Advertisement

ಬಿ ಆರ್ ಟಿಎಸ್ ಬಾಕಿ ಸಂದಾಯ ಬೇಡ

08:39 AM Jun 07, 2020 | Suhan S |

ಧಾರವಾಡ: ಹು-ಧಾ ಬಿಆರ್‌ಟಿಎಸ್‌ ಯೋಜನೆ ಹಾಗೂ ಅಮೃತ ಯೋಜನೆಗಳ ಗುತ್ತಿಗೆದಾರರಿಗೆ ಬಾಕಿ ಹಣ ಸಂದಾಯ ಮಾಡದಂತೆ ಮುಖ್ಯಮಂತ್ರಿ, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕರು, ಪೌರಾಡಳಿತ ನಿರ್ದೇಶಕರು, ಲೋಕೋಪಯೋಗಿ ಸಚಿವರು ಸೇರಿ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಬಿಆರ್‌ಟಿಎಸ್‌ ಯೋಜನೆ, ಅಮೃತ ಯೋಜನೆ ಕಾಮಗಾರಿಗಳು ಪೂರ್ಣವಾಗಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೆಲಸವನ್ನೂ ಮಾಡುತ್ತಿಲ್ಲ. ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಹೀಗಾಗಿ ಕಾಮಗಾರಿಗಳ ಬಿಲ್‌ ತಡೆ ಹಿಡಿದು, ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು ಎಂದು ಆಗ್ರಹಿಸಿದರು.

ಕಿವಿಗೊಡದ ಅಧಿಕಾರಿಗಳು: ಜಿಲ್ಲೆಗೆ ಜಾರಿಯಾದ ಉತ್ತಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ಬಿಆರ್‌ಟಿಎಸ್‌ ಹಾಗೂ ಅಮೃತ ಯೋಜನೆ ಉತ್ತಮ ಉದಾಹರಣೆ ಆಗಿವೆ. ಬಿಆರ್‌ಟಿಎಸ್‌ನ ಅವೈಜ್ಞಾನಿಕ ಕಾಮಗಾರಿಯಿಂದ ಸ್ವಲ್ಪ ಮಳೆಯಾದರೂ ಟೋಲ್‌ನಾಕಾ ಸೇರಿದಂತೆ ಇತರ ಕಡೆಗಳಲ್ಲಿನ ರಸ್ತೆಗಳು ಜಲಾವೃತವಾಗುತ್ತವೆ. ಈ ಸಮಸ್ಯೆ ಪರಿಹರಿಸಲು ಮೂರು ವರ್ಷದಿಂದ ಹೇಳುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಬಾರಿ ಮಳೆಗಾಲದಲ್ಲೂ ಜನರ ಪರದಾಟ ತಪ್ಪಿದ್ದಲ್ಲ. ಸಮಸ್ಯೆ ಪರಿಹರಿಸಲು ಲಾಕ್‌ಡೌನ್‌ ಉತ್ತಮ ಸಂದರ್ಭವಾಗಿದೆ ಎಂದು ಅಧಿಕಾರಿಗಳೊಂದಿಗೆ ಮೂರು ಬಾರಿ ಸಭೆ ನಡೆಸಲಾಯಿತು. ಇಷ್ಟಾದರೂ ದಪ್ಪ ಚರ್ಮ ಹೊಂದಿದ ಅಧಿಕಾರಿಗಳು ಮಾತ್ರ ಕಿವಿಗೊಡದೆ ಜನರನ್ನು ಮತ್ತಷ್ಟು ಸಮಸ್ಯೆಗೆ ಸಿಲುಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಅಮೃತ ಕಳಪೆ: ಒಳಚರಂಡಿ ವ್ಯವಸ್ಥೆ ಕಲ್ಪಿಸುವ 178 ಕೋಟಿ ರೂ. ಮೊತ್ತದ ಅಮೃತ ಯೋಜನೆ ಕಾಮಗಾರಿ ಸಹ ನಡೆದಿದೆ. ಆದರೆ ಗುತ್ತಿಗೆದಾರರು ಅಗೆದ ರಸ್ತೆಯನ್ನು ಪುನಃ ಸ್ಥಾಪನೆ ಮಾಡುತ್ತಿಲ್ಲ. ಮನೆ ಮನೆಗಳಿಗೆ ಜೋಡಣೆ ಮಾಡುವ ಕೆಲಸವನ್ನೂ ಸರಿಯಾಗಿ ಮಾಡುತ್ತಿಲ್ಲ. ಎಲ್ಲವೂ ಕಳಪೆ ಮಟ್ಟದಲ್ಲಿ ನಡೆದಿದೆ. ಸಮಸ್ಯೆಗಳ ಪರಿಹಾರಕ್ಕೆ ಹಲವು ಬಾರಿ ಸೂಚಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ಈ ಎರಡೂ ಯೋಜನೆಗಳ ಬಿಲ್‌ ತಡೆ ಹಿಡಿಯುವಂತೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಧಾರವಾಡ ನಗರ ವ್ಯಾಪ್ತಿಯಲ್ಲಿ ಕೆಲ ವರ್ಷಗಳಿಂದ ನಡೆದಿರುವ ಟೆಂಡರ್‌ ಶ್ಯೂರ್‌ ರಸ್ತೆ ಕಾಮಗಾರಿಯನ್ನು ಆಗಸ್ಟ್‌ ಮೊದಲ ವಾರದಲ್ಲಿಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಪ್ರತಿ ರವಿವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು. ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಕಾರ್ಯ ಸಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಬರೆದಿರುವ ಪತ್ರವನ್ನೂ ಜನರಿಗೆ ಮುಟ್ಟಿಸುವ ಕಾರ್ಯ ಸಾಗಿದೆ ಎಂದು ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಶಿವಣ್ಣ ಬಡವಣ್ಣವರ, ಶಿವು ಹಿರೇಮಠ, ಮಂಜುಳಾ ಅಕ್ಕೂರ, ಯಲ್ಲಪ್ಪ ಅರವಾಳದ, ಮೋಹನ ರಾಮದುರ್ಗ ಇದ್ದರು.

ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದ್ದರೂ ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಹಕ್ಕು ನಮಗಿಲ್ಲ. ಬೇಕಿದ್ದರೆ ನಾವು ಹೋರಾಡಬಹುದಷ್ಟೆ. ಈ ಬಗ್ಗೆ ಸಿಎಂ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸುತ್ತೇನೆ. – ಅರವಿಂದ ಬೆಲ್ಲದ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next