Advertisement

ಹೆಣ್ಣುಮಕ್ಕಳ ಶಿಕ್ಷಣ ಹಾಳು ಮಾಡಬೇಡಿ: ಎಚ್.ಡಿ.ಕುಮಾರಸ್ವಾಮಿ

06:39 PM Mar 17, 2022 | Team Udayavani |

ಬೆಂಗಳೂರು: ಹಿಜಾಬ್ ಅಥವಾ ಬೇರೆ ಯಾವುದೇ ವಿಷಯಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಹೇಳಿದ್ದಾರೆ.

Advertisement

ವಿಧಾನಸೌಧ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ವಿವಿಧ ಬಗೆಯ ಶಾಲಾ ಸಮವಸ್ತ್ರಗಳ  ಫೋಟೋಗಳನ್ನು ಪ್ರದರ್ಶನ ಮಾಡಿ,

ಒಬ್ಬ ಹೆಣ್ಣು ಮಗು ಕಲಿತರೆ ಆ ಕುಟುಂಬಕ್ಕೆ ಬೆಳಕು ಬಂದಂತೆ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅವರು ಪ್ರತಿಪಾದಿಸಿದರು.

ನ್ಯಾಯಾಲಯದ ತೀರ್ಪು ಬಂದಿದೆ. ತೀರ್ಪು ಪಾಲನೆ ಎಲ್ಲರ ಕರ್ತವ್ಯ. ಇನ್ನಾದರೂ ಸರಕಾರ ತಾಯಿ ಹೃದಯದಿಂದ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಉದಾತ್ತವಾಗಿ ಹೆಜ್ಜೆ ಇಡಬೇಕು. ಮಕ್ಕಳ‌ ಹಾಲಿನಂತಹ ಮನಸ್ಸನ್ನ ಒಡೆಯಬಾರದು ಎಂದರು.

ಹಾಗೆಯೇ; ರಾಜಕೀಯ ಉದೇಶದಿಂದ ಮುಂಚೂಣಿಗೆ ಬಂದ ಈ ಎಲ್ಲ ಅನಪೇಕ್ಷಿತ ವಿವಾದಗಳಿಂದ ಮಕ್ಕಳಿಗೆ ಅನ್ಯಾಯ ಆಗಿದೆ. ನಿಜಕ್ಕೂ ಅವರೇ ಬಲಿಪಶುಗಳು.  ಇದನ್ನು ಸರಕಾರವಾಗಲಿ ಅಥವಾ ಮಕ್ಕಳು, ಪೋಷಕರು ಲಘುವಾಗಿ ಪರಿಗಣಿಸಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

Advertisement

ಸದನದಲ್ಲಿ ಚರ್ಚೆಗೆ ಕಾಯುತ್ತಿದ್ದೇನೆ

ಈಗಾಗಲೇ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಲು  ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೇನೆ. ಸಭಾಧ್ಯಕ್ಷರು ಇವತ್ತು ಅವಕಾಶ ಕೊಡುತ್ತಾರೋ, ನಾಳೆ ಕೊಡುತ್ತಾರೋ ಎಂದು ಕಾಯುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾಣದ ಕೈಗಳು ಯಾವು?

ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ‌ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಘಟನೆಗಳು ನಡೆಯುತ್ತಿವೆ. ನ್ಯಾಯಾಲಯವೇ ಈ ಘಟನೆಗಳ ಹಿಂದೆ ಕಾಣದ ಕೈಗಳು ಇವೆ ಎಂದು ಹೇಳಿದೆ. ಆ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು ಹಾಗೂ ಸರಕಾರವು ಕಾಣದ ಆ ಕೈಗಳ ಹೆಸರುಗಳನ್ನು ಬಹಿರಂಗಪಡಿಸಬೇಕು ಎಂದು ಇದೇ ವೇಳೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ಒತ್ತಾಯ ಮಾಡಿದರು.

ನಾನು ಸರಕಾರ ಮತ್ತು ಮುಸ್ಲಿಂ ಬಾಂಧವರನ್ನು ವಿನಂತಿ ಮಾಡುತ್ತೇನೆ. ಯಾವ ರಾಜಕೀಯ ಪಕ್ಷವೂ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಆಟ ಆಡುವುದು ಬೇಡ. ಅದರಲ್ಲೂ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ‌ ಬಹುಮುಖ್ಯ. ಆ ಸಮುದಾಯದಲ್ಲಿ ಬಡತನ ಜಾಸ್ತಿ ಇದ್ದು, ಅನಕ್ಷರತೆಯೂ ಇದೆ. ಸಾಕ್ಷರತೆ ಬಂದರೆ ಎಲ್ಲ ಸಮಸ್ಯೆಗಳಿಗೆ ತಾನಾಗಿಯೇ ಪರಿಹಾರ ಸಿಗುತ್ತದೆ. ನನ್ನ ಕಾಳಜಿ ಇಷ್ಟೇ ಎಂದು ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next