ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸಂಕಷ್ಟದ ವೇಳೆ ಬೀದಿ ಬದಿ ವ್ಯಾಪಾರಿಗಳಿಗೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಸ್ವನಿಧಿ ಸಾಲ ಸೌಲಭ್ಯ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಅಪರ ಜಿಲ್ಲಾಧಿಕಾರಿ ಡಾ| ಕೆ.ಆರ್.ದುರುಗೇಶ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಯೋಜನೆಗಳ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ನಗರ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಪಂ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳ ಉತ್ತೇಜನ ನೀಡುವ ಸಲುವಾಗಿ ಜಾರಿಗೊಳಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುರುತಿನ ಚೀಟಿ ಪಡೆದವರಿಗೆ ಸಾಲ ನೀಡಲು ಅಗತ್ಯ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.
ಡಿಜಿಟಲ್ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಪ್ರತಿ ತಿಂಗಳು 50ರಿಂದ 100 ರೂ. ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಹೀಗಾಗಿ ಹೆಚ್ಚಿನ ಮಟ್ಟದಲ್ಲಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ಮಾಡುವಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಅಲ್ಲದೇ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವುದರಲ್ಲಿ ಜಿಲ್ಲೆಗೆ ಉತ್ತಮ ಸ್ಥಾನ ಬರುವಂತೆ ಮಾಡಬೇಕು ಎಂದರು.
ಡೇ-ನಲ್ಮ್ ಯೋಜನೆಯಡಿ ನಗರದ ಬಡಜನರ ಜೀವನೋಪಾಯಕ್ಕಾಗಿ ಸಾಲ ಸೌಲಭ್ಯ ನೀಡಲಾಗುವುದು. ಫಲಾನುಭವಿಗಳು ಪದೇ ಪದೇ ಬ್ಯಾಂಕ್‌ಗಳಿಗೆ ಅಲೆದಾಡದಂತೆ ತ್ವರಿತವಾಗಿ ಸಾಲ ಮಂಜೂರು ಮಾಡಬೇಕು. ಬ್ಯಾಂಕ್‌ಗಳು ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ತ್ವರಿತವಾಗಿ ಸಾಲ ನೀಡಿದ್ದಲ್ಲಿ ನಿರುದ್ಯೋಗಿ ಯುವಸಮೂಹ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಸಹಕಾರಿ ಆಗಲಿದೆ ಎಂದರು.
ಬ್ಯಾಂಕ್ ಅಧಿಕಾರಿಗಳು ಸರ್ಕಾರದ ಯೋಜನೆಗಳ ಅನುಷ್ಠಾನದ ವೇಳೆ ಆಯ್ಕೆಯಾದ ಎಲ್ಲ ಅರ್ಹ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು. ಇದರಿಂದ ಸರ್ಕಾರ ರೂಪಿಸುವ ಸಾಲ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಸುರೇಂದ್ರ ಬಾಬು, ನಗರಸಭೆ ಪೌರಾಯುಕ್ತ ಗುರುಲಿಂಗಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಬಾಬು ಬಳಗಾನೂರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅರುಣ್ ಕುಮಾರ್, ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ, ದೇವದುರ್ಗ ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟಿಮನಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.