ಈ ಸೃಷ್ಟಿಯಲ್ಲಿ ಮಾನವ ಶರೀರ ಉಳಿದೆಲ್ಲ ಜೀವ ಸಂಕುಲಗಳಿಗಿಂತ ಭಿನ್ನ ಮತ್ತು ಶ್ರೇಷ್ಠವಾಗಿದೆ. ಈ ಮಾನವ ಜನ್ಮ ಬರಬೇಕಾದರೆ ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿರಬೇಕು. ಹೀಗೆ ಹಿಂದಿನ ಜನ್ಮದ ಪುಣ್ಯಫಲದಿಂದ ಬಂದಂತಹ ಈ ಮಾನವನ ಜನ್ಮವನ್ನು ವ್ಯರ್ಥವಾಗಿ ಹಾಳು ಮಾಡದೆ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು.
ಜೀವನದಲ್ಲಿ ಸುಖ-ಕಷ್ಟ ಎರಡು ಇರಬೇಕು. ಕೇವಲ ಸುಖವೇ ಇದ್ದರೆ ಕಷ್ಟದ ಅರಿವು ಗೊತ್ತಾಗದು. ಜೀವನ ದುದ್ದಕ್ಕೂ ಕಷ್ಟವೇ ಇದ್ದರೂ ಮಾನವ ಜೀವನ ಸಾರ್ಥಕ ಎನಿಸದು. ಸುಖ- ಕಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಧರ್ಮವಿರಬೇಕು. ಸುಖ- ಕಷ್ಟಗಳು ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ ಇರುತ್ತವೆ. ಕಷ್ಟಗಳು ಮಾನವನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಎಂದು ಹೇಳುವ ವಾಡಿಕೆ ಇದೆ. ಮುಖ್ಯವಾಗಿ ಮಾನವನಿಗೆ ವಿಪರೀತ ಸಾಲದ ಹೊರೆ, ಮಾನಸಿಕ ಖನ್ನತೆ, ಬಡತನ, ಪರೀಕ್ಷೆಯಲ್ಲಿ ಅನುತ್ತೀರ್ಣ, ಉತ್ತೀರ್ಣನಾದರೂ ಉತ್ತಮ ಅಂಕಗಳನ್ನು ಪಡೆಯಲಿಲ್ಲವೆಂಬ ಬೇಸರ, ವಿವಾಹವಾಗದಿರುವುದು, ಸಂತಾನಭಾಗ್ಯ ಇಲ್ಲದಿರುವುದು, ವಾಸಿ
ಯಾಗದ ಕಾಯಿಲೆ, ಪ್ರೀತಿ ಪ್ರೇಮವೆಂಬ ನಾಟಕ, ವಿಪರೀತ ದುಶ್ಚಟಗಳ ಅಭ್ಯಾಸ, ವಿದ್ಯಾವಂತನಾದರೂ ನಿರುದ್ಯೋಗಿ ಯಾಗಿರುವುದು, ವ್ಯಾಪಾರದಲ್ಲಿ ನಷ್ಟ… ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ.
ಇಂತಹ ಸಮಸ್ಯೆಗಳು ಎದುರಾದಾಗ ನಾವು ಚಿಂತೆ ಮಾಡುವುದು ಸಹಜ. ಚಿಂತೆ ಮತ್ತು ಚಿತೆಗೆ ಕೇವಲ ಸೊನ್ನೆ ಮಾತ್ರ ವ್ಯತ್ಯಾಸ. ಚಿಂತೆ ಮನುಷ್ಯನನ್ನು ಜೀವಂತ ಸುಟ್ಟರೆ ಚಿತೆಯು ಮರಣದ ಅನಂತರ ಸುಡುತ್ತದೆ. ಆದ್ದರಿಂದ ಚಿಂತೆಯನ್ನು ಬಿಟ್ಟು ಸಂತೋಷದಲ್ಲಿ ಇರಬೇಕು. ಭೂತ ಮತ್ತು ಭವಿಷ್ಯತ್ ಕಾಲದ ಚಿಂತೆ ಬಿಟ್ಟು ವರ್ತಮಾನ ಕಾಲದ ಬಗೆಗೆ ಯೋಚಿಸ ಬೇಕು. ನಾವು ಋಣಾತ್ಮಕ ಭಾವನೆಯನ್ನು ಬಿಟ್ಟು ಧನಾತ್ಮಕ ನಿಲುವು ತಳೆಯಬೇಕು. ಇಂತಹ ಸಮಸ್ಯೆಗಳು ಎದುರಾದಾಗ ಪರಿಹಾರ ಇದ್ದೇ ಇರುತ್ತದೆ ಎಂಬುದನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ಈ ಜೀವನದಲ್ಲಿ ಸಮಸ್ಯೆಗಳಿಲ್ಲದ ಮಾನವ ಮಾನವನೇ ಅಲ್ಲ. ಸಮಸ್ಯೆಗಳು ಬಡವರಿಗೂ ಶ್ರೀಮಂತರಿಗೂ ಎಲ್ಲರಿಗೂ ಇರುತ್ತವೆ. ಆದರೆ ಅದರ ಹಿಂದೆ ಪರಿಹಾರವೂ ಇದೆ. ಬೀಗಕ್ಕೆ ಕೀಲಿಕೈ ಇಲ್ಲದೆ ಬೀಗ ತಯಾರಿಸುವುದಿಲ್ಲ. ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ. ಸಮಸ್ಯೆಯಿಂದ ನಾನು ಖಂಡಿತಾ ಪಾರಾಗುತ್ತೇನೆ ಎಂಬ ದೃಢ ನಿರ್ಧಾರ ತಾಳಬೇಕು. ದೇವರು ನಮಗೆ ಈ ಸುಂದರ ಶರೀರವನ್ನು ಕೊಟ್ಟಿ ರುತ್ತಾರೆ. ಇಂತಹ ದೇಹವನ್ನು ಕ್ಷಣಮಾತ್ರ ದಲ್ಲಿ ಹಿಂದೆ ಮುಂದೆ ಯೋಚಿಸದೆ ನಾಶ ಮಾಡಿಕೊಳ್ಳಬಾರದು. ನಮ್ಮ ದೇಹವನ್ನು ನಾಶ ಮಾಡಿಕೊಳ್ಳುವ ಹಕ್ಕು ನಮಗಿಲ್ಲ. ನಮ್ಮನ್ನು ನಂಬಿ ಬಾಳುವಂತಹ ನಮ್ಮ ಸಂಸಾರವಿದೆ ಎಂಬುದನ್ನು ಎಂದಿಗೂ ಮರೆಯದೆ ಈ ಸಮಸ್ಯೆಯಿಂದ ಪಾರಾ ಗುವ ಚಾಣಾಕ್ಷತೆ ತೋರಬೇಕು.
ಇಂತಹ ಸಮಸ್ಯೆಗಳಿಂದ ಬರುವ ಚಿಂತೆ ಯನ್ನು ಮನೆ ಮಂದಿಯಲ್ಲಿ, ಬಂಧುಗಳಲ್ಲಿ, ಮಿತ್ರರಲ್ಲಿ ಹೇಳಿಕೊಳ್ಳಬಹುದು. ಅದನ್ನು ನಮ್ಮೊಳಗೆ ಇಟ್ಟುಕೊಂಡರೆ ಮರಿ ಇಟ್ಟು ಬೆಳೆದು ದೊಡ್ಡ ಸಮಸ್ಯೆ ಹುಟ್ಟುವುದು. ಇನ್ನೊಬ್ಬರಲ್ಲಿ ಹೇಳುವುದ ರಿಂದ ಮನಸ್ಸು ಹಗುರವಾಗುವುದು. ಮನಸ್ಸು ಪರಿವರ್ತನೆ ಆಗುವುದು ಜೀವನದಲ್ಲಿ ಒಳ್ಳೆಯ ಪತಿ, ಪತ್ನಿ ಒಳ್ಳೆಯ ಗೆಳೆಯ, ಒಳ್ಳೆಯ ಪುಸ್ತಕ ಸಿಗುವುದೇ ಭಾಗ್ಯವಂತೆ. ಏನೇ ಇದ್ದರೂ ಇವರಲ್ಲಿ ತಿಳಿಸಬೇಕು. ಒಳ್ಳೆಯ ಪುಸ್ತಕ ಓದಬೇಕು. ಏನು ಸಮಸ್ಯೆ ಬಂದರೂ ಧೈರ್ಯದಿಂದ ಎದುರಿಸಿದರೆ ದೊಡ್ಡ ಪರ್ವತದ ಹಾಗಿರುವ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಏನೇ ಹೇಳಲಿ ಜೀವನದಲ್ಲಿ ನಗುನಗುತ್ತಾ ಜೀವನ ನಡೆಸಬೇಕು.
“ಮಕ್ಕಳಾಟವು ಚೆಂದ ಮತ್ತೆ ಯೌವನ ಚೆಂದ ಮುಪ್ಪಿನಲ್ಲಿ ಚೆಂದ ನೆರೆಗಡ್ಡ, ಜಗದೊಳಗೆ ಎತ್ತ ನೋಡಿದರೂ ನಗು ಚೆಂದ. ಯಾವ ಯಾವ ಕಾಲಕ್ಕೆ ಯಾವುದು ಚೆಂದ ಹಾಗೂ ಜಗತ್ತಿನಲ್ಲಿ ನಗುನಗುತ ಇರುವುದೇ ಚೆಂದ’ ಎಂಬ ಜಾನಪದ ಗೀತೆಯ ಸಾಲುಗಳು ಮಾನವ ತನ್ನ ಜೀವನವನ್ನು ಹೇಗೆ ನಡೆಸಬೇಕು ಎಂದು ಸರಳವಾಗಿ ವಿವರಿಸಲಾಗಿದೆ. ಯಾವುದೇ ಸಮಸ್ಯೆ ಎದುರಾದರೆ ಅದಕ್ಕಾಗಿ ಚಿಂತಿಸದೆ ಅದರಿಂದ ಪಾರಾಗುವ ದಾರಿಯನ್ನು ಕಂಡುಕೊಂಡಲ್ಲಿ ಸಹಜವಾಗಿಯೇ ನಮ್ಮ ಮೊಗದಲ್ಲಿ ನಗು ಮತ್ತು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ.
-ದೇವರಾಜ ರಾವ್, ಮಟ್ಟು , ಕಟಪಾಡಿ