೆತ್ತಿಗೇರಿರುವವರ ಹತ್ತಿರ ಸುಳಿಯದಿರುವುದೇ ಇನ್ನೂ ಒಳ್ಳೆಯದು. ಏಕೆಂದರೆ ಪಿತ್ತ ಆರೋಗ್ಯಕ್ಕೆ ಮಾರಕವೇ ಹೊರತು ಪೂರಕ ಅಲ್ಲವೇ ಅಲ್ಲ.

ನಾವು ಉತ್ತಮ ರೀತಿಯಲ್ಲಿ ಬದಲಾ ಗುತ್ತಾ ಹೋಗೋಣ. ಬದಲಾಗುವ ಮನಸ್ಸಿರುವವರು ನಮ್ಮನ್ನು ನೋಡಿ ಬದಲಾಗುತ್ತಾರೆ, ನಮ್ಮನ್ನು ಅನುಸರಿಸು ತ್ತಾರೆ. ಬದಲಾಗುವ ಮನಸ್ಸಿಲ್ಲದವರು ನಿಂತಲ್ಲೇ ನಿಂತಿರುತ್ತಾರೆ. ಬದಲಾವಣೆ ಜಗದ ನಿಯಮ. ಜಗತ್ತೇ ಬದಲಾಗುತ್ತಿದೆ, ನೀವು ಬದಲಾಗುವುದಿಲ್ಲವೇ?

– ಪ್ರಶಾಂತ್‌ ಕುಮಾರ್‌ ಎ. ಪಿ. ತುಮಕೂರು.

Advertisement

Udayavani is now on Telegram. Click here to join our channel and stay updated with the latest news.

Next